ಶಿವಮೊಗ್ಗ:ದಾವಣಗೆರೆ ಜಿಲ್ಲೆ ಮೂಲದ ಯುವತಿಯನ್ನು ಶಿವಮೊಗ್ಗದಿಂದ ಅಪಹರಣ ಮಾಡಿ 20 ಲಕ್ಷ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ಪ್ರಕರಣ ದೊಡ್ಡ ತಿರುವು ಪಡೆದ ಬಳಿಕ ಯುವತಿ ಹುಬ್ಬಳ್ಳಿಯಲ್ಲಿ ಪತ್ತೆಯಾಗಿದ್ದಾಳೆ. ಪೋಷಕರು ನೀಡಿದ ಪ್ರಕರಣ ದಾಖಲಿಸಿಕೊಂಡು ಕಾರ್ಯಚರಣೆ ನಡೆಸಿದ ಜಯನಗರ ಪೊಲೀಸ್ ಠಾಣೆಯ ಪೊಲೀಸರು ಯುವತಿಯನ್ನು ಪತ್ತೆ ಹಚ್ಚಿ ಪೋಷಕರಿಗೆ ಒಪ್ಪಿಸಿದ್ದಾರೆ.
ನಗರದಲ್ಲಿ ನರ್ಸಿಂಗ್ ವ್ಯಾಸಂಗ ಮಾಡುತ್ತಿದ್ದ ಯುವತಿ ಮೇ 14 ರಂದು ಕಾಣೆಯಾಗಿದ್ದಳು ಮತ್ತು ಆಕೆಯ ಪೋಷಕರ ಮೊಬೈಲ್‌ಗೆ "ನಿಮ್ಮ ಮಗಳು ಸುರಕ್ಷಿತವಾಗಿ ಮನೆಗೆ ಬರಬೇಕಾದರೆ 20 ಲಕ್ಷ ರೂ. ನೀಡಬೇಕು. ಈ ವಿಷಯವನ್ನು ಪೊಲೀಸರಿಗೆ ತಿಳಿಸಿದರೆ, ನಿಮ್ಮ ಮಗಳ ಹೆಣ ಸಹ ಸಿಗುವುದಿಲ್ಲ ಎಂದು ಮೆಸ್ಸೇಜ್ ಮಾಡಿದ್ದರು. ಇದರಿಂದ ಗಾಬರಿಗೊಂಡ ಪೋಷಕರು ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ ಪೊಲೀಸರು, ಯುವತಿ ಓದುತ್ತಿದ್ದ ಹಾಸ್ಟೆಲ್ ಸಮೀಪದ ಸಿಸಿ ಕ್ಯಾಮರಾ ಹಾಗೂ ಆಕೆಯ ಮೊಬೈಲ್ ನೆಟ್ವರ್ಕ್ ಪರಿಶೀಲನೆ ನಡೆಸಿದಾಗ ಯುವತಿಯು ಹುಬ್ಬಳ್ಳಿಯಲ್ಲಿರುವುದಾಗಿ ತಿಳಿದುಬಂದಿತ್ತು. ನಂತರ ಯುವತಿಯನ್ನು ಪೊಲೀಸರು ಹುಬ್ಬಳ್ಳಿಯ ಬಸ್ ನಿಲ್ದಾಣದಲ್ಲಿ ಪತ್ತೆ ಹಚ್ಚಿದ್ದಾರೆ.
ಕ್ರೈಸ್ತ ಸನ್ಯಾಸಿನಿಯಾಗಲು ಮುಂಬೈಗೆ ಹೋಗಲು ಸಿದ್ಧವಾಗಿದ್ದಳಂತೆ ಯುವತಿ:ಬಳಿಕಯುವತಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ, ಹೈಸ್ಕೂಲ್ ಓದುತ್ತಿರುವಾಗ ಶಾಲೆಯಲ್ಲಿ ಕರ್ತವ್ಯದಲ್ಲಿದ್ದ ಕ್ರೈಸ್ತ ಸನ್ಯಾಸಿನಿಯರ ಸೇವೆಯನ್ನು ಕಂಡು ನಾನು ಸಹ ಸನ್ಯಾನಿಯಾಗಬೇಕೆಂಬ ಆಸೆ ಹೊಂದಿದ್ದೆ. ನಂತರ ಶಿವಮೊಗ್ಗದಲ್ಲಿ ಪಿಯುಸಿ ಮುಗಿಸಿ ಕೋವಿಡ್ನಿಂದ ಮೆಡಿಕಲ್ ಸೀಟು ಸಿಗದ ಕಾರಣ ನಂಜಪ್ಪ ಲೈಪ್ ಕೇರ್ನಲ್ಲಿ ಫಿಜಿಯೋಥರೆಪಿ ಓದುತ್ತಿದ್ದೆ. ಇಲ್ಲಿ ಕೇರಳದ ಕ್ರಿಶ್ಚಿಯನ್ ಹುಡುಗಿಯರ ಪರಿಚಯ ಆಗಿತ್ತು. ಇದರಿಂದ ಕ್ರೈಸ್ತ ಸನ್ಯಾಸಿನಿಯಾಗಿ ಸಮಾಜ ಸೇವೆ ಮಾಡಬೇಕು ಎಂಬ ಉದ್ದೇಶದಿಂದ ಮುಂಬೈಗೆ ಹೊರಟಿದ್ದೆ ಎಂದು ವಿಚಾರಣೆಯಲ್ಲಿ ಪೊಲೀಸರಿಗೆ ತಿಳಿಸಿದ್ದಾಳೆ.