ಶಿವಮೊಗ್ಗ:ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆಗೆ ಕಾರ್ಯಕ್ರಮದ ಅಂಗವಾಗಿ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್, ಜಿಲ್ಲೆಯ ಹೊಳಲೂರು ಹೋಬಳಿ ವ್ಯಾಪ್ತಿಯ ಆಲದಳ್ಳಿ ಗ್ರಾಮದಲ್ಲಿ ವಾಸ್ತವ್ಯ ಹೂಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದರು.
ಆಲದಳ್ಳಿ ಗ್ರಾಮದಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿ ವಾಸ್ತವ್ಯ ಬೆಳಗ್ಗೆ 11 ಗಂಟೆಗೆ ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ ಜಿಲ್ಲಾಧಿಕಾರಿಯನ್ನು ಗ್ರಾಮದ ದ್ವಾರದಲ್ಲಿ ಪೂರ್ಣಕುಂಭ ಹಾಗೂ ಮಂಗಳ ವಾದ್ಯಗಳ ಮೆರವಣಿಗೆಯೊಂದಿಗೆ ಸ್ವಾಗತಿಸಲಾಯಿತು. ಆಲದಳ್ಳಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ನೇರವಾಗಿ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ, ಮಕ್ಕಳಿಗೆ ನೀಡುತ್ತಿರುವ ಆಹಾರ-ಧಾನ್ಯಗಳ ಗುಣಮಟ್ಟ ಪರಿಶೀಲಿಸಿದರು. ಜೊತೆಗೆ ಗ್ರಾಮದ ಪ್ರತಿಯೊಂದು ಮಗುವಿಗೂ ಇದರ ಸೌಲಭ್ಯ ಸಿಗುವಂತೆ ಖಾತ್ರಿಪಡಿಸಿಕೊಳ್ಳಬೇಕು ಎಂದರು.
ಇದೇ ಸಂದರ್ಭದಲ್ಲಿ ಊರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾಗಿದ್ದ 'ವಿಶೇಷ ಆರೋಗ್ಯ ತಪಾಸಣಾ ಶಿಬಿರ' ಉದ್ಘಾಟಿಸಿದರು. ಪ್ರಾಥಮಿಕ ಕೇಂದ್ರದಲ್ಲಿ ನೀಡಲಾಗುತ್ತಿರುವ ಕೊರೊನಾ ಲಸಿಕೆಯನ್ನು ಅರ್ಹರು ಪಡೆದುಕೊಳ್ಳುವಂತೆ ಕ್ರಮಕೈಗೊಳ್ಳಬೇಕು. ಈ ಕುರಿತು ಜನರಲ್ಲಿ ಅರಿವು ಮೂಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ಕೊರೊನಾ ಲಸಿಕೆ ಬಗ್ಗೆ ಜಾಗೃತಿ ಮೂಡಿಸುವ ವಾಹನಕ್ಕೆ ಚಾಲನೆ ನೀಡಿದರು.
ಊರಿನ ಅರಳಿಕಟ್ಟೆ ಕೆರೆಗೆ ಭೇಟಿ ನೀಡಿದ ಡಿಸಿ, ಬೇಸಿಗೆಯಲ್ಲಿ ನೀರು ಕಡಿಮೆಯಾದ ಬಳಿಕ ಕೆರೆ ಹೂಳೆತ್ತುವುದು ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬೇಕಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಅಭಿವೃದ್ಧಿಗೆ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಳಿಕ ಸೋಮಿನಕೊಪ್ಪ ಪಶು ಆರೋಗ್ಯ ಕೇಂದ್ರ ಹಾಗೂ ಊರಿನ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿದರು. ಈ ವೇಳೆ ಉತ್ತಮ ಗುಣಮಟ್ಟದ ಅಕ್ಕಿ ಪೂರೈಕೆಯಾಗುತ್ತಿದ್ದು, ಗೋಧಿ ಗುಣಮಟ್ಟ ಚೆನ್ನಾಗಿಲ್ಲ ಎಂದು ಊರಿನವರು ಡಿಸಿಗೆ ತಿಳಿಸಿದರು. ಆಲದಳ್ಳಿ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗೆ ಭೇಟಿ ನೀಡಿ, ವಿದ್ಯಾರ್ಥಿಗಳಿಗೆ ಒಂದು ಗಂಟೆಗೂ ಅಧಿಕ ಕಾಲ ಪಾಠ ಮಾಡಿ ಸಂವಾದ ನಡೆಸಿದರು. ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಗಣಿತ, ವಿಜ್ಞಾನ ವಿಷಯಗಳಿಗೆ ಹೆಚ್ಚಿನ ಒತ್ತು ನೀಡುವಂತೆ ಸೂಚಿಸಿದರು.
ಅಹವಾಲು ಸ್ವೀಕಾರ:ಸಂಜೆ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ ಜಿಲ್ಲಾಧಿಕಾರಿ, ಬಳಿಕ ಸಭಾ ಕಾರ್ಯಕ್ರಮದಲ್ಲಿ ಕೊರೊನಾ ವಾರಿಯರ್ಸ್ಗಳನ್ನು ಅಭಿನಂದಿಸಿದರು.