ಶಿವಮೊಗ್ಗ: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು ರಾಜ್ಯಾದ್ಯಂತ ನೀತಿ ಸಂಹಿತೆ ಜಾರಿಯಲ್ಲಿದೆ. ಜಿಲ್ಲೆಯ ಅಲ್ಲಲ್ಲಿ ಚೆಕ್ ಪೊಸ್ಟ್ಗಳನ್ನು ನಿರ್ಮಿಸಲಾಗಿದೆ. ಈ ಚೆಕ್ ಪೋಸ್ಟ್ಗಳಲ್ಲಿ ವಾಹನ ತಪಾಸಣೆ ವೇಳೆ ಅಕ್ರಮ ಹಣ, ದಾಖಲೆಗಳಿಲ್ಲದ ದಿನಸಿ ಕಿಟ್ ಹಾಗೂ ರಗ್ಗುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಲ್ಲಿನ ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪೊಲೀಸರು ದಾಳಿ ನಡೆಸಿದ್ದು, ಗೋದಾಮಿನಲ್ಲಿ ಜನರಿಗೆ ವಿತರಿಸಲು ಇಟ್ಟಿದ್ದ ಸುಮಾರು 10 ಲಕ್ಷ ರೂ ಮೌಲ್ಯದ ದಿನಸಿ ಕಿಟ್ಗಳನ್ನು ವಶಕ್ಕೆ ಪಡೆದರು. ಕಿಟ್ಗಳಲ್ಲಿ ಅಕ್ಕಿ, ಬೇಳೆ, ಶ್ಯಾವಿಗೆ, ಸಕ್ಕರೆ ಸೇರಿದಂತೆ ವಿವಿಧ ದಿನಸಿ ವಸ್ತುಗಳನ್ನು ಒಳಗೊಂಡ ಸುಮಾರು 500 ಬ್ಯಾಗ್ಗಳು ಸಿಕ್ಕಿವೆ.
ಆಗುಂಬೆ ಪೊಲೀಸ್ ಠಾಣೆಯ ಚೆಕ್ ಪೊಸ್ಟ್ನಲ್ಲಿ ಲಾರಿ ತಪಾಸಣೆ ನಡೆಸುತ್ತಿದ್ದ ಪೊಲೀಸರಿಗೆ ಸೂಕ್ತ ದಾಖಲೆಗಳಿಲ್ಲದ ಸುಮಾರು 5 ಲಕ್ಷ ರೂ ಮೌಲ್ಯದ 115 ಕ್ವಿಂಟಲ್ ಅಕ್ಕಿ ದೊರೆತಿದ್ದು ವಶಕ್ಕೆ ಪಡೆದಿದ್ದಾರೆ. ಲಾರಿಗಳನ್ನು ಪರಿಶೀಲಿಸಿದಾಗ ದಾಖಲೆ ಇಲ್ಲದ 4.50 ಲಕ್ಷ ರೂ ಮೌಲ್ಯದ ರಗ್ಗು ಮತ್ತು ಜಮಖಾನವನ್ನು ವಶಕ್ಕೆ ಪಡೆಯಲಾಗಿದೆ. ಕುಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಾರಿನಲ್ಲಿ 90 ಸಾವಿರ ರೂ ಪತ್ತೆಯಾಗಿದೆ. ಈ ಹಣಕ್ಕೆ ಸರಿಯಾದ ದಾಖಲೆ ಹಾಗೂ ಸೂಕ್ತ ಮಾಹಿತಿ ಲಭ್ಯವಾಗದ ಹಿನ್ನೆಲೆಯಲ್ಲಿ ಪೊಲೀಸರು ವಶಕ್ಕೆ ಪಡೆದರು.
ತುಮಕೂರಿನಲ್ಲಿ ಬಟ್ಟೆ, ಬಲ್ಬ್ಗಳ ವಶ:ಮತದಾರರಿಗೆ ಹಂಚಲು ತೆಗೆದುಕೊಂಡು ಹೋಗುತ್ತಿದ್ದ ವಿವಿಧ ಮಾದರಿಯ ಬಟ್ಟೆಗಳನ್ನು ಚುನಾವಣಾ ಸಂಚಾರಿ ಜಾಗೃತ ದಳದ ಅಧಿಕಾರಿಗಳು ಶನಿವಾರ (ನಿನ್ನೆ) ವಶಪಡಿಸಿಕೊಂಡಿದ್ದಾರೆ. ತಾಲೂಕಿನ ಕಿಬ್ಬನಹಳ್ಳಿ ಹೋಬಳಿಯ ರಜತಾದ್ರಿ ಪುರದ ಟೋಲ್ ಬಳಿ ಓಮಿನಿ ವಾಹನವನ್ನು ತಪಾಸಣೆ ನಡೆಸಿದಾಗ ₹3 ಲಕ್ಷ ಬೆಲೆ ಬಾಳುವ ವಿವಿಧ ಮಾದರಿಯ ಬಟ್ಟೆಗಳು ಇರುವುದು ಗೊತ್ತಾಗಿದೆ. ಪ್ರಕರಣದಲ್ಲಿ ಮೂವರನ್ನು ವಶಕ್ಕೆ ಪಡೆದಿರುವ ಲೋಕೋಪಯೋಗಿ ಇಲಾಖೆಯ ಉಪವಿಭಾಗದ ಎಂಜಿನಿಯರ್ ಎಚ್.ಎನ್.ಹೊನ್ನೇಶಪ್ಪ ನೇತೃತ್ವದ ತಂಡ ಮುಂದಿನ ಕ್ರಮ ಕೈಗೊಂಡಿದೆ. ಇನ್ನೊಂದೆಡೆ, ಲಕ್ಷಾಂತರ ಮೌಲ್ಯದ ಎಲ್ ಇಡಿ ಬಲ್ಬ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ:8 ಟನ್ ಗಾಂಜಾ ಸೇರಿ 4 ಕೋಟಿ ರೂಪಾಯಿ ಡ್ರಗ್ಸ್‌ಗೆ ಬೆಂಕಿಯಿಟ್ಟು ನಾಶಪಡಿಸಿದ ಪೊಲೀಸರು