ಕರ್ನಾಟಕ

karnataka

ETV Bharat / state

ಶಿವಮೊಗ್ಗ ದಸರಾ ಮೆರವಣಿಗೆ ಸಂಪನ್ನ: ಸಾವಿರಾರು ಜನರು ಭಾಗಿ..VIDEO - ಈಟಿವಿ ಭಾರತ ಕನ್ನಡ

ಶಿವಮೊಗ್ಗ ದಸರಾ ಆಚರಣೆ ಚಾಮುಂಡೇಶ್ವರಿ ದೇವಿಯ ಅಂಬಾರಿ ಮೆರವಣಿಗೆಯೊಂದಿಗೆ ಇಂದು ಸಂಪನ್ನಗೊಂಡಿತು.

shivamogga-dasara-celebration
ಶಿವಮೊಗ್ಗ ದಸರಾ ಮೆರವಣಿಗೆ ಸಂಪನ್ನ : ಸಾವಿರಾರು ಜನರು ಭಾಗಿ

By

Published : Oct 5, 2022, 9:41 PM IST

Updated : Oct 5, 2022, 10:57 PM IST

ಶಿವಮೊಗ್ಗ: ಕಳೆದ 9 ದಿನಗಳಿಂದ ಅದ್ಧೂರಿಯಾಗಿ ನಡೆದ ಶಿವಮೊಗ್ಗ ದಸರಾ ಚಾಮುಂಡೇಶ್ವರಿ ದೇವಿಯ ಅಂಬಾರಿ ಮೆರವಣಿಗೆಯೊಂದಿಗೆ ಇಂದು ಸಂಪನ್ನಗೊಂಡಿತು. ನಾಡದೇವಿ ಚಾಮುಂಡೇಶ್ವರಿಯ ಅಂಬಾರಿ ಹೊತ್ತ ಜಂಬೂ ಸವಾರಿ ಶಿವಮೊಗ್ಗದ ಕೋಟೆ ದೇವಾಲಯದಿಂದ ಫ್ರೀಡಂ ಪಾರ್ಕ್​ವರೆಗೆ ಯಶಸ್ವಿಯಾಗಿ ಸಾಗಿತು.

ಮೈಸೂರು ದಸರಾದಂತೆಯೇ ವಿಜೃಂಭಣೆಯಿಂದ ಆಚರಿಸಲ್ಪಡುವ ಶಿವಮೊಗ್ಗ ದಸರಾ ಕೋವಿಡ್ ಕಾರಣಕ್ಕೆ ಕಳೆದ ಎರಡು ವರ್ಷಗಳ ಕಾಲ ಸರಳವಾಗಿ ನಡೆದಿತ್ತು. ಈ ವರ್ಷ ಯಾವುದೇ ವಿಘ್ನಗಳಿಲ್ಲದೆ ಸಾಂಸ್ಕೃತಿಕ, ಕಲೆ, ಯುವ, ರೈತ, ಮಹಿಳಾ ದಸರಾ ನಡೆದಿದ್ದು, ಜನರಿಂದಲೂ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು.

ನಂದಿಕೋಲಿಗೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ : ಜಿಲ್ಲಾಧಿಕಾರಿ ಡಾ ಸೆಲ್ವಮಣಿ, ಮೇಯರ್ ಸುನಿತಾ ಅಣ್ಣಪ್ಪ ನಂದಿಕೋಲಿಗೆ ಪೂಜೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮಧ್ಯಾಹ್ನ 3.30ಕ್ಕೆ ಆರಂಭವಾದ ಮೆರವಣಿಗೆ ಸಂಜೆ 6 ಗಂಟೆಗೆ ಫ್ರೀಡಂಪಾರ್ಕ್ ತಲುಪಿತು. ಮೆರವಣಿಗೆಯಲ್ಲಿ 180 ಕೆಜಿ ತೂಕದ ಬೆಳ್ಳಿ ಅಂಬಾರಿ, ಹೊದಿಕೆ ಸೇರಿ ಒಟ್ಟು 400 ಕೆಜಿ ತೂಕವನ್ನು ಸಾಗರ್ ಆನೆ ಸರಾಗವಾಗಿ ಹೊತ್ತು ಸಾಗಿತು. ಈ ಸಂದರ್ಭ ಸಾವಿರಾರು ಜನರು ಮೆರವಣಿಗೆಯಲ್ಲಿ ಸಾಗಿದ ದೇವಿಯನ್ನು ಕಣ್ತುಂಬಿಕೊಂಡರು.

ಮೆರವಣಿಯಲ್ಲಿ ವಿವಿಧ ತಂಡಗಳು ಭಾಗಿ: ಮೊದಲು ಕಲಾತಂಡಗಳು, ಅವುಗಳ ಹಿಂದೆ ಆನೆಗಳು ಹೆಜ್ಜೆ ಹಾಕಿದವು. ವೀರಗಾಸೆ, ಕರಡಿಮಜಲು, ಕುದುರೆ ಕುಣಿತ, ಗಾರುಡಿ ಗೊಂಬೆ, ತಾಳೆಮದ್ದಳೆ, ಡೊಳ್ಳು, ಬ್ಯಾಂಡ್ ಸೆಟ್, ಯಕ್ಷಗಾನ ಪಾತ್ರಧಾರಿಗಳು, ಮಹಿಷಾಸುರ ಮರ್ದಿನಿ ಪಾತ್ರಧಾರಿಗಳು ವಿವಿಧ ಕಲಾತಂಡಗಳು ಜಂಬೂಸವಾರಿಯ ಮೆರವಣಿಗೆಯಲ್ಲಿ ಭಾಗವಹಿಸಿದ್ದವು. ಮೆರವಣಿಗೆ ಮಾರ್ಗದ ಉದ್ದಕ್ಕೂ ಜನರು ತಾಳೆಮದ್ದಳೆ, ಡೊಳ್ಳು, ಬ್ಯಾಂಡ್ ಸೆಟ್‌ಗಳ ಸದ್ದಿಗೆ ನೃತ್ಯ ಮಾಡಿ, ಸಂಭ್ರಮಿಸಿದರು.

ಶಿವಮೊಗ್ಗ ದಸರಾ ಮೆರವಣಿಗೆ ಸಂಪನ್ನ: ಸಾವಿರಾರು ಜನರು ಭಾಗಿ..VIDEO

ಪ್ರತಿ ಬಾರಿಯಂತೆ ನಗರದ ವಿವಿಧ ದೇವಾಲಯಗಳಿಂದ ದೇವರುಗಳನ್ನು ಅಲಂಕಾರ ಮಾಡಿ ಮೆರವಣಿಗೆಗೆ ಕರೆತರಲಾಗಿತ್ತು. 50ಕ್ಕೂ ಹೆಚ್ಚು ದೇವರುಗಳು ಮೆರವಣಿಗೆ ಪಾಲ್ಗೊಂಡಿದ್ದವು. ಶಿವಮೊಗ್ಗದ ಫ್ರೀಡಂ ಪಾರ್ಕ್ ನಲ್ಲಿ ನಿರ್ಮಿಸಿದ್ದ ವಿಶಾಲ ವೇದಿಕೆಯಲ್ಲಿ ಅಂಬುಚ್ಛೇದನ ನೆರವೇರಿತು. ತಹಸೀಲ್ದಾರ್ ನಾಗರಾಜ್ ಸಾಂಪ್ರದಾಯಿಕ ಉಡುಗೆಯಲ್ಲಿ ಆಗಮಿಸಿ ಬನ್ನಿ ಕಡಿದರು.

ಈ ಸಂದರ್ಭದಲ್ಲಿ ಸಂಸದ ಬಿ.ವೈ.ರಾಘವೇಂದ್ರ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ, ಡಿಸಿ ಸೆಲ್ವಮಣಿ, ಎಸ್ಪಿ ಮಿಥುನ್ ಕುಮಾರ್ ಸೇರಿದಂತೆ ವಿವಿಧ ಅಧಿಕಾರಿಗಳು ಭಾಗಿಯಾಗಿದ್ದರು. ಈ ವೇಳೆ ನೆರೆದಿದ್ದ ಸಾವಿರಾರು ಜನರು ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ಬಾಳು ಬಂಗಾರವಾಗಲಿ ಎನ್ನುವುದರೊಂದಿಗೆ ಶಿವಮೊಗ್ಗದ ದಸರಾ ಸಂಪನ್ನಗೊಂಡಿದೆ.

ಇದನ್ನೂ ಓದಿ :ಮಂಗಳೂರು ದಸರಾದ ಅದ್ಧೂರಿ ಶೋಭಾಯಾತ್ರೆ: ನಾಳೆ ಬೆಳಗ್ಗೆ ಸಂಪನ್ನ

Last Updated : Oct 5, 2022, 10:57 PM IST

ABOUT THE AUTHOR

...view details