ಶಿವಮೊಗ್ಗ: ಮಾರಣಾಂತಿಕ ಕಾಯಿಲೆಗಳ ವಿರುದ್ಧ 2ವರ್ಷದೊಳಗಿನ ಮಕ್ಕಳಲ್ಲಿ ಹಾಗೂ ಗಭರ್ಣಿ ಮಹಿಳೆಯರಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ, ಮಿಷನ್ ಇಂದ್ರಧನುಷ್ ಯೋಜನೆಯಡಿಯಲ್ಲಿ ಧನುವರ್ಯು, ಬಾಲಕ್ಷಯ, ಗಂಟಲುಮಾರಿ, ಮುಂತಾದ ಮಾರಕ ಕಾಯಿಲೆಗಳಿಗೆ ಉಚಿತವಾಗಿ ಲಸಿಕೆಯನ್ನು ಹಾಕಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.
ತಮ್ಮ ಕಚೇರಿ ಸಭಾಂಗಣದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅನುಷ್ಠಾನಗೊಳ್ಳುವ ವಿವಿಧ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಈ ಲಸಿಕಾ ಅಭಿಯಾನ ನಿರೀಕ್ಷೆಯಂತೆ ಅನುಷ್ಠಾನಗೊಳ್ಳಲಿದೆ. ಆದರೆ, ನಗರ ಮತ್ತು ಪಟ್ಟಣ ಪ್ರದೇಶಗಳಲ್ಲಿ ಈ ಹಿಂದಿನ ಲಸಿಕಾ ಅಭಿಯಾನದಲ್ಲಿ ಹಾಗೂ ಈವರೆಗೆ ಲಸಿಕೆಯನ್ನು ಹಾಕಿಸದೆ ಕೈಬಿಟ್ಟು ಹೋಗಿರುವ ಮಕ್ಕಳನ್ನು ಗುರ್ತಿಸಿ ಲಸಿಕೆ ಹಾಕಲು ತೀರ್ಮಾನಿಸಲಾಗಿದೆ. ನಗರದ ಕೊಳಚೆ ಪ್ರದೇಶಗಳು, ವಲಸಿಗರು ನೆಲೆಸಿರುವ ಪ್ರದೇಶಗಳನ್ನು ಗುರಿಯಾಗಿಸಿಕೊಂಡು ಈಗಾಗಲೇ ಸಮೀಕ್ಷೆ ನಡೆಸಲಾಗಿದೆ. ಇದರಿಂದಾಗಿ ಮಾರಣಾಂತಿಕ ಕಾಯಿಲೆಗಳಿಗೆ ಲಸಿಕೆ ಪಡೆಯದಿರುವ ಮಕ್ಕಳು ಮತ್ತು ಗಭರ್ಣಿಯರಿಗೆ ಲಸಿಕೆ ಹಾಕಲು ಸಾಧ್ಯವಾಗಲಿದೆ ಎಂದರು.