ಶಿವಮೊಗ್ಗ:ರಾಜ್ಯ ರಾಜಕಾರಣದಲ್ಲಿ ಆದ ಬದಲಾವಣೆಗಳಿಂದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ನೀಡಿ ನೂತನ ಸಿಎಂ ಅಧಿಕಾರ ವಹಿಸಿಕೊಂಡಿದ್ದಾರೆ. ಸಚಿವ ಸಂಪುಟವೂ ವಿಸರ್ಜನೆಯಾಗಿದೆ. ಈಗ ನೂತನ ಸಂಪುಟದಲ್ಲಿ ಜಿಲ್ಲೆಯಿಂದ ಯಾರಿಗೆ ಸಚಿವ ಸ್ಥಾನ ಸಿಗುತ್ತೆ, ಸಿಕ್ಕರೆ ಎಷ್ಟು ಜನರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ಲೆಕ್ಕಾಚಾರ ಶುರುವಾಗಿದೆ.
ಜಿಲ್ಲೆ ರಾಜಕೀಯವಾಗಿ ಪ್ರಬಲ ನಾಯಕರುಗಳನ್ನು ಹೊಂದಿದೆ. ನಾಲ್ವರು ಮುಖ್ಯಮಂತ್ರಿಗಳನ್ನು ನೀಡಿದೆ. ಬಿಜೆಪಿಯ ಪ್ರಭಾವಿ ನಾಯಕ ಬಿ.ಎಸ್ ಯಡಿಯೂರಪ್ಪ, ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಸೇರಿದಂತೆ ಅನೇಕ ನಾಯಕರು ಜಿಲ್ಲೆಯನ್ನು ರಾಜಕೀಯವಾಗಿ ಪ್ರತಿನಿಧಿಸಿ ರಾಜ್ಯ ರಾಜಕಾರಣದಲ್ಲಿ ತಮ್ಮದೇ ಆದ ಹೆಸರನ್ನು ಮಾಡಿದ್ದಾರೆ.
ಆದರೆ, ಈಗ ಯಡಿಯೂರಪ್ಪ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಶಿವಮೊಗ್ಗ ಜಿಲ್ಲೆಯ ರಾಜಕೀಯ ಲೆಕ್ಕಾಚಾರ ಬದಲಾಗಿದೆ. ಹಾಗಾಗಿ, ಈ ಸಲ ನೂತನ ಸಚಿವ ಸಂಪುಟದಲ್ಲಿ ಯಾರಿಗೆ ಸಚಿವ ಸ್ಥಾನ ಸಿಗಲಿದೆ ಹಾಗೂ ಎಷ್ಟು ಶಾಸಕರಿಗೆ ಸಚಿವ ಸ್ಥಾನ ಸಿಗಬಹುದು ಎನ್ನುವ ಲೆಕ್ಕಾಚಾರ ಶುರುವಾಗಿದೆ.
ರಾಜಕೀಯ ಲೆಕ್ಕಾಚಾರದ ಪ್ರಕಾರ, ನಳಿನ್ ಕುಮಾರ್ ಅವರದ್ದು ಎನ್ನಲಾದ ಆಡಿಯೋ ಧ್ವನಿಯನ್ನು ಗಮನಿಸಿದಾಗ ಕೆ.ಎಸ್ ಈಶ್ವರಪ್ಪ ಅವರಿಗೆ ನೂತನ ಸಚಿವ ಸಂಪುಟದಿಂದ ಕೊಕ್ ನೀಡಬಹುದು ಎನ್ನಲಾಗಿದೆ.
ಇಬ್ಬರಿಗೆ ಸಚಿವ ಸ್ಥಾನ ಸಿಗಬಹುದು?
ಒಂದು ಕಾಲದಲ್ಲಿ ಸಿಎಂ ಹಾಗೂ ಮೂವರು ಸಚಿವರನ್ನು ಹೊಂದಿದ್ದ ಹೆಗ್ಗಳಿಕೆ ಶಿವಮೊಗ್ಗ ಜಿಲ್ಲೆಯದಾಗಿತ್ತು. ಕ್ರಮೇಣ ಸಚಿವ ಸಂಪುಟದಲ್ಲಿ ಜಿಲ್ಲೆಯ ಪ್ರಾತಿನಿಧ್ಯ ಕಡಿಮೆಯಾಗತೊಡಗಿತು. ಯಡಿಯೂರಪ್ಪ ಹಾಗೂ ಕೆ. ಎಸ್. ಈಶ್ವರಪ್ಪ ಅವರನ್ನು ಹೊರತುಪಡಿಸಿ ಉಳಿದವರಾರಿಗೂ ಅವಕಾಶ ಸಿಕ್ಕಿರಲಿಲ್ಲ. ಸಿಎಂ ತವರು ಜಿಲ್ಲೆ ಎಂಬ ಕಾರಣವೇ ಉಳಿದವರಿಗೆ ತೊಡಕಾಗಿತ್ತು. ಈಗ ಯಡಿಯೂರಪ್ಪ ಅವರು ತಮ್ಮ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿರುವುದರಿಂದ ಜಿಲ್ಲೆಯ ಇಬ್ಬರಿಗೆ ಸಚಿವ ಸ್ಥಾನ ಸಿಗಬಹುದು ಎಂದು ಹೇಳಲಾಗುತ್ತಿದೆ.
ವಿಧಾನ ಸಭೆಯಲ್ಲಿ ಹಾಗೂ ಪಕ್ಷದಲ್ಲಿ ಹಿರಿತನ, ಪಕ್ಷ ನಿಷ್ಠೆ, ವರ್ಚಸ್ಸು ಜೊತೆಗೆ ಸತತ ಮೂರು ಭಾರಿ ಶಾಸಕರಾಗಿ ಆಯ್ಕೆ ಆಗಿರುವ ವ್ಯಕ್ತಿ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ. ಅದರ ಜೊತೆಗೆ ಜಿಲ್ಲೆಯಲ್ಲಿ ಈಡಿಗ ಪ್ರಭಾವ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮಾಜಿ ಸಚಿವ ಹರತಾಳು ಹಾಲಪ್ಪ ಅಥವಾ ಸೊರಬ ಕ್ಷೇತ್ರದ ಶಾಸಕ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರಿಗೆ ಸಚಿವ ಸ್ಥಾನ ಸಿಗಬಹುದು ಎನ್ನಲಾಗುತ್ತಿದೆ. ಇದರ ಜೊತೆಗೆ ಜಿಲ್ಲೆಯಲ್ಲಿ ಹೊಸ ಮುಖಕ್ಕೆ ಅವಕಾಶ ನೀಡಲಾಗುತ್ತೆ ಅನ್ನುವುದಾದರೆ ಬಂಜಾರ ಸಮುದಾಯದ ಶಾಸಕರಾಗಿರುವ ಅಶೋಕ ನಾಯ್ಕ್ ಅವರಿಗೂ ಸಚಿವ ಸ್ಥಾನ ಸಿಕ್ಕರೆ ಅಚ್ಚರಿ ಇಲ್ಲ.