ಶಿವಮೊಗ್ಗ: ಕರ್ನಾಟಕದಲ್ಲಿ ಬೆಂಗಳೂರು ಹೊರತುಪಡಿಸಿದರೆ ಶಿವಮೊಗ್ಗ ಜಿಲ್ಲೆಯಲ್ಲಿ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚು ದಾಖಲಾಗಿದ್ದು, ರಾಜ್ಯದಲ್ಲೇ ಜಿಲ್ಲೆ 2 ನೇ ಸ್ಥಾನದಲ್ಲಿದೆ. ಇದು ನಾಗರಿಕ ಸಮಾಜವೇ ತಲೆ ತಗ್ಗಿಸಬೇಕಾದ ಸಂಗತಿ ಎಂದು ಜಿಲ್ಲಾ ಸತ್ರ ನ್ಯಾಯಾಧೀಶರಾದ ಮಂಜುನಾಥ್ ನಾಯ್ಕ ಅವರು ವಿಷಾದ ವ್ಯಕ್ತಪಡಿಸಿದರು.
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಸಿಮ್ಸ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಮತ್ತು ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ನಿನ್ನೆ ಸಿಮ್ಸ್ ಸಭಾಂಗಣದಲ್ಲಿ ನಡೆದ ಪೋಕ್ಸೋ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ ಕುರಿತಾದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಅವರು, "ಪ್ರಸಕ್ತ ದಿನಗಳಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚು ನಡೆಯುತ್ತಿರುವುದು ವಿಷಾದಕರ. ಇಂದು ಸ್ವಸ್ಥ ಸಮಾಜ ನಿರ್ಮಾಣವಾಗಬೇಕಾದರೆ ಪ್ರತಿಯೊಬ್ಬ ನಾಗರಿಕನೂ ಸಾಮಾಜಿಕ ಜವಾಬ್ಧಾರಿಗಳನ್ನು ಹೊಂದಬೇಕು. ಪೋಕ್ಸೋ ಪ್ರಕರಣಗಳಲ್ಲಿ ಅಪರಾಧಿಗೆ ಶಿಕ್ಷೆಯಾಗಬೇಕಾದರೆ ಮತ್ತು ಸಂತ್ರಸ್ತೆಯರಿಗೆ ನ್ಯಾಯ ಸಿಗಬೇಕಾದರೆ ವೈದ್ಯಾಧಿಕಾರಿಗಳು ನೀಡುವ ವರದಿ ತುಂಬಾ ಮಹತ್ವದ್ದಾಗಿದೆ. ನ್ಯಾಯಾಂಗ ಪ್ರಕ್ರಿಯೆಗಳಲ್ಲಿ ತಮ್ಮ ಹೇಳಿಕೆ ಮಹತ್ವ ಪೂರ್ಣವಾಗಿದೆ. ತಮ್ಮ ಪ್ರಾಮಾಣಿಕ ಕಳಕಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ " ಎಂದರು.
ಇದನ್ನೂ ಓದಿ :ರಸ್ತೆ ಬದಿ ವ್ಯಾಪಾರ ಮಾಡುತ್ತಿದ್ದ ಮಹಿಳೆಗೆ ದೌರ್ಜನ್ಯ ಪ್ರಕರಣ : ಇಬ್ಬರ ಬಂಧನ