ಕರ್ನಾಟಕ

karnataka

ETV Bharat / state

ಶಿವಮೊಗ್ಗ ದಸರಾ: ಜಂಬೂ ಸವಾರಿ ಇಲ್ಲದೆ ಚಾಮುಂಡೇಶ್ವರಿ ಮೆರವಣಿಗೆ - ಜಂಬೂ ಸವಾರಿ

ಜಂಬೂ ಸವಾರಿ ಮೆರವಣಿಗೆಗೆ ಬಂದಿದ್ದ ನೇತ್ರಾವತಿ ಆನೆ ಮರಿ ಹಾಕಿದೆ. ತಾಯಿ ಮತ್ತು ಮರಿಯಾನೆಯನ್ನು ಇಂದು ಬೆಳಿಗ್ಗೆ ಸಕ್ರೆಬೈಲ್​ಗೆ ರವಾನಿಸಲಾಗಿದೆ.

Shimoga Dasara procession started
ಶಿವಮೊಗ್ಗ ದಸರಾ ಮೆರವಣಿಗೆಗೆ ಚಾಲನೆ

By ETV Bharat Karnataka Team

Published : Oct 24, 2023, 7:06 PM IST

ಶಿವಮೊಗ್ಗ ದಸರಾ ಮೆರವಣಿಗೆ

ಶಿವಮೊಗ್ಗ: ಮಲೆನಾಡ ಹೆಬ್ಬಾಗಿಲು ಶಿವಮೊಗ್ಗ ನಗರದಲ್ಲಿ ಪ್ರತಿವರ್ಷ ದಸರಾ ಹಬ್ಬದ ಕೊನೆಯ ದಿನ ವಿಜಯದಶಮಿ ಮೆರವಣಿಗೆ ಸಂಪ್ರದಾಯಬದ್ಧವಾಗಿ ನಡೆಯುತ್ತದೆ. ಇಂದು ನಗರದ ಶಿವಪ್ಪನಾಯಕ ಅರಮನೆಯ ಮುಂಭಾಗದಲ್ಲಿ ಜಿಲ್ಲಾಧಿಕಾರಿ ಸೆಲ್ವಮಣಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸುವ ಮೂಲಕ ವಿಜಯದಶಮಿ ಮೆರವಣಿಗೆಗೆ ಚಾಲನೆ ನೀಡಿದರು. ನಂತರ ಕೋಟೆ ಆಂಜನೇಯ ದೇವಾಲಯದ ಬಳಿ ತಾಯಿ ಚಾಮುಂಡೇಶ್ವರಿ ತಾಯಿಗೆ ಸಂಸದ ಬಿ.ವೈ.ರಾಘವೇಂದ್ರ ಪುಷ್ಪನಮನ ಸಲ್ಲಿಸಿದರು.

ಈ ಬಾರಿ ಮೆರವಣಿಗೆಯಲ್ಲಿ ಚಾಮುಂಡೇಶ್ವರಿ ದೇವಿಯನ್ನು ಆನೆ ಮೇಲೆ ಮೆರವಣಿಗೆ ಮಾಡದೇ, ವಾಹನದಲ್ಲಿ ತೆಗೆದುಕೊಂಡು ಹೋಗಲಾಯಿತು. ಪ್ರತಿ ವರ್ಷ ಸಾಗರ ಹೆಸರಿನ ಆನೆಯ ಮೇಲೆ ಜಂಬೂ ಸವಾರಿ ನಡೆಸಲಾಗುತ್ತಿತ್ತು‌. ಇದಕ್ಕಾಗಿ ಕಳೆದ ಒಂದು ವಾರದಿಂದ ಸಕ್ರೆಬೈಲಿನಲ್ಲಿ ಹಾಗೂ ಮೂರು ದಿನಗಳಿಂದ ಶಿವಮೊಗ್ಗ ನಗರದಲ್ಲಿ ತಾಲೀಮು ನಡೆಸಲಾಗಿತ್ತು.

ಆದರೆ, ಜಂಬೂ ಸವಾರಿ ಮೆರವಣಿಗೆಗೆಂದು ಬಂದಿದ್ದ ಸಾಗರ, ಹೇಮಾವತಿ ಹಾಗೂ ನೇತ್ರಾವತಿ ಆನೆಗಳಲ್ಲಿ ನೇತ್ರಾವತಿ ಆನೆ ಯಾವುದೇ ಸುಳಿವು ನೀಡದೇ ಸೋಮವಾರ ರಾತ್ರಿ ಹೆಣ್ಣು ಮರಿಗೆ ಜನ್ಮ ನೀಡಿದೆ. ಇದರಿಂದಾಗಿ ನೇತ್ರಾವತಿ ಹಾಗೂ ಮರಿ ಆನೆಯನ್ನು ಸಕ್ರೆಬೈಲು ಆನೆ ಬಿಡಾರಕ್ಕೆ ವಾಪಸ್ ಕರೆದುಕೊಂಡು ಹೋಗಲಾಯಿತು. ಸಾಗರ ಬೆಳ್ಳಿಯ ಅಂಬಾರಿ ಹೊತ್ತು ಸಾಗಿದರೆ, ಆತನಿಗೆ ಎರಡು ಹೆಣ್ಣಾನೆಗಳು ಜತೆಯಾಗುತ್ತಿದ್ದವು. ಈ ಸಲ ಒಂದೇ ಹೆಣ್ಣಾನೆಯ ಜತೆ ನೀಡಿ, ಸಾಗರ ಆನೆಯ ಮೇಲೆ ತಾಯಿ ಚಾಮುಂಡೇಶ್ವರಿ ದೇವಿಯ ಸುಮಾರು 750 ಕೆ‌.ಜಿ ತೂಕದ ಬೆಳ್ಳಿ ಮಂಟಪ ಕೂರಿಸಿ ಮೆರವಣಿಗೆ ಮಾಡುವುದು ಸರಿಯಲ್ಲ ಎಂದು ಬೆಳಿಗ್ಗೆ ನಡೆದ ಸಭೆಯಲ್ಲಿ ತೀರ್ಮಾನಿಸಿ, ಬೆಳ್ಳಿ ಮಂಟಪವನ್ನು ಆನೆ ಮೇಲೆ ಕೂರಿಸದೇ ವಾಹನದಲ್ಲಿ ತೆಗೆದುಕೊಂಡು ಹೋಗಲಾಯಿತು.

ಮೆರವಣಿಗೆಯಲ್ಲಿ ವಿವಿಧ ಕಲಾ ತಂಡಗಳಾದ ಡೊಳ್ಳು ಕುಣಿತ, ವೀರಗಾಸೆ, ಚಂಡೆ ಮದ್ದಳೆ, ಕೀಲು ಕುಣಿತ, ಗೊಂಬೆ ಕುಣಿತ ಸೇರಿದಂತೆ ವಿವಿಧ ಕಲಾ ತಂಡಗಳು ಭಾಗಿಯಾಗಿದ್ದವು. ನಗರದ ವಿವಿಧ ಶಾರದೆಯ ಮೂರ್ತಿಗಳು ಮೆರವಣಿಗೆಯಲ್ಲಿ ಸಾಗಿದವು. ಸಾಗರ ಹಾಗೂ ಹೇಮಾವತಿ ಆನೆ ಆಕರ್ಷಣೆಯ ಕೇಂದ್ರವಾಯಿತು. ಬನ್ನಿ ಮುಡಿಯುವ ತಹಶೀಲ್ದಾರ್ ನಾಗರಾಜ್, ಶಾಸಕ ಚನ್ನಬಸಪ್ಪ, ಮೇಯರ್ ಶಿವಕುಮಾರ್ ಸೇರಿದಂತೆ ಪಾಲಿಕೆ ಸದಸ್ಯರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.

ಇದನ್ನೂ ಓದಿ:ಶಿವಮೊಗ್ಗ ದಸರಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕಿದ್ದ ನೇತ್ರಾವತಿ ಆನೆಗೆ ಮರಿ ಜನನ

ABOUT THE AUTHOR

...view details