ಶಿವಮೊಗ್ಗ:ಪೋಷಕರು ಅಪ್ರಾಪ್ತ ಮಕ್ಕಳಿಗೆ ಬೈಕ್ ನೀಡುವ ಮುನ್ನ ಎಚ್ಚರ ವಹಿಸಬೇಕು.ಅಪ್ರಾಪ್ತ ಮಗನಿಗೆ ಬೈಕ್ ಚಾಲನೆ ಮಾಡಲು ಕೊಟ್ಟ ತಂದೆಗೆ ಕೋರ್ಟ್ 25 ಸಾವಿರ ರೂ. ದಂಡ ವಿಧಿಸಿದೆ. ಶಿವಮೊಗ್ಗದ ಪಶ್ಚಿಮ ಸಂಚಾರಿ ಪೊಲೀಸ್ ಠಾಣೆಯ ಪಿಎಸ್ಐ ತಿರುಮಲೇಶ್ ಅವರು ಆಗಸ್ಟ್ 12 ರಂದು ಶಿವಮೊಗ್ಗ ಅಶೋಕ ಹೋಟೆಲ್ ಬಳಿ ವಾಹನಗಳ ತಪಾಸಣೆ ನಡೆಸುವಾಗ ಅಪ್ರಾಪ್ತ ಬೈಕ್ ಚಲಾಯಿಸುತ್ತಿರುವುದು ಬೆಳಕಿಗೆ ಬಂದಿತ್ತು.
ತಪಾಸಣೆ ವೇಳೆ KA 14 Y 4001 ನೋಂದಣಿಯ ದ್ವಿಚಕ್ರ ವಾಹನವನ್ನು ಬಾಲಕ ಚಲಾಯಿಸಿಕೊಂಡು ಬಂದಿದ್ದ. ಅಪ್ರಾಪ್ತರು ವಾಹನ ಚಾಲನೆ ಮಾಡಲು ಕಾನೂನಿನಲ್ಲಿ ಅವಕಾಶ ಇಲ್ಲ. ಅಲ್ಲದೇ ಅಪ್ರಾಪ್ತರಿಗೆ ವಾಹನ ಚಾಲನೆಗೆ ಕೊಡುವುದು ಕೂಡ ಅಪರಾಧವಾಗಿದೆ. ಈ ಬಗ್ಗೆ ಶಿವಮೊಗ್ಗದ ಪಶ್ಚಿಮ ಸಂಚಾರಿ ಪೊಲೀಸರು ವಾಹನದ ಮಾಲೀಕರಾದ ಕ್ಲಾರ್ಕ್ಪೇಟೆಯ ನಿವಾಸಿ ಓಂ ಪ್ರಕಾಶ್ ಎಂಬುವರ ವಿರುದ್ಧ ಲಘು ಪ್ರಕರಣ ದಾಖಲಿಸಿ, ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಈ ಕುರಿತು ಶಿವಮೊಗ್ಗದ 4 ನೇ ಎಸಿಜೆ ಮತ್ತು ಜೆಎಂಎಫ್ಸಿ ನ್ಯಾಯಾಲಯದ ನ್ಯಾಯಾಧೀಶರು ದಂಡ ವಿಧಿಸಿ ಆದೇಶಿಸಿದ್ದಾರೆ. ದ್ವಿಚಕ್ರ ವಾಹನ ಮಾಲೀಕರಾದ ಬಾಲಕನ ತಂದೆಗೆ 25 ಸಾವಿರ ರೂ. ದಂಡ ವಿಧಿಸಲಾಗಿದೆ. ಈ ಮೂಲಕ ನ್ಯಾಯಾಲಯವು ಅಪ್ರಾಪ್ತರಿಗೆ ವಾಹನ ನೀಡದಂತೆ ಪೋಷಕರಿಗೆ ಎಚ್ಚರಿಕೆ ನೀಡಿದೆ.