ಶಿವಮೊಗ್ಗ: ಶಿವಮೊಗ್ಗದಲ್ಲಿ ದಸರಾದ ಕೊನೆಯ ದಿನ ನಡೆಯುವ ವಿಜಯದಶಮಿ ಕಾರ್ಯಕ್ರಮ ಅತ್ಯಂತ ಅದ್ಧೂರಿಯಾಗಿ ನಡೆದಿದೆ. ನಗರದ ಫ್ರೀಡಂ ಪಾರ್ಕ್ನಲ್ಲಿ ನಡೆಯುವ ಬನ್ನಿ ಮುಡಿಯುವುದು ಕೂಡ ಅಚ್ಚುಕಟ್ಟಾಗಿ ನಡೆಯಿತು. ರಾವಣನನ್ನು ದಹಿಸಿ ಜಿಲ್ಲೆಯ ಜನರು ಸಂಭ್ರಮಿಸಿದರು.
ಫ್ರೀಡಂ ಪಾರ್ಕ್ನಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮಕ್ಕಾಗಿ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಶಿವಮೊಗ್ಗ ತಹಶೀಲ್ದಾರ್ ನಾಗರಾಜ್ ಕಾರ್ಯಕ್ರಮ ನಡೆಸಿಕೊಟ್ಟರು. ಮೊದಲು ಕೋಟೆ ಆಂಜನೇಯ ದೇವಾಲಯದ ಅರ್ಚಕ ರಾಮಪ್ರಸಾದ್ ಬನ್ನಿ ಮುಡಿಯುವ ಬಾಳೆ ಮರಕ್ಕೆ ಪೂಜೆ ಸಲ್ಲಿಸಿದರು. ನಂತರ ತಹಶೀಲ್ದಾರ್ ಬಾಳೆಮರಕ್ಕೆ ಮೂರು ಸುತ್ತು ಹಾಕಿ ನಂತರ ತಮ್ಮ ಕೈಯಲ್ಲಿನ ಕತ್ತಿಯಿಂದ ಬಾಳೆಮರ ಕಡಿದರು. ಬಾಳೆಮರ ಕಡಿದ ಮೇಲೆ ಬನ್ನಿ ಮುಡಿಯುವ ಕಾರ್ಯಕ್ರಮ ಮುಕ್ತಾಯವಾಯಿತು. ಈ ಸಂದರ್ಭದಲ್ಲಿ ಜನರು ಬನ್ನಿಯನ್ನು ಒಬ್ಬರಿಗೊಬ್ಬರು ವಿನಿಮಯ ಮಾಡಿಕೊಂಡು ಶುಭಾಶಯ ಕೋರಿದರು.
ದಶಕಂಠ ರಾವಣನ ದಹನ:ಬನ್ನಿ ಮುಡಿಯುವ ಕಾರ್ಯಕ್ರಮ ಮುಗಿಯುತ್ತಿದ್ದಂತೆ ರಾವಣ ದಹನ ಮಾಡಲಾಯಿತು. ರಾವಣ ದೇಹದಲ್ಲಿ ವಿವಿಧ ಪಟಾಕಿಗಳನ್ನಿಟ್ಟು ಸುಡಲಾಯಿತು. ಮನುಷ್ಯ ತನ್ನ ಕೆಟ್ಟತನವನ್ನು ಸುಟ್ಟು ಹಾಕಬೇಕು ಎಂಬ ಸಂದೇಶ ಈ ಸಂಪ್ರದಾಯದ ಹಿಂದಿದೆ.