ಶಿವಮೊಗ್ಗ:ಏಳು ಜನ ಮಕ್ಕಳಿದ್ದರೂ ಮಕ್ಕಳಿಂದ ಹೊರ ದೂಡಲ್ಪಟ್ಟ ವೃದ್ದರೊಬ್ಬರನ್ನು ವೃದ್ದಾಶ್ರಮಕ್ಕೆ ಸೇರಿಸಿ ಪೊಲೀಸ್ ದಪೇದಾರರೊಬ್ಬರು ಮಾನವೀಯತೆ ಮೆರೆದಿರುವ ಘಟನೆ ಶಿವಮೊಗ್ಗ ಕೋಣದೂರು ಗ್ರಾಮದ ಹಾದಿಗಲ್ಲು ಬಳಿ ನಡೆದಿದೆ.
ತೀರ್ಥಹಳ್ಳಿ ತಾಲೂಕು ಹಾದಿಗಲ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೊಸಕೊಪ್ಪ ಎಂಬ ಗ್ರಾಮದಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಇದೇ ಗ್ರಾಮದ ಸಿನೇಗೌಡ ಎಂಬುವರು ಕೊರೆವ ಚಳಿಯಲ್ಲಿ, ರಸ್ತೆ ಬದಿ ಮಲಗಿದ್ದರು. ಈ ಬಗ್ಗೆ ಶಾಸಕ ಆರಗ ಜ್ಞಾನೇಂದ್ರ ಅವರ ಗಮನಕ್ಕೆ ಬಂದಿದೆ. ಶಾಸಕರು ಕೋಣದೂರು ಉಪಠಾಣೆಯ ದಫೇದಾರ್ ಮೇಘರಾಜ್ ರವರ ಗಮನಕ್ಕೆ ತಂದಿದ್ದಾರೆ.
ವೃದ್ದನನ್ನು ವೃದ್ದಾಶ್ರಮ ಸೇರಿಸಿ ಮಾನವೀಯತೆ ಮೆರೆದ ಪೊಲೀಸ್ ಸಿನೇಗೌಡರಿಗೆ ಏಳು ಜನ ಮಕ್ಕಳು ಇದ್ದರೂ ಇವರನ್ನು ಯಾರು ನೋಡಿಕೊಳ್ಳದೇ ಬೀದಿಗೆ ತಳ್ಳಿದ್ದಾರೆ. ಊಟವಿಲ್ಲದೇ, ಚಳಿಯಲ್ಲಿ ರಸ್ತೆ ಬದಿ ಮಗಲಗಿದ್ದ ಸಿನೇಗೌಡರ ಬಳಿ ಹೋದ ದಫೇದಾರ್ ಮೇಘರಾಜ್ ರವರು ವೃದ್ದರಿಗೆ ತಿಂಡಿ, ನೀರನ್ನು ನೀಡಿ ಉಪಚರಿಸಿದ್ದಾರೆ. ಸಿನೇ ಗೌಡರ ಕಥೆ ಕೇಳಿ, ಮಕ್ಕಳು ಯಾರು ನೋಡಿಕೊಳ್ಳುವುದಿಲ್ಲ ಎಂದು ತಿಳಿದು ನಂತರ ತಾವೇ ಸ್ಥಳೀಯರ ನೆರವಿನಿಂದ ಸ್ನಾನ ಮಾಡಿಸಿ ಉಪಚರಿಸಿ ನಂತರ ಭದ್ರಾವತಿಯ ಆಗರದಹಳ್ಳಿಯಲ್ಲಿನ ವೃದ್ದಾಶ್ರಮಕ್ಕೆ ಅಂಬ್ಯುಲೆನ್ಸ್ ನಲ್ಲಿ ಕಳುಹಿಸಿಕೊಟ್ಟಿದ್ದಾರೆ.
ಆದರೆ ಸಿನೇಗೌಡರು ನಿತ್ರಾಣಗೊಂಡಿದ್ದ ಕಾರಣ ಇವರನ್ನು ವೃದ್ದಾಶ್ರಮಕ್ಕೆ ಸೇರಿಸಿಕೊಂಡಿಲ್ಲ. ನಂತರ ಪುನಃ ಇವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ಚಿಕಿತ್ಸೆಗೆ ಕಳುಹಿಸಿಕೊಡಲಾಗಿದೆ. ಸಿನೇಗೌಡರು ಸುಧಾರಿಸಿಕೊಂಡ ನಂತರ ಅವರನ್ನು ವೃದ್ದಾಶ್ರಮಕ್ಕೆ ಕಳುಹಿಸಿಕೊಡಲಾಗುವುದು ಎಂದು ದಪೇದಾರ್ ಮೇಘರಾಜ್ ಈ ಟಿವಿ ಭಾರತಕ್ಕೆ ತಿಳಿಸಿದ್ದಾರೆ. ಮೇಘರಾಜರ ಮಾನವೀಯತೆಯ ಗುಣಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.