ಶಿವಮೊಗ್ಗ: ಮೊನ್ನೆ ಸಾಗರದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿನಿಯರಿಗೆ ಡಿಕ್ಕಿ ಹೊಡೆದು ಬಾಲಕಿಯ ಸಾವಿಗೆ ಕಾರಣನಾಗಿದ್ದ ಟಿಪ್ಪರ್ ಲಾರಿ ಚಾಲಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಡಿಸೆಂಬರ್ 28 ರಂದು ಸಾಗರದ ಸಣ್ಣಮನೆ ಸೇತುವೆ ಬಳಿ ನಿಯಂತ್ರಣ ಕಳೆದುಕೊಂಡಿದ್ದ ಟಿಪ್ಪರ್ ಲಾರಿ ಹಾಸ್ಟೆಲ್ನಿಂದ ಕಾಲೇಜಿಗೆ ನಡೆದು ಕೊಂಡು ಹೋಗುತ್ತಿದ್ದ ಮೂವರು ಪಿಯುಸಿ ವಿದ್ಯಾರ್ಥಿನಿಯರಿಗೆ ಡಿಕ್ಕಿ ಹೊಡೆದಿತ್ತು. ಸ್ಥಳೀಯರು ಮೂವರು ಬಾಲಕಿಯರನ್ನು ಆಸ್ಪತ್ರೆಗೆ ದಾಖಲಿಸಿದ್ದರು.
ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪ್ರತಿಮಾ ಎಂಬ ದ್ವಿತೀಯ ಪಿಯು ವಿದ್ಯಾರ್ಥಿನಿ ಸಾವನ್ನಪ್ಪಿದ್ದಳು. ಉಳಿದ ಇಬ್ಬರು ವಿದ್ಯಾರ್ಥಿನಿಯರು ಸಣ್ಣಪುಟ್ಟ ಗಾಯಗಳಿಂದ ಬಚಾವ್ ಆಗಿದ್ದಾರೆ. ಲಾರಿ ವಿದ್ಯಾರ್ಥಿನಿಯರಿಗೆ ಡಿಕ್ಕಿ ಹೊಡೆಯುತ್ತಿದ್ದಂತೆಯೇ ಸ್ಥಳೀಯರು ಚಾಲಕ ಕೃಷ್ಣಚಾರಿಗೆ ಥಳಿಸಿದ್ದರು ಎನ್ನಲಾಗಿದೆ.
ಚಾಲಕನನ್ನು ಸಹ ಸಾಗರದ ಉಪವಿಬಾಗೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಚಿಕಿತ್ಸೆ ಫಲಿಸದೇ ನಿನ್ನೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಆದರೆ, ಕೃಷ್ಣಚಾರಿ ಸಾವನ್ನಪ್ಪಿರುವುದನ್ನು ಖಚಿತ ಪಡಿಸಿದ ಪೊಲೀಸರು ಸಾವಿಗೆ ಕಾರಣ ಮಾತ್ರ ಏನೆಂಬುದನ್ನು ಖಚಿತಪಡಿಸಿಲ್ಲ.