ಶಿವಮೊಗ್ಗ: ಸ್ವಾತಂತ್ರ್ಯ ಪೂರ್ವದಲ್ಲೇ ಆರಂಭವಾದ ಮಲೆನಾಡಿನ ಮೊದಲ ಕಾಲೇಜು ಶಿವಮೊಗ್ಗದ ಸಹ್ಯಾದ್ರಿ ಕಾಲೇಜು. ಈ ಕಾಲೇಜು ಇದುವರೆಗೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ವಿದ್ಯಾದಾನ ನೀಡಿದೆ. ಜೊತೆಗೆ ನಾಡಿನ ಪ್ರಮುಖ ಕವಿಗಳು, ರಾಜಕಾರಣಿಗಳು ಓದಿದ್ದು ಇದೇ ಕಾಲೇಜಿನಲ್ಲಿ ಎನ್ನುವುದು ಇನ್ನೊಂದು ವಿಶೇಷ. ಆದರೆ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ್ದ ಸಹ್ಯಾದ್ರಿ ಕಾಲೇಜಿಗೆ ಇದೀಗ ಗಂಡಾಂತರ ಎದುರಾಗಿದೆ. ಸಹ್ಯಾದ್ರಿ ಕಾಲೇಜಿನ ಆವರಣವನ್ನು ಪರಭಾರೆ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಇದು ಸಹ್ಯಾದ್ರಿ ಕಾಲೇಜಿನ ಹಳೇ ವಿದ್ಯಾರ್ಥಿಗಳ ಕೆಂಗಣ್ಣಿಗೆ ಗುರಿಯಾಗಿದೆ.
ಜಿಲ್ಲೆಗೆ ಕೇಂದ್ರ ಸರ್ಕಾರದ ಸಾಯ್ ಹಾಗೂ ಖೇಲೋ ಇಂಡಿಯಾ ಯೋಜನೆಯಡಿ ಕ್ರೀಡಾ ಸಂಕೀರ್ಣ ಮಂಜೂರಾತಿಯಾಗಿದೆ. ಹೀಗಾಗಿ ಮಲೆನಾಡಿನಲ್ಲಿ ಮೊದಲ ಬಾರಿಗೆ ಕ್ರೀಡಾ ಗ್ರಾಮ ನಿರ್ಮಾಣವಾಗಲಿದೆ. ಇದರಿಂದ ಮಲೆನಾಡಿನ ಮುಡಿಗೆ ಇನ್ನೊಂದು ಗರಿ ಮೂಡಲಿದೆ. ಆದರೆ ಈ ಕ್ರೀಡಾ ಸಂಕೀರ್ಣವನ್ನು ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಆರಂಭಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಇದು ಕಾಲೇಜಿನ ಹಳೇ ವಿದ್ಯಾರ್ಥಿಗಳನ್ನು ಕೆರಳಿಸಿದೆ. ಸಹ್ಯಾದ್ರಿ ಕಾಲೇಜಿನ ಹೊಸ ಕಟ್ಟಡವನ್ನು ಕ್ರೀಡಾ ಹಾಸ್ಟೆಲ್ ಆಗಿ ಪರಿವರ್ತನೆ ಮಾಡುವುದು ಹಾಗೂ ಸಹ್ಯಾದ್ರಿ ಕಾಲೇಜಿನ ಸ್ಟೇಡಿಯಂಅನ್ನು ಕ್ರೀಡಾ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಜಿಲ್ಲಾಡಳಿತ ತೀರ್ಮಾನಿಸಿದೆ. ಒಂದು ವೇಳೆ ಈ ಯೋಜನೆ ಸಹ್ಯಾದ್ರಿ ಕಾಲೇಜಿನಲ್ಲಿ ಅನುಷ್ಠಾನಗೊಂಡಿದ್ದೇ ಆದಲ್ಲಿ ಸಹ್ಯಾದ್ರಿ ಕಾಲೇಜಿನ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಿಗೆ ಎಲ್ಲಿಗೆ ಹೋಗಬೇಕು ಎಂಬ ಪ್ರಶ್ನೆಯನ್ನು ಹಳೇ ವಿದ್ಯಾರ್ಥಿಗಳು ಎತ್ತಿದ್ದಾರೆ.