ಶಿವಮೊಗ್ಗ:ಜಿಲ್ಲೆಯ ವಿಜಯನಗರ ಬಡಾವಣೆಯ ಮನೆಯೊಂದರಲ್ಲಿ ಇತ್ತೀಚೆಗೆ ನಡೆದಿದ್ದ ಒಂಟಿ ಮಹಿಳೆಯ ಕೊಲೆ ಪ್ರಕರಣದಲ್ಲಿ ಏಳು ಮಂದಿ ಆರೋಪಿಗಳನ್ನು ಶಿವಮೊಗ್ಗ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ದೋಚಿದ್ದ 35 ಲಕ್ಷ ರೂ ಹಣವನ್ನೂ ಜಪ್ತಿ ಮಾಡಿದ್ದಾರೆ.
ಘಟನೆಯ ವಿವರ: ಜೂನ್ 17ರಂದು ರಾತ್ರಿ 11 ಗಂಟೆಯ ಸುಮಾರಿಗೆ ವಿಜಯನಗರ ಬಡಾವಣೆಯ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದ ಮಹಿಳೆಯನ್ನು ಕೊಲೆ ಮಾಡಲಾಗಿತ್ತು. ಅಡುಗೆ ಮನೆಯಲ್ಲಿ 57 ವರ್ಷದ ಕಮಲಮ್ಮ ಎಂಬವರನ್ನು ಬಾಯಿ ಮುಚ್ಚಿ ಕುತ್ತಿಗೆ ಸೀಳಿ ಹತ್ಯೆ ಮಾಡಲಾಗಿತ್ತು. ಕಮಲಮ್ಮರನ್ನು ಅವರ ಮನೆಯ ಕಾರು ಚಾಲಕನೇ ಕೊಲೆ ಮಾಡಿ ಪರಾರಿಯಾಗಿದ್ದ ಎನ್ನುವ ಮಾಹಿತಿ ನಂತರ ಬಯಲಾಗಿತ್ತು. ಇದೀಗ ಆರೋಪಿ ಕಾರು ಚಾಲಕ ಹನುಮಂತ ನಾಯ್ಕ ಸೇರಿದಂತೆ ಒಟ್ಟು ಏಳು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಎ1 ಆರೋಪಿ ಹನುಮಂತ ನಾಯ್ಕ ಹಾಗು ಸಹಚರರಾದ ಪ್ರದೀಪ್, ಅಪ್ಪು ನಾಯ್ಕ, ಪ್ರಭು ನಾಯ್ಕ, ಸತೀಶ್, ರಾಜು ಹಾಗೂ ಕಾರು ನೀಡಿದ್ದ ಕೌಶಿಕ್ ಸೇರಿ ಸಂಚು ರೂಪಿಸಿದ್ದರು. ಕೊಲೆ ಮಾಡಿ ಮನೆಯಲ್ಲಿದ್ದ 35 ಲಕ್ಷ ರೂ. ದೋಚಿ ಪರಾರಿಯಾಗಿದ್ದರು.
ಮಹಿಳೆಯ ಪತಿ ಮಲ್ಲಿಕಾರ್ಜುನ್ ಹೊಸದುರ್ಗದಲ್ಲಿ ನೀರಾವರಿ ಇಲಾಖೆಯ ಇಂಜಿನಿಯರ್ ಆಗಿದ್ದು, ತಮ್ಮ ಸ್ನೇಹಿತರೊಂದಿಗೆ ಗೋವಾಗೆ ತೆರಳಿದ್ದರು. ಇವರು ಇದೇ ಕಾರು ಚಾಲಕನ ಸಹಾಯದಿಂದಲೇ ತಮ್ಮ ಮಗನ ಮೆಡಿಕಲ್ ವ್ಯಾಸಂಗ ಮತ್ತು ಪರೀಕ್ಷೆಗಾಗಿ 35 ಲಕ್ಷ ರೂ. ಜೋಡಿಸಿಟ್ಟಿದ್ದರಂತೆ. ಈ ಹಣದ ಮೇಲೆ ಕಣ್ಣು ಹಾಕಿದ್ದ ಹನುಮಂತ ನಾಯ್ಕ, ತನ್ನ ಸಹಚರರೊಂದಿಗೆ ಸೇರಿಕೊಂಡು ಜೂನ್ 16ರಂದು ಬಂದು ಕಮಲಮ್ಮ ಅವರ ಬಳಿ ಕಾರಣ ಹೇಳಿ 3 ಸಾವಿರ ರೂ ಹಣ ಕೇಳಿದ್ದನು.
ಆ ದಿನ ದೂರವಾಣಿಯಲ್ಲಿಯೇ ನಾನಿಲ್ಲದೇ ಇದ್ದಾಗ ಬಂದು ಹಣ ಕೇಳಬೇಡ ಎಂದು ಮಲ್ಲಿಕಾರ್ಜುನ್ ಗದರಿಸಿದ್ದು, ಹನುಮಂತ ನಾಯ್ಕ ವಾಪಸ್ ತೆರಳಿದ್ದ. ಜೂನ್ 17ರಂದು ಮಧ್ಯಾಹ್ನ ಸ್ಕೆಚ್ ಹಾಕಿಕೊಂಡು ಮನೆಗೆ ಬಂದ ಹನುಮಂತ ನಾಯ್ಕ್ ಹಣ ಕೇಳಿದ್ದಾನೆ. ಈ ವೇಳೆ, ಜೊತೆಗಿದ್ದ ಆರೋಪಿಯೊಬ್ಬ ಕಮಲಮ್ಮರಿಗೆ ನೀರು ತರಲು ಹೇಳಿದ್ದಾನೆ. ಅಡುಗೆ ಮನೆಗೆ ತೆರಳಿದ್ದ ಕಮಲಮ್ಮ ಅವರಿಗೆ ಹಿಂಬದಿಯಿಂದ ಹೋಗಿ ಬಾಯಿ ಮುಚ್ಚಿ ಕೊಲೆ ಮಾಡಿದ್ದರು. ಬಿಡಿಸಿಕೊಳ್ಳಲು ಯತ್ನಿಸಿದ್ದ ಅವರಿಗೆ ಕಾಯಿ ಸುಲಿಯುವ ರಾಡಿನಿಂದ ಕುತ್ತಿಗೆ ಭಾಗಕ್ಕೆ ಹಲ್ಲೆ ನಡೆಸಿ, ಕೊಲೆ ಮಾಡಿದ್ದರು. ಬಳಿಕ ಬೀರುವಿನಲ್ಲಿದ್ದ 35 ಲಕ್ಷ ರೂ ಹಣ ದೋಚಿ ಪರಾರಿಯಾಗಿದ್ದರು.