ಶಿವಮೊಗ್ಗ : ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಾ. ಯತೀಂದ್ರ ಅವರು ವರ್ಗಾವಣೆಗೆ ಹಣ ಪಡೆಯುತ್ತಿದ್ದಾರೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಅವರು ಗಂಭೀರ ಆರೋಪ ಮಾಡಿದ್ದಾರೆ. ಜಿಲ್ಲಾ ಬಿಜೆಪಿ ಕಚೇರಿಯಲ್ಲಿಂದು ನಡೆದ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ನಮ್ಮ (ಬಿಜೆಪಿ) ಸರ್ಕಾರ ಇದ್ದಾಗ ಶೇ. 40 ರಷ್ಟು ಕಮಿಷನ್ ಹಣ ಪಡೆಯುತ್ತೇವೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಮೂಲಕ ಆರೋಪ ಮಾಡಿಸಿದ್ದಿರಿ. ಈಗ ನಿಮ್ಮದೆ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಈಗ ನೀವೇ ಹಾಲಿ ಅಥವಾ ನಿವೃತ್ತ ನಾಯ್ಯಾಧೀಶರ ನೇತೃತ್ವದಲ್ಲಿ ಒಂದು ತನಿಖಾ ಸಮಿತಿ ರಚನೆ ಮಾಡಿ, ಈ ಸಮಿತಿಯ ಮುಂದೆ ನಿಮಗೆ ಹಣ ನೀಡಿ ವರ್ಗಾವಣೆ ಮಾಡಿಸಿಕೊಂಡವರನ್ನು ತನಿಖಾ ಸಮಿತಿಯಿಂದ ಕರೆ ತಂದು ಹೇಳಿಸುತ್ತೇನೆ ಎಂದರು. ನನಗೆ ಹಣ ನೀಡಿದವರು ವಾಟ್ಸಪ್ನಲ್ಲಿ ಫೋನ್ ಮಾಡಿ, ಹಣ ನೀಡಿದ ಬಗ್ಗೆ ನನ್ನ ಜೊತೆ ಮಾತನಾಡಿದ್ದಾರೆ ಎಂದು ಹೇಳಿದರು.
ಸಿದ್ದರಾಮಯ್ಯನವರು ಚುನಾವಣೆಗೆ ಕುಕ್ಕರ್, ಐರನ್ ಬಾಕ್ಸ್ ಹಂಚಿದ್ದಾರೆ : ಸಿಎಂ ಸಿದ್ದರಾಮಯ್ಯನವರು ತಮ್ಮ ಕ್ಷೇತ್ರದಲ್ಲಿ ಚುನಾವಣೆ ಗೆಲ್ಲಲು ಕುಕ್ಕರ್ ಹಾಗೂ ಐರನ್ ಬಾಕ್ಸ್ ನೀಡಿದ್ದೇವೆ ಎಂದು ಆಶ್ರಯ ಸಮಿತಿ ಅಧ್ಯಕ್ಷ ಡಾ ಯತೀಂದ್ರ ಹೇಳಿದ್ದಾರೆ. ಇದರಿಂದ ಅವರ ವಿರುದ್ಧ ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ರಾಜ್ಯ ಮಡಿವಾಳರ ಸಂಘದ ಕಾರ್ಯಕ್ರಮದಲ್ಲಿ ಡಾ. ಯತೀಂದ್ರ ಅವರು ಮಾತನಾಡಿದ್ದಾರೆ. ಇದರಿಂದ ಇವರಿಬ್ಬರ ವಿರುದ್ಧ ಚುನಾವಣಾ ಆಯೋಗ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.
ನೀರು ಹರಿಸಲ್ಲ ಎಂದು ನೀರು ಹರಿಸುವ ಡಿ. ಕೆ ಶಿವಕುಮಾರ್ : ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಡಿ. ಕೆ ಶಿವಕುಮಾರ್ ರೈತರಿಗೆ ದ್ರೋಹ ಮಾಡಿದ್ದಾರೆ. ಇವರು ನೀರು ಬಿಡಲ್ಲ ಎನ್ನುತ್ತಾರೆ. ಆದರೆ ರಾತ್ರೋರಾತ್ರಿ ನೀರು ಬಿಡುತ್ತಾರೆ. ಕಾವೇರಿ ನೀರು ಪ್ರಾಧಿಕಾರದ ಮುಂದೆ ಹೋಗಿ ತಮ್ಮ ವಾದವನ್ನು ರಾಜ್ಯ ಸರ್ಕಾರ ಸರಿಯಾಗಿ ಮಾಡುತ್ತಿಲ್ಲ ಎಂಬ ಆರೋಪವನ್ನು ಮಾಡಿದರು.
ಮೂರು ಡಿಸಿಎಂ ವಿಚಾರ : ಮೂವರು ಡಿಸಿಎಂಗಳನ್ನು ನೇಮಕ ಮಾಡಬೇಕೆಂಬ ಕೂಗು ರಾಜ್ಯ ಸರ್ಕಾರದಲ್ಲಿ ಕೇಳಿ ಬಂದಿದೆ. ಸಿದ್ದರಾಮಯ್ಯನ ಬೆಂಬಲಿಗರು ಮೂರು ಡಿಸಿಎಂ ಬೇಡಿಕೆ ಇಟ್ಟಿದ್ದಾರೆ. ಇದಕ್ಕೆ ಡಿ. ಕೆ ಶಿವಕುಮಾರ್ ಅವರ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದ್ದಾರೆ. ಇದು ಕಾಂಗ್ರೆಸ್ನ ನೂರು ದಿನದ ಸಾಧನೆ. ಇವರಲ್ಲಿ ಹೊಂದಾಣಿಕೆ ಇಲ್ಲ ಎಂದು ಈಶ್ವರಪ್ಪ ಹೇಳಿದ್ರು.
ನಗರದ ಹೊರ ವಲಯ ಆಶ್ರಯ ಮನೆಗಳ ವಿಚಾರ: ಆಶ್ರಯ ಮನೆಗಳಿಗೆ ತಮ್ಮ ತಾಳಿ ಮಾರಾಟ ಮಾಡಿ ಹಣ ನೀಡಿದ್ದಾರೆ. ಆದರೆ ಆಶ್ರಯ ಮನೆಗಳಿಗೂ ಹಣ ಬಿಡುಗಡೆ ಮಾಡಿಲ್ಲ. ಸರ್ಕಾರ ಗ್ಯಾರಂಟಿಗಾಗಿ ಉಳಿದ ಯೋಜನೆಗಳಿಗೆ ಬ್ರೇಕ್ ಹಾಕಿದೆ ಎಂದು ಈಶ್ವರಪ್ಪ ಆರೋಪಿಸಿದರು.