ಕರ್ನಾಟಕ

karnataka

ETV Bharat / state

ಶಿವಮೊಗ್ಗದಲ್ಲಿ ರೌಡಿ ಪರೇಡ್.. ದುಷ್ಕೃತ್ಯದಲ್ಲಿ ತೊಡಗುವ ರೌಡಿಗಳಿಗೆ ಎಸ್​ಪಿ ಖಡಕ್ ಎಚ್ಚರಿಕೆ - police officers warned rowdies in Shivamogga

ರೌಡಿಗಳ ಮೇಲೆ ಹೆಚ್ಚಿನ ನಿಗಾ ವಹಿಸಲು ಇಂದು ಶಿವಮೊಗ್ಗದ ದೊಡ್ಡಪೇಟೆ ಠಾಣಾ ಮೈದಾನದಲ್ಲಿ ರೌಡಿ ಪರೇಡ್ ನಡೆಸಲಾಯಿತು. ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಯ ಒಟ್ಟು 175 ಜನ ಪರೇಡ್ ನಲ್ಲಿ ಭಾಗವಹಿಸಿದ್ದರು.

shivamogga-rowdies-parade
ಶಿವಮೊಗ್ಗದಲ್ಲಿ ರೌಡಿ ಪರೇಡ್, ದುಷ್ಕೃತ್ಯದಲ್ಲಿ ತೊಡಗುವ ರೌಡಿಗಳಿಗೆ ಖಡಕ್ ಎಚ್ಚರಿಕೆ

By

Published : Jul 3, 2022, 8:49 PM IST

ಶಿವಮೊಗ್ಗ :ಬಕ್ರೀದ್, ಗಣೇಶೋತ್ಸವ ಸೇರಿದಂತೆ ಸಾಲು ಸಾಲು ಹಬ್ಬಗಳು ಇರುವುದರಿಂದ ರೌಡಿಗಳ ಮೇಲೆ ಹೆಚ್ಚಿನ ನಿಗಾ ವಹಿಸಲು ಪೊಲೀಸರು ನಿರ್ಧರಿಸಿದ್ದಾರೆ. ಹಾಗಾಗಿ ಭಾನುವಾರ ಶಿವಮೊಗ್ಗದಲ್ಲಿ ರೌಡಿಗಳ ಪರೇಡ್ ನಡೆಸಲಾಯಿತು. ನಗರದ ದೊಡ್ಡಪೇಟೆ ಠಾಣೆ ಮೈದಾನದಲ್ಲಿ ನಡೆದ ರೌಡಿ ಪರೇಡ್ ನಲ್ಲಿ ಒಟ್ಟು 175 ರೌಡಿಗಳು ಭಾಗವಹಿಸಿದ್ದರು. ಪ್ರತಿಯೊಬ್ಬರ ಮಾಹಿತಿ ಪಡೆದ ಜಿಲ್ಲಾ ರಕ್ಷಣಾಧಿಕಾರಿಗಳು, ಕಾನೂನು ಬಾಹಿರ ಚಟುವಟಿಕೆ ನಿಲ್ಲಿಸುವಂತೆ ಖಡಕ್ ಎಚ್ಚರಿಕೆ ನೀಡಿದರು.

ಶಿವಮೊಗ್ಗದಲ್ಲಿ ರೌಡಿ ಪರೇಡ್, ದುಷ್ಕೃತ್ಯದಲ್ಲಿ ತೊಡಗುವ ರೌಡಿಗಳಿಗೆ ಖಡಕ್ ಎಚ್ಚರಿಕೆ

ಶಿವಮೊಗ್ಗ ಉಪ ವಿಭಾಗದ ಒಟ್ಟು ಆರು ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಗಳು ಪರೇಡ್ ನಲ್ಲಿ ಪಾಲ್ಗೊಂಡಿದ್ದರು. ದೊಡ್ಡಪೇಟೆ, ಕೋಟೆ, ವಿನೋಬನಗರ, ಜಯನಗರ, ತುಂಗಾ ನಗರ ಮತ್ತು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯ ರೌಡಿಗಳು ಪೇರೆಡ್ ನಲ್ಲಿ ಭಾಗಿಯಾಗಿದ್ದರು. ಆಯಾ ಠಾಣೆಗಳ ವ್ಯಾಪ್ತಿಯ ರೌಡಿಗಳನ್ನು ಪ್ರತ್ಯೇಕವಾಗಿ ನಿಲ್ಲಿಸಿ ವಿಚಾರಣೆ ನಡೆಸಿದ ಜಿಲ್ಲಾ ವರಿಷ್ಠಾಧಿಕಾರಿಗಳು ರೌಡಿಗಳಿಗೆ ಎಚ್ಚರಿಕೆ ನೀಡಿದರು.

ಜೊತೆಗೆ ಪರೇಡ್’ನಲ್ಲಿ ಭಾಗವಹಿಸಿದ್ದ ರೌಡಿಗಳಿಗೆ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀಪ್ರಸಾದ್ ಎಚ್ಚರಿಸಿದ್ದು, ಕೆಲವರಿಗೆ ಡಿಸೆಂಬರ್ ತನಕ ಗಡುವು ನೀಡಿದ್ದಾರೆ. ಕಾನೂನುಬಾಹೀರ ಚಟುವಟಿಕೆಯಿಂದ ದೂರ ಇದ್ದರೆ ರೌಡಿಗಳ ಪಟ್ಟಿಯಿಂದ ಹೊರಗಿಡುವುದಾಗಿ ಹೇಳಿದ್ದಾರೆ. ದುಷ್ಕೃತ್ಯದಲ್ಲಿ ತೊಡಗುವವರ ಮೇಲೆ ನಿರಂತರ ನಿಗಾ ವಹಿಸಲಾಗುತ್ತದೆ. ಈ ಬಗ್ಗೆ ಮಾಹಿತಿ ಕಲೆ ಹಾಕಿ ಮನೆಗಳಿಗೂ ತೆರಳಿ ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದರು.

ಗಾಂಜಾಗೆ ಕಡಿವಾಣ ಹಾಕಲು ಯತ್ನ: ಜಿಲ್ಲೆಯಲ್ಲಿ ಗಾಂಜಾ ಹಾವಳಿ ಹೆಚ್ಚಾಗಿದ್ದು, ಇದರ ಕಡಿವಾಣಕ್ಕೂ ಕ್ರಮ ಕೈಗೊಳ್ಳಲಾಗಿದೆ. ರೌಡಿ ಪರೇಡ್ ಗೆ ಬಂದಿದ್ದವರ ಪೈಕಿ ಕೆಲವರು ಗಾಂಜಾ ಸೇವನೆ ಮಾಡುವ ಶಂಕೆ ಇದ್ದು, ಅಂತಹವರ ವಿರುದ್ಧ ನಿಗಾ ವಹಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಅವರು ತಿಳಿಸಿದರು.

ಸಾಲು ಸಾಲು ಹಬ್ಬದ ಹಿನ್ನೆಲೆ ನಿಗಾ : ಇನ್ಮುಂದೆ ಸಾಲು ಸಾಲು ಹಬ್ಬಗಳು ಬರಲಿವೆ. ಈ ಹಿನ್ನೆಲೆಯಲ್ಲಿ ರೌಡಿಗಳ ಮೇಲೆ ಹೆಚ್ಚು ನಿಗಾ ವಹಿಸಲು ಪೊಲೀಸ್ ಇಲಾಖೆ ನಿರ್ಧರಿಸಿದೆ. ‘ಕೋಮು ಸೂಕ್ಷ್ಮತೆ ಇರುವುದರಿಂದ ರೌಡಿಗಳ ಮೇಲೆ ಹೆಚ್ಚು ಗಮನ ವಹಿಸಿದ್ದೇವೆ. ಬಕ್ರೀದ್, ಗಣೇಶ ಹಬ್ಬ, ಈದ್ ಮಿಲಾದ್ ಹಬ್ಬಗಳಿವೆ. ಬಕ್ರೀದ್ ಹಿನ್ನೆಲೆಯಲ್ಲಿ ಗೋವುಗಳ ಸಾಗಣೆ ಮಾಡುವ ಸಾಧ್ಯತೆ ಇರುವುದರಿಂದ, ಅಂತಹವರಿಗೆ ಎಚ್ಚರಿಕೆ ನೀಡಲಾಗಿದೆ. ಕೆಲವರ ಮೇಲೆ ಗೂಂಡಾ ಕಾಯ್ದೆ ಹಾಕಲಾಗುತ್ತಿದೆ. ಈಗಾಗಲೇ ಚೋರ್ ಸಲೀಂ ಎಂಬಾತನ ವಿರುದ್ಧ ಗೂಂಡಾ ಕಾಯ್ದೆ ಹಾಕಲಾಗಿದೆ. ಕಡೇಕಲ್ ಹಬೀಬ್ ಎಂಬಾತನ ವಿರುದ್ಧ ಗೂಂಡಾ ಕಾಯ್ದೆ ಹಾಕಲು ಶಿಫಾರಸು ಮಾಡಲಾಗಿದೆ’ ಎಂದು ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮಿಪ್ರಸಾದ್ ತಿಳಿಸಿದರು. ಶಿವಮೊಗ್ಗ ಜಿಲ್ಲೆಯಾದ್ಯಂತ ಸುಮಾರು 1400 ರೌಡಿಗಳಿದ್ದಾರೆ. ಶಿವಮೊಗ್ಗ ಉಪ ವಿಭಾಗದಲ್ಲಿಯೇ ಸುಮಾರು 800 ರೌಡಿಗಳಿದ್ದಾರೆ ಎಂದು ಎಸ್​ಪಿ ತಿಳಿಸಿದ್ದಾರೆ.

ಇದನ್ನೂ ಓದಿ :ಮುಸ್ಲಿಂ ಸಮುದಾಯದ ಆ ಕಟುಕ ಬಿಜೆಪಿ ಕಾರ್ಯಕರ್ತನಾಗಲು ಸಾಧ್ಯವಿಲ್ಲ: ಸಚಿವ ಬೈರತಿ ಬಸವರಾಜ್

ABOUT THE AUTHOR

...view details