ಶಿವಮೊಗ್ಗ: ಬ್ರಿಟಿಷರನ್ನು ದೇಶದಿಂದ ಹೊರ ಹಾಕಲು ಶಿಕ್ಷಿತರ ಸಂಖ್ಯೆ ಹೆಚ್ಚಿಸಬೇಕೆಂದು ಮಹಾತ್ಮ ಗಾಂಧೀಜಿ ಅವರು ಶಾಲೆಗಳನ್ನು ತೆರೆಯಬೇಕೆಂದು ನೀಡಿದ ಕರೆಯ ಮೇರೆಗೆ ಶಿವಮೊಗ್ಗದ ಸ್ವಾತಂತ್ರ್ಯ ಹೋರಾಟಗಾರರು ಸ್ಥಾಪಿಸಿದ್ದರು.
ಮಹಾತ್ಮ ಗಾಂಧೀಜಿ ಅವರ ಕರೆಗೆ ಶಿವಮೊಗ್ಗದ ಐದಾರು ತರುಣ ಸ್ವಾತಂತ್ರ್ಯ ಹೋರಾಟಗಾರರು ಶಿವಮೊಗ್ಗದ ಬಾಲರಾಜ ಅರಸ್ ರಸ್ತೆ(ರೈಲ್ವೆ ನಿಲ್ದಾಣ ರಸ್ತೆ)ಯಲ್ಲಿ ಮೊದಲು ಹೈಸ್ಕೂಲ್ನ್ನು ಪ್ರಾರಂಭಿಸಿದ್ದರು. ನಂತರ ಅಲ್ಲಿಂದ ಜಿಲ್ಲೆಯ ವಿವಿಧೆಡೆ ಶಾಲೆ, ಕಾಲೇಜುಗಳನ್ನು ತೆರೆದರು. ಅಲ್ಲಿಂದ ಈವರೆಗೂ ಗಾಂಧೀಜಿ ಅವರ ಆದರ್ಶ ತತ್ವಗಳ ಮೇಲೆಯೇ ಶಿಕ್ಷಣ ಸಮಿತಿ ನಡೆದುಕೊಂಡು ಬರುತ್ತಿರುವುದು ವಿಶೇಷ. ಗಿರಿಮಾಜಿ ಎನ್.ರಾಜಗೋಪಾಲ್, ನಾಗಪ್ಪಶ್ರೇಷ್ಟಿ, ರುದ್ರಪ್ಪ ಹೀಗೆ ಯುವಕರ ತಂಡ ರಾಷ್ಟ್ರೀಯ ಶಿಕ್ಷಣ ಸಮಿತಿಯನ್ನು ಹುಟ್ಟು ಹಾಕಿತು.
ಹೈಸ್ಕೂಲ್‌ನಿಂದ ಇಂಜಿನಿಯರಿಂಗ್ ಕಾಲೇಜು ತನಕ ಶಿಕ್ಷಣ:1946ರಲ್ಲಿ ಗಾಂಧೀಜಿಯವರ ಕರೆಯ ಮೇರೆಗೆ ಪ್ರಾರಂಭವಾದ ರಾಷ್ಟ್ರೀಯ ಶಿಕ್ಷಣ ಸಮಿತಿಯು ಮೊದಲು ರಾಷ್ಟ್ರೀಯ ಹೈಸ್ಕೂಲ್ ಪ್ರಾರಂಭಿಸಿತು. ನಂತರ ಜೆ.ಪಿ.ನಾರಾಯಣ್ ಹೈಸ್ಕೂಲ್ ಸೇರಿದಂತೆ ಹೀಗೆ ಜಿಲ್ಲೆಯ ವಿವಿಧೆಡೆ ಶಾಲೆಯನ್ನು ಪ್ರಾರಂಭಿಸಿತು. ಇದೀಗ ಪಿಯು, ಡಿಗ್ರಿ, ಪಾಲಿ ಟೆಕ್ನಿಕ್, ಫಾರ್ಮಸಿ, ಇಂಜಿನಿಯರಿಂಗ್ ಕಾಲೇಜು, ಐಸಿಎಸ್ ವಸತಿ ಶಾಲೆ ಕಾನೂನು ಕಾಲೇಜು ಸೇರಿ ಒಟ್ಟು 35 ಸಂಸ್ಥೆಗಳನ್ನು ರಾಷ್ಟ್ರೀಯ ಶಿಕ್ಷಣ ಸಮಿತಿ ಹೊಂದಿದೆ. ಈ ಎಲ್ಲಾ ಸಂಸ್ಥೆಯಲ್ಲಿ ಸುಮಾರು 17 ಸಾವಿರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.
75 ವರ್ಷ ಪೂರೈಸಿದ ರಾಷ್ಟ್ರೀಯ ಶಿಕ್ಷಣ ಸಮಿತಿ ಸುಮಾರು 1,300 ಜನಕ್ಕೆ ಉದ್ಯೋಗ ನೀಡಲಾಗಿದೆ. ಇವರ ಫಾರ್ಮಸಿ, ಕಾನೂನು ಕಾಲೇಜು ಹಾಗೂ ಇಂಜಿನಿಯರಿಂಗ್ ಕಾಲೇಜು ದೇಶದ ಪ್ರತಿಷ್ಠಿತ ಕಾಲೇಜುಗಳಾಗಿವೆ ಎಂದು ಎನ್ ಇ ಎಸ್ ನ ಕಾರ್ಯದರ್ಶಿ ಎಸ್.ಎನ್. ನಾಗರಾಜ್ ಹೇಳಿದರು.
ಅತ್ತ್ಯುತ್ತಮ ಶಿಕ್ಷಣದ ಧ್ಯೇಯ ಮುಂದುವರೆಸಿದ ಎನ್ಇಎಸ್:ಗಾಂಧೀಜಿ ಅವರ ಕರೆ ಇದ್ದದ್ದು ಭಾರತೀಯರನ್ನು ವಿದ್ಯಾವಂತರನ್ನಾಗಿಸುವುದಾಗಿತ್ತು. ಇದನ್ನು ಎನ್ಇಎಸ್ ಮುಂದುವರೆಸಿಕೊಂಡು ಹೋಗುತ್ತಿದೆ. ರಾಷ್ಟ್ರೀಯ ಶಿಕ್ಷಣ ಸಂಸ್ಥೆಯು ಹಣ ಗಳಿಕೆಯನ್ನು ಮಾಡದೆ, ಶಿಕ್ಷಣ ನೀಡುತ್ತಿದೆ. ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ರೀತಿಯ ಸೌಲಭ್ಯವನ್ನು ತಪ್ಪದೆ ನೀಡುತ್ತಿದೆ. ಇದು ಲ್ಯಾಬ್, ಮೈದಾನ ಎಲ್ಲವನ್ನು ಒಳಗೊಂಡಿದೆ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಮೈದಾನ ಹೊಂದಿರುವುದು ಸಂಸ್ಥೆಯ ಹೆಗ್ಗಳಿಕೆಯಾಗಿದೆ. ಈ ಸಂಸ್ಥೆಯು ಮೂಕ ಹಾಗೂ ಕಿವುಡರಿಗಾಗಿ ತರಂಗ ಎಂಬ ಶಾಲೆಯನ್ನು ನಡೆಸುತ್ತಿದೆ.
ದೇಶದ ಜೊತೆಗೆ ಎನ್ಇಎಸ್ ಸಹ ಅಮೃತ ಮಹೋತ್ಸವದ ಆಚರಣೆಯಲ್ಲಿದೆ:ದೇಶದ ಸ್ವಾತಂತ್ಯಕ್ಕೂ ಆರು ತಿಂಗಳ ಮುಂಚೆ ಪ್ರಾರಂಭವಾದ ಈ ಶಿಕ್ಷಣ ಸಂಸ್ಥೆಯು ಈಗ 75 ವರ್ಷ ಪೂರೈಸಿದೆ. ಈ ಹಿನ್ನೆಲೆಯಲ್ಲಿ ದೇಶದ ಜೊತೆಗೆ ಎನ್ಇಎಸ್ ಅಮೃತ ಮಹೋತ್ಸವ ಆಚರಣೆಯಲ್ಲಿದೆ. ಇದಕ್ಕಾಗಿ ಶಿಕ್ಷಣ ಸಮಿತಿಯು ವರ್ಷವಿಡಿ ಕಾರ್ಯಕ್ರಮ ಹಮ್ಮಿಕೊಂಡಿದೆ. ಇದಕ್ಕಾಗಿ ಪ್ರತಿ ತಿಂಗಳು ವಿದ್ಯಾರ್ಥಿಗಳಿಗೆ ವಿಶೇಷ ಉಪನ್ಯಾಸವನ್ನು ನಡೆಸಿಕೊಂಡು ಬರುತ್ತಿದೆ.
ಸುಧಾಮೂರ್ತಿ, ವೈ.ಎಸ್.ವಿ ದತ್ತ ಸೇರಿದಂತೆ ಅನೇಕ ಮಹನೀಯರನ್ನು ಕರೆಯಿಸಿ ಉಪನ್ಯಾಸ ನಡೆಸಲಾಗುತ್ತಿದೆ. ರ್ಯಾಂಕ್ ವಿದ್ಯಾರ್ಥಿಗಳೂಂದಿಗೆ ಸಂವಾದ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಇದೆಲ್ಲಾದರ ಜೊತೆಗೆ ಶಾಶ್ವತವಾದ ಯೋಜನೆ ಜಾರಿಗೆ ತರಲು ಯೋಚಿಸಿದೆ. ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ, ಸಚಿವ ಡಾ.ಅಶ್ವತ್ಥ್ ನಾರಾಯಣ, ಎಂಎಲ್ಸಿ ಡಿ.ಎಸ್.ಅರುಣ್ ಸೇರಿದಂತೆ ಅನೇಕ ರಾಜಕಾರಣಿಗಳು ಇದೇ ಸಂಸ್ಥೆಯ ವಿದ್ಯಾರ್ಥಿಗಳು. ಇದರ ಜೊತೆಗೆ ಹಾಲಿ ಆಂಧ್ರ ಪ್ರದೇಶದ ಸರ್ಕಾರದಲ್ಲಿ ಗೋವರ್ದನ್ ಅವರು ಎನ್ಇಎಸ್ನ ಜೆಎನ್ಸಿಸಿ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿ ಎಂದು ಹೇಳಲು ಹೆಮ್ಮೆ ಎಂದು ಸಂಸ್ಥೆಯ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್ ಅವರು ಹೇಳಿದರು.
ಸಂಸ್ಥೆಯ ಸಂಸ್ಥಾಪಕರಲ್ಲಿ ಒಬ್ಬರಾದ ನಾಗಪ್ಪ ಶ್ರೇಷ್ಠಿ ಅವರು ಅಗಲಿದ ಕಾರಣ ಸಂಸ್ಥೆಯ 50ರ ಆಚರಣೆ ಮಾಡುವಾಗ ಶ್ರೇಷ್ಠಿ ಅವರ ಕಂಚಿನ ಪುತ್ಥಳಿಯನ್ನು ನಿಲ್ಲಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ಸಮಿತಿಯು ಯಾವ ಧೈಯೋದ್ದೇಶದಿಂದ ಪ್ರಾರಂಭವಾಯಿತು. ಅದೇ ಉದ್ದೇಶದಿಂದ ಇಂದಿಗೂ ಸಂಸ್ಥೆ ನಡೆದುಕೊಂಡು ಹೋಗುತ್ತಿದೆ. ಮುಂದೆಯು ಸಹ ಅದೇ ಉದ್ದೇಶದಿಂದಲೇ ನಡೆಯುತ್ತದೆ ಎಂದು ನಾರಾಯಣ್ ತಿಳಿಸಿದರು.
ಇದನ್ನೂ ಓದಿ:G20 ಶೃಂಗಸಭೆ: ಗಮನ ಸೆಳೆದ ಯುಕೆ ಪ್ರಧಾನಿ ಸುನಕ್, ಪ್ರಧಾನಿ ಮೋದಿ ಭೇಟಿ