ಶಿವಮೊಗ್ಗ:ಕೋಲಾರ ಜಿಲ್ಲೆಯ ಮಾಲೂರಿನ ಮೊರಾರ್ಜಿ ಶಾಲೆ ಮತ್ತು ಬೆಂಗಳೂರಿನ ಅಂದ್ರಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಂದ ಶೌಚಾಲಯ ಸ್ವಚ್ಚಗೊಳಿಸಿದ ಪ್ರಕರಣ ಮಾಸುವ ಮುನ್ನ ಅಂತಹದೇ ಮತ್ತೊಂದು ಪ್ರಕರಣ ಶಿವಮೊಗ್ಗದ ಭದ್ರಾವತಿ ತಾಲೂಕಿನಲ್ಲಿ ಬೆಳಕಿಗೆ ಬಂದಿದೆ. ಭದ್ರಾವತಿ ತಾಲೂಕಿನ ಗುಡ್ಡದ ನೇರಲಕೆರೆ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳು ಶೌಚಾಲಯ ಸ್ವಚ್ಚ ಮಾಡುತ್ತಿರುವ ವಿಡಿಯೋ ವೈರಲ್ ಆಗಿದೆ.
ಈ ವಿಡಿಯೋ ಎಷ್ಟು ದಿನದ ಹಿಂದಿನದು ಎಂಬುದು ಇನ್ನೂ ತಿಳಿದು ಬಂದಿಲ್ಲ. ವಿಡಿಯೋ ವೈರಲ್ ಬೆನ್ನಲ್ಲೇ ಭದ್ರಾವತಿಯ ಬಿಇಓ ಅವರು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಈ ಕುರಿತು ಡಿಡಿಪಿಐಗೆ ಬಿಇಓ ಅವರು ವರದಿಯನ್ನು ನೀಡಿದ್ದಾರೆ. ಇನ್ನು ಪ್ರಕರಣ ಸಂಬಂಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿಕ್ಷಣ ಸಚಿವ ಮಧು ಬಂಗಾರಪ್ಪ ತವರು ಜಿಲ್ಲೆಯಲ್ಲೇ ಈ ಘಟನೆ ನಡೆದಿದೆ.
ಮುಖ್ಯ ಶಿಕ್ಷಕ ಅಮಾನತು:ಪ್ರಕರಣ ಸಂಬಂಧಪಟ್ಟಂತೆ ಬೆಟ್ಟದ ನೇರಲಗುಡ್ಡ ಸರ್ಕಾರಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ( ಪ್ರಭಾರ) ಶಂಕರಪ್ಪನವರನ್ನು ಡಿಡಿಪಿಐ ಅಮಾನತು ಮಾಡಿ ಆದೇಶ ಮಾಡಿದ್ದಾರೆ. ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರ ವಿರುದ್ಧ ಉಲ್ಲೇಖದ ಪತ್ರದಲ್ಲಿ ಶಿಸ್ತು ಕ್ರಮ ಜರುಗಿಸಲು ಕ್ಷೇತ್ರ ಶಿಕ್ಷಣಾಧಿಕಾರಿಗಳು ನೀಡಿದ ವರದಿಯಲ್ಲಿ ಶಾಲಾ ಸ್ವಚ್ಚತೆಗೆ ಮತ್ತು ಶಾಲೆಗೆ ಸಂಬಂಧಿಸಿದಂತೆ ಇತರೆ ಅಗತ್ಯ ಪರಿಕರ ಮತ್ತು ಸ್ವಚ್ಛತಾ ಸಾಮಗ್ರಿಗಳನ್ನು ಖರೀದಿ ಮಾಡಲು ಅನುದಾನವನ್ನು ಒದಗಿಸಲಾಗಿದೆ. ಹೀಗಿದ್ದಾಗ್ಯೂ ಶಾಲಾ ಮಕ್ಕಳಿಂದ ಶೌಚಾಲಯವನ್ನು ಸ್ವಚ್ಚತೆಗೊಳಿಸಲು ಬಳಕೆ ಮಾಡಿಕೊಂಡಿರುವುದು ಸಾಬೀತಾಗಿದೆ. ಮುಖ್ಯ ಶಿಕ್ಷಕರು ಸರ್ಕಾರಿ ನೌಕರರಿಗೆ ತರವಲ್ಲದ ರೀತಿಯಲ್ಲಿ ನಡೆದುಕೊಂಡಿರುವುದು ಇಲಾಖೆಯ ಗಮನಕ್ಕೆ ಬಂದಿದ್ದು, ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ದೃಢಪಟ್ಟಿದೆ. ಅವರ ಮೇಲಿನ ಆರೋಪಗಳಿಗೆ ಸಂಬಂಧಿಸಿದಂತೆ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಿ ಅವರನ್ನು ಸೇವೆಯಿಂದ ಅಮಾನತುಗೊಳಿಸಲು ಡಿಡಿಪಿಐ ಪರಮೇಶ್ವರಪ್ಪ ಆದೇಶ ನೀಡಿದ್ದಾರೆ.