ಶಿವಮೊಗ್ಗ :ರಾಜ್ಯಾದ್ಯಂತ ಕೇಸರಿ, ವರ್ಸಸ್ ಹಿಜಾಬ್ ನಡುವೆ ಬಿಗ್ ಫೈಟ್ ಆರಂಭಗೊಂಡಿದೆ. ಇಂದು ಬೆಳಗ್ಗೆ ನಗರದ ಸಹ್ಯಾದ್ರಿ ಕಾಲೇಜ್ನಲ್ಲಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿಕೊಂಡು ಬಂದರೆ, ಮಧ್ಯಾಹ್ನದ ಹೊತ್ತಿಗೆ ಎಟಿಎನ್ಸಿ ಕಾಲೇಜಿನಲ್ಲಿ ಹುಡುಗರು ದಿಢೀರ್ ಆಗಿ ಶಾಲು ಧರಿಸಿಕೊಂಡು ಬಂದು ಜೈ ಶ್ರೀರಾಮ್ ಹಾಗೂ ಹಿಂದೂ ಹಿಂದೂ ನಾವೆಲ್ಲಾ ಒಂದು ಎಂಬ ಘೋಷಣೆ ಕೂಗಿದ್ದಾರೆ.
ಕಾಲೇಜಿನಲ್ಲಿ ಮಧ್ಯಾಹ್ನದ ಊಟದ ವೇಳೆಯ ವರೆಗೆ ತಣ್ಣಗಿದ್ದ ಕಾಲೇಜಿನಲ್ಲಿ ದಿಢೀರನೇ ಶಾಲು ಧರಿಸಿಕೊಂಡು ಬಂದ ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿಗಳು ಹಿಂದೂ ಪರ ಘೋಷಣೆ ಕೂಗಿದರು. ಇತ್ತ ಮುಸ್ಲಿಂ ವಿದ್ಯಾರ್ಥಿಗಳು ಬೇಕೇ ಬೇಕು ಬುರ್ಖಾ ಬೇಕು ಎಂದು ಘೋಷಣೆ ಕೂಗಿದರು.
ನಂತರ ಕಾಲೇಜಿನ ಪ್ರಾಂಶುಪಾಲರಾದ ಸುರೇಶ್ ಕಾಲೇಜಿಗೆ ಸಮವಸ್ತ್ರ ಮಾತ್ರ ಧರಿಸಿಕೊಂಡು ಬರಬೇಕು. ಇಲ್ಲ ಎಂದರೆ ತರಗತಿಗೆ ಬಿಡುವುದಿಲ್ಲವೆಂದು ಸೂಚಿಸಿದರು. ಕಾಲೇಜಿನ ಕ್ಯಾಂಪಸ್ನಲ್ಲಿ ಬಿಗುವಿನ ವಾತಾವರಣ ನಿರ್ಮಾಣಗೊಂಡ ಪರಿಣಾಮ, ಸ್ಥಳದಲ್ಲಿ ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ, ಕೋಟೆ ಪಿಐ ಚಂದ್ರಶೇಖರ್ ದೊಡ್ಡಪೇಟೆ ಪೊಲೀಸ್ ಠಾಣೆಯ ಹರೀಶ್ ಪಾಟೀಲ್ ಸೇರಿದಂತೆ ಇತರರು ಉಪಸ್ಥಿತರಿದ್ದರು.