ಶಿವಮೊಗ್ಗ:ಪೋಷಕರು ಅಪ್ರಾಪ್ತ ಮಕ್ಕಳಿಗೆ ಬೈಕ್ ನೀಡುವ ಮುನ್ನ ಎಚ್ಚರ ವಹಿಸಬೇಕು. ಚಾಲನಾ ಪರವಾನಗಿ ಇಲ್ಲದೆ ಬೈಕ್ ಚಾಲನೆ ಅಪರಾಧ, ಇದಕ್ಕೆ ಭಾರಿ ದಂಡ ತೆರಬೇಕಾಗುತ್ತದೆ. ಶಿವಮೊಗ್ಗದ ತೀರ್ಥಹಳ್ಳಿಯಲ್ಲಿ ಅಪ್ರಾಪ್ತ ಮಗನಿಗೆ ಬೈಕ್ ನೀಡಿದ ತಂದೆಗೆ ಕೋರ್ಟ್ 25 ಸಾವಿರ ರೂಪಾಯಿ ದಂಡ ವಿಧಿಸಿದೆ.
ತೀರ್ಥಹಳ್ಳಿಯ ವಿನಾಯಕ ಟಾಕೀಸ್ ಬಳಿ ಅಕ್ಟೋಬರ್ 10ರಂದು 16 ವರ್ಷದ ಬಾಲಕನೋರ್ವ ದ್ವಿಚಕ್ರ ವಾಹನವನ್ನು ಹೆಲ್ಮೆಟ್ ಹಾಗೂ ಚಾಲನಾ ಪರವಾನಗಿ ಇಲ್ಲದೆ ಚಲಾಯಿಸುತ್ತಿದ್ದ. ಇದನ್ನು ಗಮನಿಸಿ ತೀರ್ಥಹಳ್ಳಿ ಟೌನ್ ಪೊಲೀಸರು ಸಂಚಾರಿ ನಿಯಮ ಉಲ್ಲಂಘನೆ ಅಡಿ ಪ್ರಕರಣ ದಾಖಲಿಸಿದ್ದರು. ಬೈಕ್ ಚಲಾಯಿಸಿದ ಬಾಲಕ ಹಾಗೂ ಆತನಿಗೆ ಬೈಕ್ ನೀಡಿದ ತಂದೆ ಅಸಿಫ್ ಬಾಷಾ (46) ವಿರುದ್ಧ ಲಘು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗಿತ್ತು.