ಶಿವಮೊಗ್ಗ : ಪ್ರೀತಿಸಿ ಮದುವೆಯಾದ ಜೋಡಿ ರಕ್ಷಣೆ ನೀಡುವಂತೆ ನಗರದ ಜಿಲ್ಲಾ ವರಿಷ್ಠಾಧಿಕಾರಿ ಕಚೇರಿಗೆ ಬಂದು ಮನವಿ ಸಲ್ಲಿಸಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಜಿಲ್ಲೆಯ ಕಾಶಿಪುರದ ತಮಿಳರ ಕ್ಯಾಂಪ್ನ ನಿವಾಸಿಗಳಾದ ಅಮೃತ ಹಾಗೂ ಗೋಪಿನಾಥ್ ಮನವಿ ಸಲ್ಲಿಸಿದ್ದಾರೆ.
ಅಮೃತ ಹಾಗೂ ಗೋಪಿನಾಥ್ ಅವರು ಕಳೆದ ಏಳು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಅಮೃತ ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಎಸ್ಸಿ ಪದವಿ ವ್ಯಾಸಂಗವನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದಾರೆ. ಗೋಪಿನಾಥ್ ಎಗ್ ರೈಸ್ ಅಂಗಡಿ ಕೆಲಸ ಮಾಡಿಕೊಂಡಿದ್ದಾರೆ. ಇವರ ಪ್ರೀತಿಗೆ ಅಮೃತ ಮನೆಯವರಿಂದ ವಿರೋಧ ವ್ಯಕ್ತವಾಗಿತ್ತು. ಈ ಸಂಬಂಧ ಅಮೃತ ಅವರ ಸಂಬಂಧಿಗಳಾದ ಗೌತಮ್ ಹಾಗೂ ಇತರರು ಗೋಪಿನಾಥ್ಗೆ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ಕಳೆದ ಆಗಸ್ಟ್ನಲ್ಲಿ ಅಮೃತ ಹಾಗೂ ಗೋಪಿನಾಥ್ ಅವರು ಮದುವೆಯಾಗಲು ತಮಿಳುನಾಡಿಗೆ ಹೋಗಿದ್ದಾರೆ. ಅಲ್ಲಿ ಗೋಪಿನಾಥ ಅವರ ಅಕ್ಕನ ಮನೆ ಉಳಿದು, ಆಗಸ್ಟ್ 15 ರಂದು ಮದುವೆಯಾಗುತ್ತಾರೆ. ಬಳಿಕ ತಮ್ಮ ಪೋಷಕರಿಂದ ರಕ್ಷಣೆ ನೀಡಬೇಕು ಎಂದು ಸಮೀಪದ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡುತ್ತಾರೆ. ಸದ್ಯ ಪ್ರೇಮಿಗಳು ಶಿವಮೊಗ್ಗಕ್ಕೆ ಆಗಮಿಸಿದ್ದಾರೆ. ಅಮೃತ ಬಳಿ ಆಧಾರ್ ಸೇರಿದಂತೆ ಯಾವುದೇ ದಾಖಲಾತಿಗಳು ಇರದ ಕಾರಣ ರಿಜಿಸ್ಟ್ರಾರ್ ಮದುವೆ ಆಗಲು ಸಾಧ್ಯವಾಗಿಲ್ಲ. ಇದರಿಂದಾಗಿ ನಮಗೆ ರಕ್ಷಣೆ ನೀಡಬೇಕು ಎಂದು ಶಿವಮೊಗ್ಗದ ರಕ್ಷಣಾಧಿಕಾರಿಗಳ ಕಚೇರಿಗೆ ಬಂದು ಮನವಿ ಸಲ್ಲಿಸಿದ್ದಾರೆ.
ಈ ಸಂಬಂಧ ಪ್ರತಿಕ್ರಿಯಿಸಿದ ಅಮೃತ ವರ್ಷಿಣಿ ಅವರು, ನಾನು ಹಾಗೂ ಗೋಪಿನಾಥ್ ಕಳೆದ 7 ವರ್ಷಗಳಿಂದ ಪ್ರೀತಿಸುತ್ತಿದ್ದೇವೆ. ನಮ್ಮಿಬ್ಬರ ಪ್ರೀತಿಗೆ ಮನೆಯವರ ವಿರೋಧ ವ್ಯಕ್ತವಾಗಿತ್ತು. ನಮ್ಮ ಪೋಷಕರಿಗಿಂತ ಕುಟುಂಬ ಸ್ನೇಹಿತರು ನಮಗೆ ತುಂಬ ತೊಂದರೆ ಕೊಟ್ಟಿದ್ದಾರೆ. ಈ ಹಿನ್ನೆಲೆ ನಾವಿಬ್ಬರು ತಮಿಳುನಾಡಿಗೆ ಹೋಗಿ ಆಗಸ್ಟ್ 15 ರಂದು ಅಲ್ಲಿನ ದೇವಸ್ಥಾನದಲ್ಲಿ ಮದುವೆ ಆಗಿದ್ದೇವೆ.