ಶಿವಮೊಗ್ಗ: ಇಡೀ ದೇಶದಲ್ಲೇ ಪ್ರಪ್ರಥಮ ಬಾರಿಗೆ ಜಿಲ್ಲೆಯ ಅರಣ್ಯ ಇಲಾಖೆ ಅಧಿಕಾರಿಗಳು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಅರಣ್ಯ ಒತ್ತುವರಿ ತಡೆಯಲು ಅರಣ್ಯಾಧಿಕಾರಿಗಳು ಉಪಗ್ರಹದ ಮೊರೆ ಹೋಗಿದ್ದು, ಈ ಮೂಲಕ ಒತ್ತುವರಿಗೆ ಕಡಿವಾಣ ಹಾಕಲು ಮುಂದಾಗಿದ್ದಾರೆ.
ಅರಣ್ಯ ಒತ್ತುವರಿದಾರರ ವಿರುದ್ಧ ಈಗಾಗಲೇ ನೂರಾರು ಪ್ರಕರಣಗಳು ದಾಖಲಾಗಿದ್ದು, ಕರ್ನಾಟಕ ದೂರ ಸಂವೇದಿ ಅನ್ವಯಿಕ ಕೇಂದ್ರದ ಸಹಾಯದೊಂದಿಗೆ ಕಡಿವಾಣಕ್ಕೆ ಮುಂದಾಗಿದೆ. ಒಂದೆಡೆ ಇದರಿಂದ ಅಧಿಕಾರಿಗಳ ಜವಾಬ್ದಾರಿಯೂ ಹೆಚ್ಚಾಗಿದ್ದು, ಮತ್ತೊಂದೆಡೆ, ಇನ್ಮುಂದೆ ಒತ್ತುವರಿ ಮಾಡಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲದಂತಾಗಿದೆ. ಈ ಮೂಲಕ ಒತ್ತುವರಿದಾರರಿಗೆ, ಅರಣ್ಯಾಧಿಕಾರಿಗಳು ಡಿಜಿಟಲ್ ಚಾಟಿ ಬೀಸಿದ್ದಾರೆ.
ಕಳೆದ ಹಲವು ವರ್ಷಗಳಿಂದ ರಾಜ್ಯದಲ್ಲಿ ಅರಣ್ಯ ಒತ್ತುವರಿ ಪ್ರಕರಣಗಳು ಜಾಸ್ತಿಯಾಗುತ್ತಿವೆ. 50 ವರ್ಷದಿಂದ ಈಚೆಗೆ ಬಗರ್‌ಹುಕುಂ, ಒತ್ತುವರಿ ಹೆಸರಿನಲ್ಲಿ ಲಕ್ಷಾಂತರ ಹೆಕ್ಟೇರ್ ಅರಣ್ಯ ನಾಶವಾಗಿದೆ. ಇದಕ್ಕೆಲ್ಲ ಕಡಿವಾಣ ಹಾಕಲು, ಅರಣ್ಯ ಇಲಾಖೆ ಉಪಗ್ರಹದ ಮೊರೆ ಹೋಗಿದೆ. ಕರ್ನಾಟಕ ದೂರ ಸಂವೇದಿ ಅನ್ವಯಿಕ ಕೇಂದ್ರ (ಕೆಎಸ್‌ಆರ್‌ಎಸ್‌ಎಸಿ)ದಿಂದ ಉಪಗ್ರಹ ಚಿತ್ರ ಆಧಾರಿತ ಅರಣ್ಯ ಭೂಮಿ ನಕಾಶೆ ಸಿದ್ಧಪಡಿಸಿದ್ದು, ಇದು ಅರಣ್ಯ ಭೂಮಿಯೊಳಗೆ ಯಾವುದೇ ಬದಲಾವಣೆಗಳು ಕಂಡು ಬಂದರೆ, ಸ್ಥಳೀಯವಾಗಿ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡುತ್ತದೆ.
ಮಾಹಿತಿ ಆಧಾರದ ಮೇಲೆ ಅರಣ್ಯಾಧಿಕಾರಿಗಳು ಸ್ಥಳ ಭೇಟಿ ಮಾಡಿ ವರದಿ ಸಲ್ಲಿಸುವುದು ಕಡ್ಡಾಯವಾಗಿದ್ದು, ಈಗಾಗಲೇ, ಕಾರ್ಯಾಚರಣೆ ಆರಂಭವಾಗಿದೆ. ಅಲ್ಲದೇ, ಒತ್ತುವರಿದಾರರ ವಿರುದ್ಧ ನೂರಾರು ದೂರು ದಾಖಲಾಗಿವೆ. ಪ್ರತಿ 21 ದಿನಗಳಿಗೊಮ್ಮೆ ಉಪಗ್ರಹ ಆಧಾರಿತ ಚಿತ್ರಗಳು ರವಾನೆಯಾಗಲಿದ್ದು, 10 / 10 ಮೀ. ವ್ಯಾಪ್ತಿವರೆಗೂ, ಉಪಗ್ರಹ ಸ್ಕ್ಯಾನ್ ಮಾಡುತ್ತದೆ. 21 ದಿನಗಳ ಅಂತರದಲ್ಲಿ ಯಾವುದೇ ಬದಲಾವಣೆ ಕಂಡುಬಂದರೆ ಆ ಪ್ರದೇಶವನ್ನು ಮಾರ್ಕ್ ಮಾಡಿ ಅರಣ್ಯಾಧಿಕಾರಿಗಳಿಗೆ ಸರ್ವೇ ನಂಬರ್ ಸಮೇತ ಫೋಟೋ ಆಧಾರಿತ ಮೆಸೇಜ್ ಅರಣ್ಯಾಧಿಕಾರಿಗಳ ಮೊಬೈಲ್‌ಗೆ ರವಾನೆಯಾಗಲಿದೆ.