ಶಿವಮೊಗ್ಗ: ಲಾರಿಯಲ್ಲಿದ್ದ ಜಿಲೆಟಿನ್ ಸ್ಫೋಟಗೊಂಡು ಐವರು ಕಾರ್ಮಿಕರು ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಶಿವಮೊಗ್ಗದ ಹುಣಸೋಡು ರೈಲ್ವೆ ಕ್ವಾರಿ ಬಳಿ ನಡೆದಿದೆ.
ಲಾರಿಯಲ್ಲಿದ್ದ ಜಿಲೆಟಿನ್ ಸ್ಫೋಟ
ರಾತ್ರಿ ಸುಮಾರು 10 ರಿಂದ 10.30ರ ಜಿಲೆಟಿನ್ ತುಂಬಿದ್ದ ಲಾರಿ ಶಿವಮೊಗ್ಗದ ಹುಣಸೋಡು ಬಳಿಯಿರುವ ರೈಲ್ವೆ ಕ್ವಾರಿಯತ್ತ ಹೋಗುತ್ತಿತ್ತು. ಇನ್ನೇನು ಕ್ವಾರಿಗೆ ತಲುಪಬೇಕೆನ್ನುವಷ್ಟರಲ್ಲಿ ಇದ್ದಕ್ಕಿದ್ದಂತೆ ಲಾರಿ ಬ್ಲಾಸ್ಟ್ ಆಗಿ ಅನಾಹುತ ಸಂಭವಿಸಿತು.
ಮೃತದೇಹಗಳು ಛಿದ್ರ!
ಲಾರಿಯಲ್ಲಿದ್ದ ಜಿಲ್ಲೆಟಿನ್ ಕಡ್ಡಿಗಳು ಸ್ಫೋಟಗೊಂಡಿವೆ. ಸ್ಫೋಟದ ತೀವ್ರತೆಗೆ ಲಾರಿ ಸ್ಫೋಟಗೊಂಡಿದ್ದು, ಲಾರಿಯ ಅವಶೇಷಗಳು ಅಕ್ಕಪಕ್ಕದ ಮನೆ ಮೇಲೆ ಮತ್ತು ಹೊಲದಲ್ಲಿ ಬಿದ್ದಿವೆ. ಸ್ಫೋಟದ ಸದ್ದಿಗೆ ಸುತ್ತ - ಮುತ್ತಲ ಕೆಲವು ಮನೆಗಳ ಕಿಟಕಿ ಗಾಜುಗಳು ಪುಡಿ - ಪುಡಿಯಾಗಿವೆ.
ಮೃತರೆಲ್ಲರೂ ಬಿಹಾರದ ನಿವಾಸಿಗಳು
ಲಾರಿಯಲ್ಲಿದ್ದ ಕೂಲಿ ಕಾರ್ಮಿಕರು ಬಿಹಾರ ಮೂಲದವರು ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಲಾರಿ ಚಾಲಕ ಸೇರಿದಂತೆ ಐವರು ಕಾರ್ಮಿಕರು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ಕಾರ್ಮಿಕರ ಮೃತದೇಹಗಳು ಒಂದೊಂದು ದಿಕ್ಕಿನಲ್ಲಿ ಛಿದ್ರ ಛಿದ್ರವಾಗಿ ಬಿದ್ದಿವೆ. ಸ್ಫೋಟದ ತೀವ್ರತೆ ಹೇಗಿತ್ತು ಅಂದ್ರೆ, ದುರಂತದಲ್ಲಿ ಮೃತಪಟ್ಟಿರೋ ಕಾರ್ಮಿಕರ ಮೃತದೇಹ ಗುರುತೇ ಸಿಗದಷ್ಟು ಛಿದ್ರ ಛಿದ್ರವಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಬೃಹತ್ ಸ್ಫೋಟಕ್ಕೆ ಬೆಚ್ಚಿಬಿದ್ದ ಮಲೆನಾಡು ಘಟನಾಸ್ಥಳಕ್ಕೆ ಡಿಸಿ, ಎಸ್‌ಪಿ ದೌಡು
ಸುದ್ದಿ ತಿಳಿಯುತ್ತಿದ್ದಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಹಾಗೂ ಎಸ್‌ಪಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಕೈಗೊಂಡರು. ಮೂರಕ್ಕೂ ಹೆಚ್ಚು ಌಂಬುಲೆನ್ಸ್ ಸ್ಥಳಕ್ಕೆ ದೌಡಾಯಿಸಿದವು.
ಮೃತದೇಹಗಳ ಶೋಧಕಾರ್ಯದಲ್ಲಿ ಪೊಲೀಸರು ನಿರತ
ಪೊಲೀಸರು ಛಿದ್ರ ಛಿದ್ರವಾಗಿ ಬಿದ್ದಿದ್ದ ಮೃತದೇಹಗಳ ಶೋಧಕಾರ್ಯದಲ್ಲಿ ತೊಡಗಿದ್ರು. ಘಟನಾ ಸ್ಥಳದಲ್ಲಿ ಕತ್ತಲು ಆವರಿಸಿದ್ದ ಕಾರಣ ಶೋಧಕಾರ್ಯ ಬೆಳಗಿನ ಜಾವ 3 ಗಂಟೆಯವರೆಗೆ ನಡೆಸಿದ್ದರು. ರಕ್ತಸಿಕ್ತವಾಗಿದ್ದ ಐವರ ಮೃತದೇಹಗಳು ಪತ್ತೆಯಾಗಿದ್ದು, ಌಂಬುಲೆನ್ಸ್‌ಲ್ಲಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನೆ ಮಾಡಿದ್ರು.
ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ
ಸ್ಫೋಟದ ತೀವ್ರತೆ ನೋಡಿದ್ರೆ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ರಾತ್ರಿ ವೇಳೆ ಜಿಲೆಟಿನ್ ಕಡ್ಡಿಗಳು ಸ್ಫೋಟಗೊಳ್ಳುವ ಸಾಧ್ಯತೆಯಿದ್ದ ಕಾರಣ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಈಗ ಮತ್ತೆ ಕಾರ್ಯಾಚರಣೆ ಮುಂದುವರಿದಿದೆ.
ಮನೆ ಬಿಟ್ಟು ಹೋರಗೆ ಬಂದ ಜನ
ರಾತ್ರಿ ಸುಮಾರು 10.30ರ ಸಮಯದಲ್ಲಿ ಜಿಲ್ಲೆಯ ಅನೇಕ ಭಾಗಗಳು ಮತ್ತು ಸುತ್ತಮುತ್ತಲಿನ ಮೂರು-ನಾಲ್ಕು ಜಿಲ್ಲೆಗಳಲ್ಲೂ ಭಾರಿ ಪ್ರಮಾಣದ ಶಬ್ದ ಕೇಳಿಬಂದಿದೆ. ಈ ಹಿನ್ನೆಲೆ ಜನರು ಮನೆ ಬಿಟ್ಟು ಹೊರಗೆ ಬಂದಿದ್ದರು.
ಜಿಲ್ಲಾಡಳಿತದ ವಿರುದ್ಧ ಗ್ರಾಮಸ್ಥರ ಆಕ್ರೋಶ
ಅಕ್ರಮವಾಗಿ ಕಲ್ಲುಗಣಿಗಾರಿಕೆ ನಡೆಯುತ್ತಿದ್ದರೂ ಗಮನ ಹರಿಸದ ಜಿಲ್ಲಾಡಳಿತ ಈಗ ಬಂದಿದೆ. ಶಿವಮೊಗ್ಗ ನಗರದ ಹೊರ ವಲಯದಲ್ಲಿ ಇರುವ ಹುಣಸೋಡು ಗ್ರಾಮದ ಗ್ರಾಮಸ್ಥರು ಅನೇಕ ಬಾರಿ ಅಕ್ರಮ ಕಲ್ಲುಗಣಿಗಾರಿಕೆಗಳ ಬಗ್ಗೆ ದೂರು ನೀಡಿದ್ದರು. ಇಲ್ಲಿಯವರೆಗೆ ಯಾವ ಅಧಿಕಾರಿಗಳೂ ಸ್ಪಂದಿಸಿರಲಿಲ್ಲ. ಆದರೆ ಈಗ ಇಂತಹ ದೊಡ್ಡ ಅವಘಡ ಸಂಭವಿಸಿದೆ ಎಂದು ಜಿಲ್ಲಾಡಳಿತ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಬಿಗಿ ಬಂದೋಬಸ್ತ್
ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೋಲಿಸರು ಘಟನಾ ಸ್ಥಳದ ಸುತ್ತಲೂ ಸರ್ಪಗಾವಲು ಹಾಕಿದ್ದಾರೆ.
ಕುಲಕರ್ಣಿ ಒಡೆತನದ ಕ್ವಾರಿಯಲ್ಲಿ ಸ್ಫೋಟ
ಹುಣಸೋಡು ಗ್ರಾಮದ ಹೊರ ವಲಯದಲ್ಲಿ ಇರುವ ಕುಲಕರ್ಣಿ ಎಂಬುವರ ಒಡೆತನದ ಕಲ್ಲುಕ್ವಾರಿಯಲ್ಲಿ ಸ್ಫೋಟ ಸಂಭವಿಸಿದೆ. ಸದ್ಯ ಈ ಕ್ವಾರೆಯನ್ನು ಸುಧಾಕರ್ ಎಂಬುವರು ನಡೆಸುತ್ತಿದ್ದರು. ಸ್ಫೋಟಕ ತುಂಬಿದ ಲಾರಿ ಹಾಗೂ ಬೊಲೆರೊ ವಾಹನ ಸ್ಫೋಟದಲ್ಲಿ ಛಿದ್ರವಾಗಿದೆ.
40 ಕಿ.ಮೀ ದೂರದವರೆಗೂ ವ್ಯಾಪಿಸಿದ ಸ್ಫೋಟದ ಸದ್ದು
ಸ್ಫೋಟದ ತೀವ್ರತೆ ಎಷ್ಟಿತ್ತು ಅಂದ್ರೆ, ಅದರ ಶಬ್ದ ಸುತ್ತಮುತ್ತಲಿನ ಸುಮಾರು 40 ಕಿ. ಮೀ. ದೂರದವರೆಗೆ ವ್ಯಾಪಿಸಿದೆ. ಬಳಿಕ ಭೂಮಿ ಕಂಪಿಸಿದ ಅನುಭವಾಗಿದೆ ಅನ್ನೋದು ಸ್ಥಳೀಯರ ಮಾತಾಗಿದೆ.
ಭದ್ರಾ ಜಲಾಶಕ್ಕೆ ಭೇಟಿ ನೀಡಿದ ಕಾಡಾ ಅಧ್ಯಕ್ಷೆ
ಸ್ಫೋಟದಿಂದ ಯಾವುದೇ ರೀತಿಯಲ್ಲಿ ಭದ್ರಾ ಜಲಾಶಯಕ್ಕೆ ತೊಂದರೆಯಾಗುವುದಿಲ್ಲ. ರೈತರು ಆತಂಕ ಪಡುವ ಅಗತ್ಯವಿಲ್ಲ ಎಂದು ಭದ್ರಾ ಜಲಾಶಯ ವೀಕ್ಷಣೆ ಮಾಡಿದ ಬಳಿಕ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆಯಾದ ಪವಿತ್ರ ರಾಮಯ್ಯ ಹೇಳಿದ್ದಾರೆ.
ಸಚಿವ ಈಶ್ವರಪ್ಪ ಹೇಳಿದ್ದೇನು?
ಘಟನೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಕೆ.ಎಸ್ ಈಶ್ವರಪ್ಪ, ಇಂತಹದೊಂದು ಸ್ಫೋಟ ಈ ಹಿಂದೆ ನಾವೆಂದೂ ನೋಡಿಲ್ಲ. ತಜ್ಞರ ತಂಡ ಭೇಟಿ ನೀಡಿ ಸ್ಫೋಟದ ಕಾರಣದ ಬಗ್ಗೆ ವರದಿ ನೀಡುತ್ತದೆ. ಬಳಿಕ ಮುಂದಿನ ಕ್ರಮ ರಾಜ್ಯ ಸರ್ಕಾರ ತೆಗೆದುಕೊಳ್ಳುತ್ತದೆ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ.
ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಎಂದ ಸಿಎಂ
ಅಚಾತುರ್ಯದಿಂದ ಘಟನೆ ನಡೆದಿದೆ. ಐವರು ಕಾರ್ಮಿಕರು ಮೃತಪಟ್ಟಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಅಧಿಕಾರಿಗಳು ಹಗಲು-ಇರುಳು ಕಾರ್ಯ ಕೈಗೊಂಡಿದ್ದಾರೆ. ನಾನು ನಾಳೆ ಶಿವಮೊಗ್ಗಕ್ಕೆ ಖುದ್ದು ಭೇಟಿ ನೀಡಿ ಘಟನೆ ಬಗ್ಗೆ ಪರಿಶೀಲನೆ ನಡೆಸುವುದಾಗಿ ಸಿಎಂ ಯಡಿಯೂರಪ್ಪ ತಿಳಿಸಿದ್ದಾರೆ.
ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದು ಹೀಗೆ
ಶಿವಮೊಗ್ಗ ಕ್ವಾರಿ ಸ್ಫೋಟ ಪ್ರಕರಣ ಸಂಬಂಧ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಿರಾಣಿಗೆ ಸಿಎಂ ಸೂಚನೆ
ಶಿವಮೊಗ್ಗ ಜಿಲೆಟಿನ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ನೂತನ ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿಗೆ ಸಿಎಂ ಸೂಚಿಸಿದ್ದಾರೆ.
ಪಿಎಂ ಮೋದಿ, ಸಿಎಂ ಬಿಎಸ್ವೈ ಸೇರಿದಂತೆ ಗಣ್ಯರ ಸಂತಾಪ
ಕಲ್ಲು ಗಣಿಗಾರಿಕೆಗೆಂದು ಲಾರಿಯಲ್ಲಿ ಸಾಗಿಸುತ್ತಿದ್ದ ಜಿಲೆಟಿನ್ ಸ್ಫೋಟಗೊಂಡಿರುವ ಪರಿಣಾಮ 5 ಮಂದಿ ಸಾವನ್ನಪ್ಪಿರುವ ದುರಂತಕ್ಕೆ ಪ್ರಧಾನಿ ಮೋದಿ, ಸಿಎಂ ಯಡಿಯೂರಪ್ಪ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಮಾಜಿ ಸಿಎಂ ಸಿದ್ದರಾಮಯ್ಯ, ಜೆಡಿಎಸ್ ನಾಯಕ ಹೆಚ್ಡಿ ಕುಮಾರಸ್ವಾಮಿ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.
ಶಿವಮೊಗ್ಗಕ್ಕೆ ಭೇಟಿ ನೀಡಿದ ಬಾಂಬ್ ಸ್ಕ್ವಾಡ್ ತಂಡಗಳು
ಶಿವಮೊಗ್ಗಕ್ಕೆ ಬೆಂಗಳೂರು ಮತ್ತು ಮಂಗಳೂರಿನಿಂದ ಬಾಂಬ್ ಸ್ಕ್ವಾಡ್ ತಂಡಗಳು ಭೇಟಿ ನೀಡಿದ್ದು, ಅಧಿಕಾರಿಗಳು ತನಿಖೆ ಕೈಗೊಂಡಿದ್ದಾರೆ.
ಪರಿಹಾರ ಘೋಷಣೆ...
ಘಟನೆಯಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸಿಎಂ ಯಡಿಯೂರಪ್ಪ ತಲಾ ಐದು ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಒಟ್ಟಿನಲ್ಲಿ ಯಾರ ನಿರ್ಲಕ್ಷ್ಯವೋ ಏನೋ ದುರಂತದಲ್ಲಿ ಅಮಾಯಕ ಕಾರ್ಮಿಕರು ಬಲಿಯಾಗಿದ್ದಾರೆ. ಅವರನ್ನೇ ನಂಬಿದ್ದ ಕುಟುಂಬಗಳು ಈಗ ಬೀದಿಗೆ ಬಿದ್ದಿವೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಗ್ರಾಮಸ್ಥರ ಆಗ್ರಹವಾಗಿದೆ.
ಈಟಿವಿ ಭಾರತ ರಿಪೋರ್ಟ್