ಶಿವಮೊಗ್ಗ: ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೇಶದಲ್ಲಿ ದ್ವೇಷದ ರಾಜಕಾರಣ ಜಾಸ್ತಿಯಾಗಿದೆ. ಇದರಿಂದ ಧರ್ಮ ಧರ್ಮಗಳ ನಡುವೆ ಸಂಘರ್ಷ ಉಂಟಾಗುತ್ತಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು.
ನಗರದ ಹೋಟೆಲ್ವೊಂದರಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧರ್ಮಗಳ ನಡುವೆ ಸಂಘರ್ಷ ಉಂಟಾಗುತ್ತಿರುವುದರಿಂದ ಜನರ ಮನಸು ಒಡೆದು ಹೋಗಿದೆ. ಇಂತಹ ಪರಿಸ್ಥಿತಿ ಕಳೆದ 8-10 ವರ್ಷಗಳಿಂದ ದೇಶದಲ್ಲಿ ನಡೆದುಕೊಂಡು ಬಂದಿದೆ ಎಂದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸುದ್ದಿಗೋಷ್ಠಿ ದೇಶದಲ್ಲಿ ಆರ್ಎಸ್ಎಸ್ ಕಾರ್ಯಕರ್ತರು ಕಾನೂನು ಕೈಗೆ ತೆಗೆದುಕೊಳ್ಳುತ್ತಿದ್ದಾರೆ. ನಿರಾಪರಾಧಿಗಳ ಮೇಲೆ ಸುಳ್ಳು ಕೇಸ್ ಹಾಕಲಾಗುತ್ತಿದೆ. ಧರ್ಮದ ಹಾಗೂ ಹೆಣದ ಮೇಲೆ ರಾಜಕಾರಣ ಮಾಡಲಾಗುತ್ತಿದೆ. ಪರೇಶ್ ಮೇಸ್ತಾ ಸಾವಿನ ಕುರಿತು ಬಿಜೆಪಿಯವರು ಅನುಮಾನ ವ್ಯಕ್ತಪಡಿಸಿದಾಗ ನಾನು ಅದನ್ನು ಸಿಬಿಐಗೆ ನೀಡಿದ್ದೆ. ಈಗ ವರದಿಯಲ್ಲಿ ಮೇಸ್ತಾ ಸಾವು ಆಕಸ್ಮಿಕ ಎಂದು ಹೇಳಿದೆ. ನಾನು ಸಿಬಿಐಗೆ ಕೊಟ್ಟಾಗ ಬಿಜೆಪಿಯವರೇ ಪಿಎಂ ಹಾಗೂ ಗೃಹ ಸಚಿವರಾಗಿದ್ದರು. ಈಗ ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ಒಂದೇ ಒಂದು ಕೇಸ್ ಅನ್ನು ಸಿಬಿಐಗೆ ವಹಿಸಿಲ್ಲ ಎಂದು ಕಿಡಿಕಾರಿದರು.
ಇದನ್ನೂ ಓದಿ:ನಾನು ಯಾರಿಂದಲೂ ಛೀ, ಥೂ ಎನಿಸಿಕೊಂಡು ಅಧಿಕಾರ ಮಾಡಲಿಲ್ಲ: ಸಿದ್ದರಾಮಯ್ಯ
ನಾವು ಅಧಿಕಾರದಲ್ಲಿದ್ದಾಗ ಸಿಬಿಐ ಅನ್ನು ಕಾಂಗ್ರೆಸ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ ಅನ್ನುತ್ತಿದ್ದರು. ಜೆಡಿಎಸ್ನವರು ಚೋರ್ ಬಚಾವ್ ಅನ್ನುತ್ತಿದ್ದರು. ಈಗ ಬಿಜೆಪಿ ಸರ್ಕಾರ ಅಧಿಕಾರದಲ್ಲಿದೆ, ಇದಕ್ಕೆ ನೀವೆನಾದರೂ ಹೇಳಿದ್ರೆ, ಆ ಹೆಸರು ನೀಡಬಹುದು ಎಂದು ಪತ್ರಕರ್ತರಿಗೆ ಪ್ರಶ್ನೆ ಮಾಡಿದರು.
ಶಿವಮೊಗ್ಗದಲ್ಲಿ ಗಲಾಟೆ ನಡೆಸುವವರು ಈಶ್ವರಪ್ಪ: ಶಿವಮೊಗ್ಗದಲ್ಲಿ ಇತ್ತಿಚೇಗೆ ನಡೆಯುತ್ತಿರುವ ಗಲಾಟೆಯನ್ನು ಈಶ್ವರಪ್ಪನವರೇ ಮಾಡಿಸುತ್ತಿದ್ದಾರೆ. ಅವರೇ ಜನರನ್ನ ಎತ್ತಿ ಕಟ್ಟುತ್ತಿದ್ದಾರೆ. ಇವರು ಹೆಣದ ಮೇಲೆ ರಾಜಕಾರಣ ಮಾಡುತ್ತಿದ್ದಾರೆ. ಅವರೇ ಮಂತ್ರಿಯಾಗಿ ಹೆಣ ಇಟ್ಟುಕೊಂಡು ಮೆರವಣಿಗೆ ನಡೆಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ:ನಮಗೆ ರಾಜಕೀಯ ಇಚ್ಛಾಶಕ್ತಿ ಇರುವುದರಿಂದ ಮೀಸಲಾತಿ ಹೆಚ್ಚಳ ಮಾಡಿದ್ದೇವೆ: ಸಚಿವ ಶ್ರೀರಾಮುಲು
ಶ್ರೀರಾಮುಲು ಒಬ್ಬ ದಡ್ಡ: ಸಚಿವ ಶ್ರೀರಾಮುಲು ಒಬ್ಬ ದಡ್ಡ. ಆತನಿಗೆ ಏನೂ ಗೂತ್ತಿಲ್ಲ. ಅವನಿಗೆ ಸಂವಿಧಾನ, ಮೀಸಲಾತಿ ಅಂದ್ರೆ ಏನೂ ಗೂತ್ತಿಲ್ಲ. ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ನಾಗಮೋಹನ್ ದಾಸ್ ವರದಿ ಜಾರಿ ಮಾಡುತ್ತೇವೆ ಎಂದು ರಕ್ತದಲ್ಲಿ ಬರೆದು ಕೊಡುತ್ತೇನೆ ಅಂದ್ರು, ಆದರೆ ಹಾಗೆ ಮಾಡಿದ್ರಾ? ಎಂದು ಪ್ರಶ್ನಿಸಿದರು.
ಎಲ್ಲಿ ಸ್ಪರ್ಧೆ ಮಾಡಬೇಕೆಂದು ನಿರ್ಧರಿಸಿಲ್ಲ: ಮುಂದಿನ ಚುನಾವಣೆಗೆ ಎಲ್ಲಿ ಸ್ಪರ್ಧೆ ಮಾಡಬೇಕೆಂದು ಇನ್ನೂ ಸ್ಪಷ್ಟವಾದ ನಿರ್ಧಾರ ಮಾಡಿಲ್ಲ. ಈ ತಿಂಗಳ ಅಂತ್ಯಕ್ಕೆ ತೀರ್ಮಾನ ಮಾಡಲಾಗುವುದು. ನನಗೆ ಎಲ್ಲಾ ಕಡೆ ಕರೆ ಬರುತ್ತಿದೆ. ಅದಷ್ಟು ಬೇಗ ತೀರ್ಮಾನ ಮಾಡುತ್ತೇನೆ ಎಂದರು.