ಶಿವಮೊಗ್ಗ:ಮಲೆನಾಡಲ್ಲೂ ಹಿಂಗಾರು ಮಳೆ ತನ್ನ ಪ್ರತಾಪ ತೋರಿಸುತ್ತಿದೆ. ಕಳೆದೊಂದು ವಾರದಿಂದ ಜಿಲ್ಲೆಯ ಅಲ್ಲಲ್ಲಿ ಭಾರಿ ಮಳೆಯಾಗುತ್ತಿದ್ದು, ವಾಡಿಕೆ ಪ್ರಮಾಣಕ್ಕಿಂತ ಹೆಚ್ಚಾಗಿದೆ. ಇದ್ರಿಂದ ಉಂಟಾಗಿರುವ ನಷ್ಟ ಅಂದಾಜಿಸುವ ಕಾರ್ಯವನ್ನು ಜಿಲ್ಲಾಡಳಿತ ನಡೆಸುತ್ತಿದೆ ಎಂದು ಜಿಲ್ಲಾಧಿಕಾರಿ ಶಿವಕುಮಾರ್ ಈಟಿವಿ ಭಾರತ್ಗೆ ತಿಳಿಸಿದ್ದಾರೆ.
ಮಳೆಯು ಜಿಲ್ಲೆಯ ಕೆಲ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಹಾಗೂ ನಗರ ವ್ಯಾಪ್ತಿಯಲ್ಲಿರುವ ಕೆಲ ವಾರ್ಡ್ಗಳಲ್ಲಿ ಭಾರಿ ಮಳೆ ಸುರಿದಿದೆ. ಇದ್ರಿಂದ ರಸ್ತೆ, ಮನೆಗಳಿಗೆ ಹಾನಿಯಾಗಿದೆ. ವಾಡಿಕೆಗಿಂತ ಹೆಚ್ಚು ಮಳೆಯಾಗ್ತಿರೋದ್ರಿಂದ ಜನಜೀವನಕ್ಕೆ ಸ್ವಲ್ಪ ಪ್ರಮಾಣದಲ್ಲಿ ಅಡಚಣೆಯಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಕಾರ್ಯಪ್ರವೃತ್ತವಾಗಿದೆ ಎಂದರು.
ಮಳೆಯಿಂದ ಹಾನಿಗೆ ಒಳಗಾದ ಕುರಿತ ವಿವರ:
ಜಿಲ್ಲೆಯಾದ್ಯಂತ ಮಳೆಯಿಂದ 390 ಮನೆಗಳಿಗೆ ಹಾನಿಯಾಗಿದೆ. ಇದರಲ್ಲಿ 35 ಮನೆಗಳಿಗೆ ತೀವ್ರ ಸ್ವರೂಪದ ತೊಂದರೆಯಾಗಿದೆ. ಮನೆ ಹಾನಿ ಕುರಿತಂತೆ ಕಂದಾಯ ಇಲಾಖೆ ಸರ್ವೆ ನಡೆಸುತ್ತಿದೆ. ಜಿಲ್ಲೆಯಲ್ಲಿ 38 ಕೆರೆಗಳು ಕೋಡಿಯೊಡೆಯುವ ಭೀತಿಯಲ್ಲಿವೆ. ಜನರಜೀವಕ್ಕೆ ಹಾನಿಯಾಗದಂತೆ ನೋಡಿಕೊಳ್ಳುವ ಕುರಿತು ಪಿಡಿಒಗಳಿಗೆ ಸೂಚನೆ ನೀಡಲಾಗಿದೆ. ಸದ್ಯ ಜಿಲ್ಲೆಯಲ್ಲಿ 644 ಹೆಕ್ಟೆರ್ ಕೃಷಿ ಭೂಮಿಯಲ್ಲಿ ನೀರು ನಿಂತಿದೆ. ಹೀಗಾಗಿ ಸದ್ಯಕ್ಕೆ ಯಾವುದೇ ಸಮಸ್ಯೆಗಳಿಲ್ಲ. ನೀರು ಹರಿದು ಹೋಗದೇ ಇದ್ದರೆ ಬೆಳೆಗೆ ಹಾನಿಯಾಗುತ್ತದೆ ಎಂದು ಜಿಲ್ಲಾಧಿಕಾರಿ ಶಿವಕುಮಾರ್ ತಿಳಿಸಿದ್ದಾರೆ.
ಇನ್ನು ಜಿಲ್ಲೆಯಲ್ಲಿ ನಾಲ್ಕು ದಿನ ನಿರಂತರ ಮಳೆಯಾಗುವ ವರದಿ ಇರುವುದರಿಂದ ಜಿಲ್ಲಾಡಳಿತ ಸಕಲ ರೀತಿಯಲ್ಲೂ ಸನ್ನದ್ದವಾಗಿದೆ. ಮಳೆಯಿಂದ ಮನೆ ಬೀಳುವ ಸ್ಥಿತಿಯಲ್ಲಿದ್ದರೆ, ತಕ್ಷಣ ಜನ ಅದೇ ಮನೆಯಲ್ಲಿ ವಾಸಿಸದೆ ಸಮೀಪದ ಶಾಲೆ, ದೇವಾಲಯ, ಸಮುದಾಯ ಭವನ ಹೀಗೆ ಬೇರೆಡೆ ಹೋಗಿ ಆಶ್ರಯ ಪಡೆದುಕೊಳ್ಳಬೇಕು ಎಂದು ಸಾರ್ವಜನಿಕರಿಗೆ ವಿನಂತಿಸಿ ಕೊಂಡಿದ್ದಾರೆ.