ಶಿವಮೊಗ್ಗ: ಹೃದಯಾಘಾತ ಎಲ್ಲ ವಯಸ್ಸಿನವರಿಗೂ ಭೂತದಂತೆ ಕಾಡುತ್ತಿದೆ. ಈವರೆಗೆ ದೈತ್ಯದೇಹದ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾಗಿರುವ ಜನರಿಗೆ ಮಅತ್ರ ಇಡು ಕಾಡುತ್ತಿದೆ. ಅದಕ್ಕಾಗಿ ಜೀವನ ಶೈಲಿ ಬದಲಾವಣೆ ಅಗತ್ಯ ಎಂದು ವೈದ್ಯರು ಮತ್ತು ತಜ್ಞರು ಹೇಳುತ್ತಿದ್ದರು. ಆದ್ರೆ ಇದೀಗ ಶಾಲಾ ಮಕ್ಕಳ ಜೀವವನ್ನು ಸಹ ತೆಗೆಯುತ್ತಿದೆ ಹೃದಯ ಸಮಸ್ಯೆ. ಇದಕ್ಕೆ ಸಾಕ್ಷಿ ಎಂಬಂತೆ ರಾಜ್ಯದಲ್ಲಿ ಕಳೆದ ಒಂದು ವಾರದಲ್ಲಿ ಮೂವರು ಮಕ್ಕಳು ಹೃದಯಸ್ತಂಭನಕ್ಕೆ ಬಲಿಯಾಗಿರುವುದು ಆತಂಕದ ವಿಷಯವೇ. ಶಾಲೆಗೆ ಹೊರಟಿದ್ದ 10ನೇ ತರಗತಿ ವಿದ್ಯಾರ್ಥಿಯೋರ್ವ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಸೊರಬ ತಾಲೂಕು ಎಣ್ಣೆಕೊಪ್ಪ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ರಜತಾದ್ರಿ ಎಂಬವರ ಪುತ್ರ ಜಯಂತ್ ಮೃತ ವಿದ್ಯಾರ್ಥಿ. ಈತ ಆನವಟ್ಟಿಯ ಶಾಲೆಯಲ್ಲಿ 10 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದನು.
ಮೃತ ಜಯಂತ್ ಬುಧವಾರ ಬೆಳಗ್ಗೆ ಎಂದಿನಂತೆ ಶಾಲೆಗೆ ಹೊರಡುತ್ತಿದ್ದನು. ಸ್ನಾನ ಮುಗಿಸಿ, ತಿಂಡಿ ತಿಂದು ಶಾಲೆಗೆ ಹೊರಡುವ ಮುನ್ನ ಮನೆ ಹಿಂಭಾಗಕ್ಕೆ ಹೋಗಿದ್ದು, ಈ ವೇಳೆ ಕುಸಿದು ಬಿದ್ದಿದ್ದಾನೆ. ತಕ್ಷಣ ಮನೆಯವರು ಆತನನ್ನು ಆನವಟ್ಟಿಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ. ಆದರೆ ಆದಾಗಲೇ ವಿದ್ಯಾರ್ಥಿ ಜಯಂತ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಮೃತ ಜಯಂತ್ ಓರ್ವ ಅಣ್ಣ ಹಾಗೂ ತಂಗಿ ಮತ್ತು ಕುಟುಂಬಸ್ಥರನ್ನು ಅಗಲಿದ್ದಾನೆ.
ಹೃದಯಾಘಾತದಿಂದ ಬಾಲಕ ಸಾವು :ಇದೇ ರೀತಿಶಾಲೆಗೆ ಹೊರಡುತ್ತಿದ್ದ ಬಾಲಕನೋರ್ವ ಹೃದಯಾಘಾತದಿಂದ ಮೃತಪಟ್ಟ ಘಟನೆ ಮಂಗಳೂರಿನ ಸುರತ್ಕಲ್ ನಲ್ಲಿ ಮೂರು ದಿನಗಳ ಹಿಂದೆ ನಡೆದಿತ್ತು. ಸುರತ್ಕಲ್ ನ ಕೃಷ್ಣಾಪುರ ಏಳನೇ ಬ್ಲಾಕ್ ನಿವಾಸಿ ಮೊಹಮ್ಮದ್ ಹಸೀಮ್ (14) ಎಂಬ ಬಾಲಕ ಹೃದಯಾಘಾತದಿಂದ ಮೃತಪಟ್ಟಿದ್ದ. ಈತ ಎಂಟನೇ ತರಗತಿಯಲ್ಲಿ ಓದುತ್ತಿದ್ದ. ಮೃತ ಮೊಹಮ್ಮದ್ ಹಸೀಮ್ ಎಂದಿನಂತೆ ಬೆಳಗ್ಗೆ ಎದ್ದು ಶಾಲೆಗೆ ತೆರಳಲು ಸಿದ್ಧವಾಗುತ್ತಿದ್ದ. ಈ ವೇಳೆ ಏಕಾಏಕಿ ತಲೆ ತಿರುಗಿ ಬಿದ್ದಿದ್ದ. ತಕ್ಷಣ ಆತನನ್ನು ಮುಕ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅದಾಗಲೇ ಬಾಲಕ ಮೃತಪಟ್ಟಿರುವುದಾಗಿ ಆಸ್ಪತ್ರೆ ವೈದ್ಯರು ಘೋಷಿಸಿದ್ದರು. ಮೃತ ಹಸೀಮ್ ಅಬ್ದುಲ್ ರೆಹಮಾನ್ ದಂಪತಿಯ ಮೂವರು ಪುತ್ರರಲ್ಲಿ ಎರಡನೆಯವನಾಗಿದ್ದನು.