ಶಿವಮೊಗ್ಗ:ನಡುರಸ್ತೆಯಲ್ಲಿ ಚಾಕು, ಮಾರಕಾಸ್ತ್ರ ತೋರಿಸಿ ಆತಂಕ ಮೂಡಿಸಿದ್ದ ಮೂವರು ಯುವಕರನ್ನು ಸಾರ್ವಜನಿಕರೇ ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ನಗರದಲ್ಲಿ ಬುಧವಾರ ನಡೆದಿದ್ದು, ಓರ್ವ ಪರಾರಿಯಾಗಿದ್ದಾನೆ. ಬಂಧಿತ ಮೂವರು ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತದೆ. ವರದಿ ಬಂದ ಬಳಿಕ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಂ. ಲಕ್ಷ್ಮೀಪ್ರಸಾದ್ ತಿಳಿಸಿದ್ದಾರೆ.
ಘಟನೆ ಹಿನ್ನೆಲೆ:
ಶಿವಮೊಗ್ಗದ ರವೀಂದ್ರನಗರ ಗಣಪತಿ ದೇವಸ್ಥಾನದ ಬಳಿ ನಿನ್ನೆ ಬೆಳಗ್ಗೆ ಕಾರಿನಲ್ಲಿ ಬಂದ ಯುವಕರು ಕ್ಷುಲ್ಲಕ ವಿಚಾರಕ್ಕೆ ಸಾರ್ವಜನಿಕರಿಗೆ ಚಾಕು, ಮಾರಕಾಸ್ತ್ರ ತೋರಿಸಿದ್ದರು. ಯುವಕರು ವ್ಯಕ್ತಿ ಮತ್ತು ಪೊಲೀಸ್ ಬ್ಯಾರಿಕೇಡ್ಗೆ ಕಾರು ಡಿಕ್ಕಿ ಹೊಡೆಸಿದ್ದಾರೆ. ಈ ಬಗ್ಗೆ ಜನರು ಪ್ರಶ್ನಿಸುತ್ತಿದ್ದಂತೆ, ಕಾರಿನಲ್ಲಿದ್ದ ನಾಲ್ವರು ಮಾರಕಾಸ್ತ್ರಗಳನ್ನು ತೋರಿಸಿ ಬೆದರಿಕೆ ಹಾಕಿದ್ದಾರೆ. ಅಲ್ಲದೆ, ಕಾರನ್ನು ಹಿಂದಕ್ಕೆ ತಿರುಗಿಸಿಕೊಂಡು ಪರಾರಿಯಾಗಲು ಯತ್ನಿಸಿದ್ದರು. ಬಳಿಕ ಕಾರನ್ನು ಸ್ಳಳದಲ್ಲೇ ಬಿಟ್ಟು ದಿಕ್ಕಾಪಾಲಾಗಿ ಓಡಿದ ಯುವಕರನ್ನು ಜನರು ಅಟ್ಟಾಡಿಸಿ ಹಿಡಿದು, ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದರು. ಯುವಕರು ಗಾಂಜಾ ಸೇವಿಸಿದ್ದು, ಮತ್ತಿನಲ್ಲಿ ದುಷ್ಕೃತ್ಯ ಎಸಗಲು ಮುಂದಾಗಿದ್ದರು ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.