ಶಿವಮೊಗ್ಗ:ಯಡಿಯೂರಪ್ಪ ಸಿಎಂ ಆದ ನಂತರ ಜಿಲ್ಲೆಯಲ್ಲಿ ಅಭಿವೃದ್ಧಿ ಪರ್ವವೇ ಪ್ರಾರಂಭವಾಗಿದೆ. ಹಲವು ಯೋಜನೆಗಳು ಪ್ರಗತಿಯಲ್ಲಿವೆ. ಇದರಲ್ಲಿ ವಿಮಾನ ನಿಲ್ದಾಣ, ರೈಲ್ವೆ ಕೋಚಿಂಗ್ ಡಿಪೋ, ಶಿಕಾರಿಪುರ- ರಾಣೆಬೆನ್ನೂರು ರೈಲು ಮಾರ್ಗ ಹಾಗೂ ಸ್ಮಾರ್ಟ್ ಸಿಟಿ ಯೋಜನೆ ಸೇರಿದಂತೆ ಹಲವು ಯೋಜನೆಗಳು ಜಾರಿಯಲ್ಲಿವೆ. ಇದರಲ್ಲಿ ಸಿಮ್ಸ್ ಮೆಡಿಕಲ್ ಕಾಲೇಜು, ಪಶು ವೈದ್ಯಕೀಯ ಕಾಲೇಜು, ಆಯುರ್ವೇದ ಕಾಲೇಜು, ಕೃಷಿ ಮತ್ತು ತೋಟಗಾರಿಕಾ ವಿವಿ ಸೇರಿದಂತೆ ಜೋಗ ಜಲಪಾತ ಅಭಿವೃದ್ಧಿಗೆ ಅನುದಾನ ತರಬೇಕಿದೆ.
ಈ ಕುರಿತಂತೆ ಸಂಸದರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸಾಲು ಸಾಲು ಸಭೆ ನಡೆಸುತ್ತಿರುತ್ತಾರೆ. ಈ ನಿಟ್ಟಿನಲ್ಲಿ ಹೊಸ ಯೋಜನೆಗಳನ್ನು ತರುವುದಕ್ಕಿಂತ ಹಳೆ ಯೋಜನೆಗಳ ಅನುಷ್ಠಾನಕ್ಕೆ ಬೇಕಾದ ಅನುದಾನ ತರುವುದು ಮುಖ್ಯವಾಗಿದೆ.
ಶಿವಮೊಗ್ಗ ವೈದ್ಯಕೀಯ ವಿಜ್ಞಾನ ಮಹಾವಿದ್ಯಾಲಯ(ಸಿಮ್ಸ್) ಮೇಲ್ದರ್ಜೆಗೆ ಏರಿಸಲು, ಅದೇ ರೀತಿ ಸಾಗರ ತಾಲೂಕು ಇರುವಕ್ಕಿಯಲ್ಲಿ ನಡೆಯುತ್ತಿರುವ ನೂತನ ಕೃಷಿ, ತೋಟಗಾರಿಕಾ ವಿವಿಯ ಅಭಿವೃದ್ದಿಗೆ 200 ಕೋಟಿ ರೂ. ಬೇಕಿದೆ. ಅಲ್ಲದೆ, ಪಶು ವೈದ್ಯಕೀಯ ಕಾಲೇಜು ಮೇಲ್ದರ್ಜೆಗೆ ಏರಿಸಬೇಕಿದೆ. ಆಯುರ್ವೇದ ಕಾಲೇಜಿನ ನೂತನ ಕಟ್ಟಡ ನಿರ್ಮಿಸಬೇಕಿದೆ. ನೂತನ ವಿಮಾನ ನಿಲ್ದಾಣಕ್ಕೆ 350 ಕೋಟಿ ರೂ. ಅನುದಾನ ಬೇಕು. ಆದರೆ ಈಗ 100 ಕೋಟಿ ರೂ.ನಲ್ಲಿ ಕಾಮಗಾರಿ ನಡೆಯುತ್ತಿದೆ. ಮುಂದುವರೆದ ಕಾಮಗಾರಿಗೆ ಇನ್ನೂ 250 ಕೋಟಿ ರೂ. ಬೇಕಿದೆ. ಶಿಕಾರಿಪುರ- ರಾಣೆಬೆನ್ನೂರು ರೈಲ್ವೆ ಮಾರ್ಗ 1250 ಕೋಟಿ ರೂ ನಡೆಯುತ್ತಿದೆ. ಈಗಿನ್ನೂ ಭೂ ಸ್ವಾಧೀನ ಕಾರ್ಯ ನಡೆಯುತ್ತಿದೆ. ಈಗ 750 ಎಕರೆ ಭೂಸ್ವಾಧೀನ ಆಗಬೇಕಿದೆ. ಇದಕ್ಕಾಗಿಯೇ 300 ರಿಂದ 400 ಕೋಟಿ ರೂ. ಬೇಕಾಗುತ್ತದೆ. ರೈಲ್ವೆ ಕೋಚಿಂಗ್ ನಿರ್ಮಾಣಕ್ಕೆ 100 ಕೋಟಿ ರೂ. ಬೇಕಾಗುತ್ತದೆ. ಇವೆಲ್ಲದಕ್ಕೂ ಕೇಂದ್ರ ಬಜೆಟ್ನಲ್ಲಿ ಅನುದಾನ ಸಿಗುತ್ತಾ ಎಂಬುದನ್ನು ಕಾದು ನೋಡಬೇಕಿದೆ.
ಈ ಬಗ್ಗೆ ಮಾತನಾಡಿದ ಸಂಸದ ಬಿ.ವೈ. ರಾಘವೇಂದ್ರ, ಮುಂಬೈ- ಬೆಂಗಳೂರು ಕೈಗಾರಿಕಾ ಕಾರಿಡಾರ್ ಯೋಜನೆಗೆ ಅನುಮೋದನೆ ಕಳುಹಿಸಲಾಗಿತ್ತು. ರಾಷ್ಟ್ರೀಯ ಹೆದ್ದಾರಿಯಿಂದ 100 ಕಿ.ಮೀ ಒಳಗೆ ಇರುವ ಜಿಲ್ಲೆಗಳು ಕಾರಿಡಾರ್ ಯೋಜನೆಗೆ ಒಳಪಡುವುದರಿಂದ ಹರಿಹರ- ಹೊನ್ನಾಳಿ- ಶಿವಮೊಗ್ಗ ಮಾರ್ಗದ ಬಗ್ಗೆ ಚರ್ಚೆ ನಡೆದಿದೆ ಎಂದರು.
ಜನಸಾಮಾನ್ಯರಿಗೂ ಕೇಂದ್ರದ ಬಜೆಟ್ ಮೇಲೆ ನೀರಿಕ್ಷೆಗಳಿವೆ. ಚುನಾವಣಾ ಪ್ರಚಾರಕ್ಕೆ ಬಂದಿದ್ದ ಅಮಿತ್ ಶಾ ಅವರು ತೀರ್ಥಹಳ್ಳಿಯಲ್ಲಿ ಅಡಿಕೆ ಸಂಶೋಧನಾ ಕೇಂದ್ರ ಮಾಡುವ ಬಗ್ಗೆ ಘೋಷಿಸಿದ್ದರು. ಆದರೆ ಇನ್ನೂ ಅದು ಕಾರ್ಯರೂಪಕ್ಕೆ ಬಂದಿಲ್ಲ. ಹೀಗಾಗಿ ಅದಷ್ಟು ಬೇಗ ಅಡಿಕೆ ಸಂಶೋಧನಾ ಕೇಂದ್ರ ಪ್ರಾರಂಭಿಸಬೇಕು ಎಂಬ ಬೇಡಿಕೆ ಇದೆ. ಅಷ್ಟೇ ಅಲ್ಲದೆ, ಹಿಂದೆ ಘೋಷಣೆ ಮಾಡಿದ ಹಲವು ಯೋಜನೆಗಳಿಗೆ ಹಣ ಬಿಡುಗಡೆ ಮಾಡಬೇಕು. ಶಿವಮೊಗ್ಗ-ಹರಿಹರ ರೈಲು ಮಾರ್ಗ ಸರ್ವೆ ನಡೆಸಿ, ಜಾರಿ ಮಾಡಬೇಕು. ರಾಣೆಬೆನ್ನೂರು ರೈಲು ಮಾರ್ಗವನ್ನು ಅದಷ್ಡು ಬೇಗ ಮುಗಿಸಬೇಕು. ಡಿಆರ್ಡಿಓ ಕೇಂದ್ರ, ಕೇಂದ್ರಿಯ ವಿದ್ಯಾಲಯ, ಡಿಫೆನ್ಸ್ ಸಂಶೋಧನಾ ಕೇಂದ್ರಗಳು ಘೋಷಣೆಯಾಗಿವೆ. ಘೋಷಣೆಯಾದಂತೆ ಜಾರಿಯಾಗಬೇಕು. ಸ್ಮಾರ್ಟ್ ಸಿಟಿ ಯೋಜನೆಯನ್ನು ಅದಷ್ಟು ಬೇಗ ಪೂರ್ಣಗೊಳಿಸಬೇಕು ಎಂಬುದು ಈ ಭಾಗದ ಸಾರ್ವಜನಿಕರ ಒತ್ತಾಯವಾಗಿದೆ.