ಶಿವಮೊಗ್ಗ:ಸಾವರ್ಕರ್ ಫ್ಲೆಕ್ಸ್ ಗಲಾಟೆ ಮಧ್ಯೆ ಗೌರಿ-ಗಣೇಶ ಹಬ್ಬದ ಸಡಗರ ಆರಂಭವಾಗಿದ್ದು, ಹಿಂದಿನಂತೆಯೇ ಗಣಪತಿ ಪ್ರತಿಷ್ಠಾಪನೆಗೆ ಸರಳವಾಗಿ ಅನುಮತಿ ನೀಡಲಾಗುತ್ತದೆ ಎಂದು ಎಸ್ಪಿ ಬಿ.ಎಂ. ಲಕ್ಷ್ಮಿ ಪ್ರಸಾದ್ ಹೇಳಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗಣಪತಿ ಹಬ್ಬಕ್ಕೆ ಯಾವ ತರಹ ಅನುಮತಿ ನೀಡಬೇಕು ಎಂಬುದರ ಕುರಿತು ನಿನ್ನೆ ಹಾಗೂ ಇಂದು ಶಿವಮೊಗ್ಗ ಮತ್ತು ಭದ್ರಾವತಿ ನಗರದಲ್ಲಿ ಸಭೆಗಳಾಗಿವೆ. ಗಣಪತಿ ಕೂರಿಸಲು ಸಿಂಗಲ್ ವಿಂಡೋ (ಏಕಗವಾಕ್ಷಿ ನೀತಿ) ಇಂದಿನಿಂದ ಆರಂಭವಾಗಲಿದೆ.
ನಗರದಲ್ಲಿ ಹಿಂದಿನ ಅಂಕಿ ಅಂಶಗಳನ್ನ ಅವಲೋಕಿಸಿದಾಗ ಸುಮಾರು 826 ಗಣಪತಿಗಳಿಗೆ ಅರ್ಜಿ ಬರಬಹುದು ಎಂದು ಅಂದಾಜಿಸಲಾಗಿದೆ. ಎಂದಿನಂತೆ ಈ ಬಾರಿಯೂ ಡಿಜೆಗೆ ಅನುಮತಿ ಇಲ್ಲ ಎಂದು ತಿಳಿಸಿದರು. ಗಣಪತಿ ಹಬ್ಬದಂದು ಫ್ಲೆಕ್ಸ್ ಹಾಕುವ ವಿಚಾರವನ್ನು ಮಹಾನಗರ ಪಾಲಿಕೆಯವರು ನೋಡಿಕೊಳ್ಳುತ್ತಾರೆ. ಅವರ ಗಮನಕ್ಕೆ ತಂದು ಫ್ಲೆಕ್ಸ್ ಹಾಕಲು ಅನುಮತಿ ಪಡೆದುಕೊಳ್ಳಬೇಕು ಎಂದರು.
ಸಿಸಿಟಿವಿ ಅಳವಡಿಕೆಗೆ ಮನವಿ:ಗಣೇಶೋತ್ಸವ ಹಿನ್ನೆಲೆ ನಗರದಲ್ಲಿ ಸಿಸಿಟಿವಿಗಳನ್ನು ಅಳವಡಿಸಲು ಪಾಲಿಕೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಪೊಲೀಸ್ ಇಲಾಖೆ ಕೂಡ ಸಿಸಿಟಿವಿಗಳನ್ನು ಅಳವಡಿಸಲಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತ ಕ್ರಮಗಳನ್ನು ವಹಿಸಲಾಗುತ್ತದೆ. ಗಣಪತಿ ನಿಮಜ್ಜನ ದಿನ ಮೆರವಣಿಗೆ ಸಾಗುವ ಹಾದಿಯಲ್ಲಿ ಕಲ್ಲು ರಾಶಿ, ಅಥವಾ ಯಾವುದೇ ಘನವಸ್ತುಗಳು ಇರದಂತೆ ನೋಡಿಕೊಳ್ಳಲಾಗುತ್ತದೆ ಎಂದರು.
ಇದನ್ನೂ ಓದಿ:ಚಾಮರಾಜಪೇಟೆ ಮೈದಾನದಲ್ಲಿ ಗಣೇಶೋತ್ಸವ: ಸಿಎಂ ಜೊತೆ ಚರ್ಚಿಸಿ ನಿರ್ಧಾರವೆಂದ ಅಶೋಕ್