ಶಿವಮೊಗ್ಗ: ನಾನಾಗಲಿ, ನಮ್ಮ ಮನೆಯವರಾಗಲಿ ಮರಳು ಗಣಿಗಾರಿಕೆ ಮಾಡುವವರಿಂದ, ಮರಳು ಲಾರಿಯವರಿಂದ ಹಣ ಪಡೆದಿಲ್ಲ ಎಂದು ಧರ್ಮಸ್ಥಳದಲ್ಲಿ ಬಂದು ಪ್ರಮಾಣ ಮಾಡಲು ಸಿದ್ಧನಿದ್ದೇನೆ ಎನ್ನುವ ಮೂಲಕ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಸವಾಲನ್ನು ಶಾಸಕ ಹಾಲಪ್ಪ ಸ್ವೀಕರಿಸಿದ್ದಾರೆ.
ಸಾಗರದ ಪತ್ರಿಕಾ ಭವನದಲ್ಲಿಂದು ಮಾತನಾಡಿದ ಅವರು, ನಾನು ಮರಳಿನವರಿಂದ ಹಣ ಪಡೆದಿಲ್ಲ ಎಂದು ಧರ್ಮಸ್ಥಳದಲ್ಲಿ ಫೆಬ್ರವರಿ 13 ರಂದು ಹೋಗಿ ಪ್ರಮಾಣ ಮಾಡಲು ಸಿದ್ಧನಿದ್ದೇನೆ. ನಾನು ಹಣ ತೆಗೆದುಕೊಂಡಿದ್ದೇನೆ ಎಂದು ಹೇಳಿದವರು ಸಹ ಬಂದು ಪ್ರಮಾಣ ಮಾಡಬೇಕು ಎಂದು ಮರು ಸವಾಲು ಹಾಕಿದರು.
ಮಾಜಿ ಶಾಸಕ, ಕಾಂಗ್ರೆಸ್ ಮುಖಂಡ ಬೇಳೂರು ಗೋಪಾಲಕೃಷ್ಣ ರವರು ಕಳೆದ ಎರಡು ದಿನದ ಹಿಂದೆ ಹೊಸನಗರದಲ್ಲಿ ಸಾಗರ ಕ್ಷೇತ್ರದ ಶಾಸಕರು ಮರಳಿನವರು ಬಳಿ ಹಣ ಪಡೆಯುತ್ತಿದ್ದಾರೆ. ಇದಕ್ಕೆ ಏಜೆಂಟರನ್ನು ನೇಮಿಸಿಕೊಂಡಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಈ ಹಿಂದೆ ಇದೇ ರೀತಿಯ ಆರೋಪ ಮಾಡಿದಾಗ ಸಾಗರ ತಾಲೂಕು ಮರಳಿ ಸಾಗಾಣೆದಾರರು, ಶಾಸಕ ಹರತಾಳು ಹಾಲಪ್ಪನವರು ಹಣ ಪಡೆಯುತ್ತಿಲ್ಲ ಎಂದು ಸುದ್ದಿಗೋಷ್ಟಿಯಲ್ಲಿ ಸ್ಪಷ್ಟಪಡಿಸಿದ್ದರು. ಆದರೆ, ಪುನಃ ಬೇಳೂರು ಗೋಪಾಲಕೃಷ್ಣ ಅವರು ಆರೋಪ ಮಾಡಿದ್ದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಮರಳಿನವರಿಂದ ಹಣ ತೆಗೆದು ಕೊಂಡಿಲ್ಲ ಎಂದ ಶಾಸಕ ಹಾಲಪ್ಪ ಫೆಬ್ರವರಿ 14 ರಿಂದ ಅಧಿವೇಶನ ಪ್ರಾರಂಭವಾಗುವುದರಿಂದ 13 ಕ್ಕೆ ಧರ್ಮಸ್ಥಳಕ್ಕೆ ಹೋಗಲು ನಾನು ತಯಾರಿದ್ದೇನೆ. ಆದರೆ, ಬೇಳೂರು ಗೋಪಾಲಕೃಷ್ಣ ರವರು ಸಹ ಬರಬೇಕು. ಅಲ್ಲಿ ಪ್ರಮಾಣ ಮಾಡಲು ವಿಧಾನ ಬೇರೆ ಇದೆ. ಹಿಂದೆ ಯಡಿಯೂರಪ್ಪನವರು ಹಾಗೂ ಕುಮಾರಸ್ವಾಮಿ ರವರು ಪ್ರಮಾಣ ಮಾಡಲು ಹೋದಾಗ ನಾನು ಹೋಗಿದ್ದೆ. 13 ನೇ ತಾರೀಖಿನ ತನಕ ನನ್ನ ಕಾರ್ಯಕ್ರಮ ನಿಗದಿಯಾಗಿದೆ. ಇದರಿಂದ ದಯವಿಟ್ಟು ಪ್ರಮಾಣ ಮಾಡಲು ಡೇಟ್ ಫಿಕ್ಸ್ ಮಾಡಬೇಕು. ಬೇಳೂರು ಗೋಪಾಲಕೃಷ್ಣ ರವರು ಅಲ್ಲಿಗೆ ಬಂದು ನಾನು ಹಣ ತೆಗೆದುಕೊಂಡಿದ್ದೇನೆ ಎಂದು ಪ್ರಮಾಣ ಮಾಡಬೇಕು ಹರಿಹಾಯ್ದರು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ