ಶಿವಮೊಗ್ಗ: ನಗರವೇನೋ ಸ್ಮಾರ್ಟ್ ಸಿಟಿ ಯೋಜನೆಗೆ ಆಯ್ಕೆಯಾಗಿದ್ದು, ಇಡೀ ನಗರದಾದ್ಯಂತ ಕಾಮಗಾರಿಗಳು ಭರದಿಂದ ಸಾಗಿವೆ. ಆದರೆ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಅವೈಜ್ಞಾನಿಕವಾಗಿ ನಡೆಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಹೀಗಾಗಿ ಜೀವ ಕೈಯಲ್ಲಿ ಹಿಡಿದು ವಾಹನ ಚಾಲನೆ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ ಅಂತ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅವೈಜ್ಞಾನಿಕ ಕಾಮಗಾರಿ ಕುರಿತು ಪ್ರತಿಕ್ರಿಯೆ ಶಿವಮೊಗ್ಗ ಸ್ಮಾರ್ಟ್ ಸಿಟಿ ಯೋಜನೆಯ ಕಾಮಗಾರಿಗಳು ಆರಂಭಗೊಂಡು ಈಗಾಗಲೇ ಎರಡು ವರ್ಷಗಳೇ ಕಳೆದಿದೆ. ಆದರೆ ಯಾವೊಂದು ಕಾಮಗಾರಿಗಳು ಇನ್ನೂ ಪೂರ್ಣಗೊಂಡಿಲ್ಲ. ಕೊರೊನಾ ಲಾಕ್ಡೌನ್ ಅವಧಿಯಲ್ಲಿ ವಾಹನ ಸಂಚಾರ ವಿರಳವಾಗಿರುತ್ತದೆ, ಈ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಬೇಕು ಎಂಬ ಉದ್ದೇಶದಿಂದ ಹೆಚ್ಚಿನ ರಸ್ತೆಗಳಲ್ಲಿ ಗುಂಡಿ ತೆಗೆಯಲಾಗಿತ್ತು. ಆದರೆ ಅನ್ಲಾಕ್ ಆದರೂ ಕಾಮಗಾರಿ ಮಾತ್ರ ಪೂರ್ಣಗೊಂಡಿಲ್ಲ. ಇದೇ ವೇಳೆಗೆ ಮಳೆಗಾಲ ಆರಂಭಗೊಂಡಿದ್ದರಿಂದಾಗಿ ಕಾಮಗಾರಿ ನಡೆಸುವುದು ಅಸಾಧ್ಯ ಎನ್ನುವ ಸ್ಥಿತಿ ನಿರ್ಮಾಣವಾಗಿದೆ.
ಪರಿಣಾಮ, ಜನರು ಗುಂಡಿ ತುಂಬಿದ ರಸ್ತೆಗಳಲ್ಲೇ ಪ್ರಯಾಣ ಮಾಡಬೇಕು ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಕಾಮಗಾರಿಗಳ ಎಸ್ಆರ್ ರೇಟ್ ಹೆಚ್ಚಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಗುತ್ತಿಗೆದಾರರು ವಿವಿಧ ಕಾರಣ ನೀಡಿ ಕಾಮಗಾರಿ ವಿಳಂಬ ಮಾಡುತ್ತಿದ್ದಾರೆ ಮಾಡುತ್ತಿದ್ದಾರೆ ಎಂಬ ಆರೋಪಗಳೂ ಸಹ ಕೇಳಿಬರುತ್ತಿವೆ.
ಶಿವಮೊಗ್ಗ ನಗರದ ಮೆಗ್ಗಾನ್ ಆಸ್ಪತ್ರೆ ಸೇರಿದಂತೆ ಪ್ರಮುಖ ಆಸ್ಪತ್ರೆಗಳು ಇರುವುದು ಶಿವಮೊಗ್ಗದ ಕುವೆಂಪು ರಸ್ತೆಯಲ್ಲಿಯೇ. ಹೀಗಾಗಿ ಶಿವಮೊಗ್ಗ ಜಿಲ್ಲೆ ಮಾತ್ರವಲ್ಲದೇ ಅಕ್ಕಪಕ್ಕದ ಜಿಲ್ಲೆಗಳಿಂದ ಪ್ರತಿದಿನ ನೂರಾರು ರೋಗಿಗಳು ಈ ಆಸ್ಪತ್ರೆಗಳಿಗೆ ಆಗಮಿಸುತ್ತಾರೆ. ಆದರೆ ಕುವೆಂಪು ರಸ್ತೆಯನ್ನು ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಎಲ್ಲೆಂದರಲ್ಲಿ ಅಗೆದು ಬಿಡಲಾಗಿದೆ. ಹೀಗಾಗಿ ಆ್ಯಂಬುಲೆನ್ಸ್ನಲ್ಲಿ ರೋಗಿಗಳನ್ನು ಆಸ್ಪತ್ರೆಗೆ ಕರೆತರುವುದೂ ಸಹ ಸವಾಲಾಗಿ ಪರಿಣಮಿಸಿದೆ.
ಇದನ್ನೂ ಓದಿ:ಬೆಳ್ಳೂರು ಕ್ರಾಸ್ ಬಳಿ ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು, ಹಲವರ ಸ್ಥಿತಿ ಗಂಭೀರ
ಅಷ್ಟೇ ಅಲ್ಲದೇ ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಇಡೀ ನಗರವನ್ನು ಅಗೆದು ಹಾಳು ಮಾಡಿರುವುದರಿಂದ ನಗರದಾದ್ಯಂತ ಟ್ರಾಫಿಕ್ ಸಮಸ್ಯೆ ಸಹ ದೊಡ್ಡ ತಲೆನೋವಾಗಿ ಪರಿಣಿಮಿಸಿದೆ. ಈ ಎಲ್ಲ ಕಾರಣಗಳಿಂದಾಗಿ ಸಾರ್ವಜನಿಕರು ಪ್ರತಿನಿತ್ಯ ಅಧಿಕಾರಿಗಳಿಗೆ, ಸಂಬಂಧಪಟ್ಟವರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ.
ಈಗಾಗಲೇ ಆರಂಭಿಸಿರುವ ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಈಗಾಗಲೇ ಆರಂಭಗೊಂಡಿರುವ ಕಾಮಗಾರಿಗಳು ಮುಗಿಯುವ ಮೊದಲು ಬೇರೆ ಯಾವುದೇ ಕಾಮಗಾರಿ ಆರಂಭಿಸಬಾರದು. ಯಾರಾದರೂ ಗುತ್ತಿಗೆದಾರರು ಎಸ್ ಆರ್ ದರ ಹೆಚ್ಚಿಸಿಕೊಳ್ಳುವ ಉದ್ದೇಶದಿಂದ ಕಾಮಗಾರಿ ವಿಳಂಬ ಮಾಡುತ್ತಿದ್ದಲ್ಲಿ ಆತನನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.