ಕರ್ನಾಟಕ

karnataka

ETV Bharat / state

1 ಗಂಟೆ ಪೊಲೀಸ್ ಆದ 8 ವರ್ಷದ ಪೋರ... ಆಜಾನ್​ ಖಾನ್​ ಆಸೆ ಈಡೇರಿಸಿದ ಶಿವಮೊಗ್ಗ ಪೊಲೀಸರು - ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆ

ಹೃದಯ ಸಂಬಂಧಿ ಕಾಯಿಲೆ ಇರುವ ಎಂಟೂವರೆ ವರ್ಷದ ಪುಟ್ಟ ಬಾಲಕನ ಪೊಲೀಸ್​ ಆಗುವ ಆಸೆಯನ್ನು ಶಿವಮೊಗ್ಗ ಪೊಲೀಸರು ಈಡೇರಿಸಿದ್ದಾರೆ.

ಆಜಾನ್​ ಖಾನ್
ಆಜಾನ್​ ಖಾನ್

By

Published : Aug 17, 2023, 8:12 AM IST

Updated : Aug 17, 2023, 1:08 PM IST

ಬಾಲಕನ ಆಸೆ ಈಡೇರಿಸಿದ ಪೊಲೀಸರ ಮತ್ತು ತಂದೆಯ ಹೇಳಿಕೆ.

ಶಿವಮೊಗ್ಗ:ಎಂಟೂವರೆ ವರ್ಷದ ಪುಟ್ಟ ಬಾಲಕ ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಯ ಪೊಲೀಸ್ ಆಗಿ ಒಂದು ಗಂಟೆ ಕರ್ತವ್ಯ ನಿರ್ವಹಿಸಿ ಗಮನ ಸೆಳೆದಿದ್ದಾನೆ. ಪುಟ್ಟ ಬಾಲಕನ ಆದೇಶಕ್ಕೆ ಎಲ್ಲ ಪೊಲೀಸರು ಸೆಲ್ಯೂಟ್ ಹೊಡೆದು ಎಸ್ ಸಾರ್‌ ಅಂದ್ರು. ಹೌದು ಶಿವಮೊಗ್ಗದ ದೊಡ್ಡಪೇಟೆ ಪೊಲೀಸ್ ಠಾಣೆಗೆ ಬುಧವಾರ ಒಂದು ಗಂಟೆಯ ಮಟ್ಟಿಗೆ ಎಂಟೂವರೆ ವರ್ಷದ ಬಾಲಕ ಪೊಲೀಸ್​ ಇನ್ಸ್​ಪೆಕ್ಟ್​​ರ್​ ಆಗಿ ಕರ್ತವ್ಯ ನಿರ್ವಹಿಸಿದ್ದು ವಿಶೇಷವಾಗಿತ್ತು.

ಈ ಬಾಲಕನ ಹೆಸರು ಆಜಾನ್ ಖಾನ್. ಈತ ಈಗ 1 ನೇ ತರಗತಿಯಲ್ಲಿ ಓದುತ್ತಿದ್ದಾನೆ.‌‌ ಪೊಲೀಸ್ ಠಾಣೆಗೆ ಬಂದು ತನ್ನ ಆಸೆಯಂತೆ ಪೊಲೀಸ್​ ಇನ್ಸ್​ಪೆಕ್ಟ್​​ರ್ ಆಗಿ ಕರ್ತವ್ಯ ನಿರ್ವಹಿಸಿದನು. ಠಾಣೆಗೆ ಬಂದಾಗ ಖುದ್ದು ಎಸ್ಪಿ ಅವರು ಹೂವಿನ ಬೊಕ್ಕೆ‌ ನೀಡಿ ವೆಲ್‌ಕಮ್ ಮಾಡಿಕೊಂಡರು. ನಂತರ ಠಾಣೆ ಒಳಗೆ ಹೋಗಿ ಪೊಲೀಸ್​ ಇನ್ಸ್​ಪೆಕ್ಟ್​​ರ್ ಖುರ್ಚಿಯಲ್ಲಿ‌ ಕುಳಿತು ಕೊಂಡು ಠಾಣೆಯ ಸಿಬ್ಬಂದಿಯನ್ನು ಕರೆಯಿಸಿ ರೂಲ್ ಕಾಲ್ ನಡೆಸಲಾಯಿತು.

ಸಿಬ್ಬಂದಿಯ ಕುಂದು ಕೂರತೆ ಆಲಿಸಿದ್ದು, ಈ ವೇಳೆ ಮಹಿಳಾ ಪೊಲೀಸ್ ಪೇದೆಯು ಒಂದು ದಿನ ರಜೆ ಬೇಕು ಎಂದಾಗ ಅವರಿಗೆ ಆಜಾನ್ ಖಾನ್ ಒಂದು ದಿನ ಯಾಕೆ ಎರಡು ದಿನ ರಜೆ ತೆಗೆದುಕೊಳ್ಳಿ ಎಂದು ರಜೆ ನೀಡಿದ್ದಾನೆ. ಠಾಣೆಗೆ ಬಂದ ನಂತರ ರಿಜಿಸ್ಟಾರ್​ನಲ್ಲಿ ಸಹಿ ಮಾಡಿ, ವಿವಿಧ ಐಪಿಸಿ ಕಾಯ್ದೆಯ ಬಗ್ಗೆ ಮಾಹಿತಿ ಪಡೆದುಕೊಂಡ. ನಂತರ ಸಿಬ್ಬಂದಿಯನ್ನು ಕರೆಯಿಸಿ ಇಂದು ಏನೇನೂ ಕರ್ತವ್ಯ ನಿರ್ವಹಿಸಿದ್ದಿರಿ ಎಂದು ಪ್ರಶ್ನಿಸಿದ್ದಾನೆ.

ಪೊಲೀಸ್​ ಸಿಬ್ಬಂದಿಗೇ ಪಾಠ:ನಂತರ ಠಾಣೆಯ ಸಿಬ್ಬಂದಿಯೇ ಕಳ್ಳನಾಗಿ ಬಂದು ನಿಂತಾಗ ಆಜಾನ್ ಖಾನ್ ಯಾಕೆ ನೀನು ಕಳ್ಳತನ ಮಾಡಿದ್ದಿಯಾ ..? ಮುಂದೆ ಕಳ್ಳತನ ಮಾಡಬೇಡ, ದುಡಿದು ತಿನ್ನಬೇಕು ಎಂದು‌ ಕಿವಿ ಮಾತು‌ ಹೇಳಿದಾಗ, ಆತ ನಾನು ನಾಳೆಯಿಂದ ಕಳ್ಳತನ ಮಾಡಲ್ಲ ಎಂದಿದ್ದಾನೆ. ಆಗ ಆಜಾನ್ ಖಾನ್ ನಾಳೆಯಿಂದ ಅಲ್ಲ ಈಗನಿಂದಲೇ ಕಳ್ಳತನ ನಿಲ್ಲಿಸಿ, ಕೆಲಸಕ್ಕೆ ಹೋಗು ಎಂದು ತಿಳಿ ಹೇಳಿದ್ದು ವಿಶೇಷವಾಗಿತ್ತು. ನಂತರ ಠಾಣೆಯನ್ನು ಒಂದು ಸುತ್ತು ಹಾಕಿ ಎಲ್ಲ ಸಿಬ್ಬಂದಿ ಪರಿಚಯ ಮಾಡಿಕೊಂಡನು. ಈ ವೇಳೆ ಠಾಣೆಯ ಪಿಐ ಅಂಜನ್ ಕುಮಾರ್​ ಅವರ ಬಳಿ ಪೊಲೀಸ್ ಕರ್ತವ್ಯಗಳೇನು ಎಂಬುದರ ಕುರಿತು ತಿಳಿದುಕೊಂಡನು.

ಯಾರೀ ಆಜಾನ್ ಖಾನ್?:ಶಿವಮೊಗ್ಗದ ಊರುಗಡೂರಿನ ತಬ್ರೇಜ್ ಖಾನ್ ಹಾಗೂ ನಗ್ಮಾ ದಂಪತಿಯ ದ್ವಿತೀಯ ಪುತ್ರನೇ ಈ ಆಜಾನ್ ಖಾನ್​. ಈತ ಹುಟ್ಟಿನಿಂದಲೇ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದಾನೆ. ಆಜಾನ್​ಗೆ ಪೊಲೀಸ್ ಆಗಬೇಕೆಂಬ ಆಸೆಯನ್ನೂ ವ್ಯಕ್ತಪಡಿಸಿದ್ದಾನೆ. ಈತನ ಪೋಷಕರು ಶಿವಮೊಗ್ಗ ಜಿಲ್ಲಾ ವರಿಷ್ಠಾಧಿಕಾರಿ ಮಿಥುನ್ ಕುಮಾರ್​ ಅವರ ಬಳಿ ಬಂದು ತಮ್ಮ ಮಗನ ಸ್ಥಿತಿಯನ್ನು ವಿವರಿಸಿದ್ದಾರೆ.

ಈತ ಹುಟ್ಟುವಾಗಲೇ ಈತನ ಹೃದಯ ಸಣ್ಣದಾಗಿತ್ತು. ಸಾಕಷ್ಟು ವೈದ್ಯರ ಬಳಿ ತೋರಿಸಿದರೂ ಪ್ರಯೋಜನವಾಗಿಲ್ಲ. ಹಾಲಿ ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಆಜಾನ್ ಖಾನ್​ ಶಿವಮೊಗ್ಗದ ನಿವಾಸಿಯಾಗಿದ್ದರೂ ಸಹ ಹಾಲಿ ಬಾಳೆಹೊನ್ನೂರಿನಲ್ಲಿ‌ ನೆಲೆಸಿದ್ದಾರೆ. ಬಾಲಕ ಆಜಾನ್ ಖಾನ್​ನ ಪರಿಸ್ಥಿತಿ ಹಾಗೂ ಪೋಷಕರ ಕೋರಿಕೆ‌‌ ಮೇಲೆ ಆತನ ಆಸೆಯಂತೆ ಶಿವಮೊಗ್ಗ ಜಿಲ್ಲೆಯ ಇತಿಹಾಸದಲ್ಲಿಯೇ ಪ್ರಥಮ ಭಾರಿಗೆ ಬಾಲಕನೋರ್ವ ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸಿದ್ದಾನೆ.

ಸಂತಸ ವ್ಯಕ್ತಪಡಿಸಿದ ಪುಟ್ಟ ಪೋರ:ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸಿದ ಪೊಲೀಸ್​ ಬಾಲಕ ಮಾತನಾಡಿ, ನನಗೆ ಪೊಲೀಸ್ ಆಗಬೇಕೆಂದು ಆಸೆ. ಅದಕ್ಕೆ ನಾನು ನನ್ನ ತಂದೆಗೆ ತಿಳಿಸಿದೆ. ನಾನು ಪೊಲೀಸ್ ಆಗಲು ಸಹಾಯ ಮಾಡಿದ ಎಸ್ಪಿ ಅವರಿಗೆ ಧನ್ಯವಾದಗಳು, ನಾನು ಪೊಲೀಸ್ ಠಾಣೆಗೆ ಬಂದಿದ್ದು ಖುಷಿಯಾಯಿತು ಎಂದು ಸಂತಸ ವ್ಯಕ್ತಪಡಿಸಿದ್ದಾನೆ ಬಾಲಕ.

ಬಾಲಕನ ಖುಷಿ ನೋಡಿ ಆನಂದಪಟ್ಟ ಎಸ್​​​ಪಿ:’’ಬಾಲಕ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಬಗ್ಗೆ ಪೋಷಕರು ನನಗೆ ತಿಳಿಸಿದರು. ಅದಕ್ಕಾಗಿ ನಾವು ಮಾನವೀಯತೆ ದೃಷ್ಟಿಯಿಂದ ಆಜಾನ್ ಖಾನ್​ಗೆ ಒಂದು ಗಂಟೆ ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸಲು ಅವಕಾಶ ನೀಡಲಾಯಿತು. ಆತನನ್ನು ಪೊಲೀಸ್​ ಜೀಪ್​ನಲ್ಲೇ ಠಾಣೆಗೆ ಕರೆತರಲಾಯಿತು. ಈ ವೇಳೆ, ನಮ್ಮ ಪೊಲೀಸ್ ಸಿಬ್ಬಂದಿ‌ ಆತನಿಗೆ ಸೆಲ್ಯೂಟ್ ಹೊಡೆದು ಒಳಗೆ ಕರೆದುಕೊಂಡು ಬಂದು ಕರ್ತವ್ಯ ನಿರ್ವಹಿಸಲು ಸಹಕಾರ ನೀಡಲಾಯಿತು. ಠಾಣೆಗೆ ಬಂದ ಬಾಲಕ ಪೊಲೀಸ್ ಠಾಣೆಗೆ ಬಂದು ತುಂಬಾ ಖುಷಿಯಾಗಿದ್ದಾನೆ. ಬಾಲಕನ ಆಸೆಗಾಗಿ ಈ ಅವಕಾಶ ಕಲ್ಪಿಸಲಾಗಿದೆ‘‘ ಎಂದು ಎಸ್​​​ಪಿ ಮಿಥುನ್ ಕುಮಾರ್ತಿಳಿಸಿದರು.

ಬಾಲಕ ಆಜಾನ್ ಖಾನ್​ಗಾಗಿ ಒಂದು ಗಂಟೆ ತಮ್ಮ ಸ್ಥಾನ ಬಿಟ್ಟು ಕೊಟ್ಟಿದ್ದ ದೊಡ್ಡಪೇಟೆ ಪೊಲೀಸ್ ಠಾಣೆಯ ಪಿಐ ಅಂಜನ್ ಕುಮಾರ್ಮಾತನಾಡಿ, ಬಾಲಕನಿಗೆ ಇರುವ ಸಮಸ್ಯೆಯ ಬಗ್ಗೆ ಪೋಷಕರು ತಿಳಿಸಿದರು. ಎಸ್ಪಿ ಅವರು ಅನುಮತಿ ನೀಡಿದ ನಂತರ ಇಂದು ನಮ್ಮ ಪೊಲೀಸ್ ಠಾಣೆಗೆ ಆಜಾನ್ ಬಂದು ಕರ್ತವ್ಯ ನಿರ್ವಹಿಸಿದ್ದಾರೆ. ನಮ್ಮ ಕರ್ತವ್ಯದ ನಡುವೆ ಈ ರೀತಿಯ ಕೆಲಸ ಮಾಡಿದ್ದು ನಮಗೂ ಸಹ ಖುಷಿ ಎಂದು ತಿಳಿಸಿದ್ದಾರೆ.

ನಂತರ ಮಾತನಾಡಿದತಂದೆ ಆಬ್ರೆಜ್‌ ಖಾನ್, ​ ’’ಅವರು ನನ್ನ ಮಗನಿಗೆ ಹೃದಯ ಸಂಬಂಧಿ‌ ಕಾಯಿಲೆ ಇದೆ. ಈತ ಮೂರು ವರ್ಷ ಇದ್ದಾಗಲೇ ಸಮಸ್ಯೆ ತಿಳಿಯಿತು. ನಂತರ ಈತನಿಗೆ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆಜಾನ್ ಖಾನ್​ಗೆ ಹೃದಯ ಅರ್ಧ ಭಾಗ ಮಾತ್ರ ಇದೆ. ಈತನ ಹೃದಯದ ಆಪರೇಷನ್ ನಡೆಸಿ ಹೃದಯ ಬದಲಾಯಿಸಬಹುದು, ಇದರ ಜೊತೆಗೆ ಕೆಲ ಕೆಲ ಅಂಗಾಂಗಳು ಬೇಕಾಗಿವೆ. ಇವನದೇ ವಯಸ್ಸಿನ ಬಾಲಕರ ಹೃದಯ ಹಾಗೂ ಅಂಗಾಂಗ ಸಿಕ್ಕರೆ ಆಪರೇಷನ್ ಮಾಡಬಹುದು ಎಂದು ತಿಳಿಸಿದ್ದಾರೆ. ಇಂದು ಆತ ಪೊಲೀಸ್ ಆಗಲು ಸಹಕಾರ ನೀಡಿದ ಎಸ್ಪಿ ಅವರಿಗೆ ಅಭಿನಂದನೆ ಎಂದರು‘‘.

ಇದನ್ನೂ ಓದಿ:ಕುವೆಂಪು ವಿವಿ ಕುಲಸಚಿವರಾಗಿ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಸಿಇಒ ನೇಮಕ

Last Updated : Aug 17, 2023, 1:08 PM IST

ABOUT THE AUTHOR

...view details