ಕರ್ನಾಟಕ

karnataka

ETV Bharat / state

ಶಿವಮೊಗ್ಗ-ಬೆಂಗಳೂರು ರೈಲು ನಿಲುಗಡೆ ಸಮಯದಲ್ಲಿ ಬದಲಾವಣೆ : ಬಿ.ವೈ.ರಾಘವೇಂದ್ರ - ಸಂಸದ ಬಿ.ವೈ.ರಾಘವೇಂದ್ರ

ಪ್ರತಿನಿತ್ಯ ಯಶವಂತಪುರ-ಶಿವಮೊಗ್ಗ ಹಾಗೂ ಶಿವಮೊಗ್ಗ-ಯಶವಂತಪುರದವರೆಗೆ ಚಲಿಸುತ್ತಿದ್ದ ಜನಶತಾಬ್ದಿ ರೈಲಿನ ಸೇವೆಯನ್ನು ಮೆಜಸ್ಟಿಕ್‍ವರೆಗೆ ವಿಸ್ತರಿಸಲಾಗಿದೆ ಎಂದರು.

BY Raghavendra
BY Raghavendra

By

Published : Jan 23, 2021, 3:22 AM IST

ಶಿವಮೊಗ್ಗ: ಪ್ರತಿದಿನ ರಾತ್ರಿ ಶಿವಮೊಗ್ಗದಿಂದ ಮೈಸೂರಿಗೆ ಹೊರಡುವ ರೈಲು ಬೆಳಗಿನ ಜಾವ 3.50ಕ್ಕೆ ಬೆಂಗಳೂರಿನ ಮೆಜಸ್ಟಿಕ್ ತಲುಪುತ್ತಿತ್ತು. ಸಾರ್ವಜನಿಕ ಹಿತದೃಷ್ಟಿ ಗಮನದಲ್ಲಿಟ್ಟುಕೊಂಡು ಸಮಯ ಬದಲಾವಣೆ ಮಾಡಿದ್ದು, ಜನವರಿ 31ರಿಂದ ಬೆಳಿಗ್ಗೆ 5ಗಂಟೆಗೆ ಮೆಜಸ್ಟಿಕ್ ತಲುಪಲಿದೆ. ಇದರಿಂದಾಗಿ ಪ್ರಯಾಣಿಕರು ತಮ್ಮ ನಿರೀಕ್ಷಿತ ಸ್ಥಳಕ್ಕೆ ಸುರಕ್ಷಿತವಾಗಿ ತಲುಪಲು ಸಾಧ್ಯವಾಗಲಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.

ರೈಲ್ವೇ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ

ಶಿವಮೊಗ್ಗ ರೈಲ್ವೇ ನಿಲ್ದಾಣದಲ್ಲಿ ಹುಬ್ಬಳ್ಳಿ, ಬೆಂಗಳೂರು ಮತ್ತು ಮೈಸೂರು ವಿಭಾಗಗಳ ರೈಲ್ವೇ ಅಧಿಕಾರಿಗಳೊಂದಿಗೆ ಜಿಲ್ಲೆಯ ರೈಲ್ವೇ ಅಭಿವೃದ್ಧಿ ಕಾಮಗಾರಿಗಳು ಹಾಗೂ ಸರ್ವೇ ಪ್ರಗತಿಯ ಕುರಿತು ಮಾಹಿತಿ ಪಡೆದರು.

ಜನಶತಾಬ್ದಿ ರೈಲಿನ ಸೇವೆ ಮೆಜಸ್ಟಿಕ್​ವರೆಗೆ

ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳಿಗೆ ವಿವರ ನೀಡಿದ ಅವರು, ಪ್ರತಿನಿತ್ಯ ಯಶವಂತಪುರ-ಶಿವಮೊಗ್ಗ ಹಾಗೂ ಶಿವಮೊಗ್ಗ-ಯಶವಂತಪುರದವರೆಗೆ ಚಲಿಸುತ್ತಿದ್ದ ಜನಶತಾಬ್ದಿ ರೈಲಿನ ಸೇವೆಯನ್ನು ಮೆಜಸ್ಟಿಕ್‍ವರೆಗೆ ವಿಸ್ತರಿಸಲಾಗಿದೆ. ಪ್ರತಿದಿನ ಬೆಳಿಗ್ಗೆ 5.30ಕ್ಕೆ ಹೊರಡುತ್ತಿದ್ದ ಈ ರೈಲು ಮುಂದಿನ ದಿನಗಳಲ್ಲಿ ಬೆಳಿಗ್ಗೆ 5.15ಕ್ಕೆ ಹೊರಟು ಬೆಳಿಗ್ಗೆ 9.50ಕ್ಕೆ ಮೆಜಸ್ಟಿಕ್ ತಲುಪಲಿದೆ. ಇದರಿಂದಾಗಿ ವೈಯಕ್ತಿಕ ಹಾಗೂ ಕಚೇರಿ ಕೆಲಸಗಳಿಗಾಗಿ ಒಂದೇ ದಿನದಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ ಹೋಗಿ ಬರುವವರಿಗೆ ಅನುಕೂಲವಾಗಲಿದೆ ಎಂದರು.ಅಲ್ಲದೇ ಶಿವಮೊಗ್ಗ-ಚೆನ್ನೈ, ಶಿವಮೊಗ್ಗ-ರೇಣಿಗುಂಟ ರೈಲು ಮಾರ್ಗವನ್ನು ಅಲ್ಪ ಪ್ರಮಾಣದಲ್ಲಿ ಮಾರ್ಪಡಿಸಿ, ಸಮಯ ನಿಗಧಿಪಡಿಸಲು ತೀರ್ಮಾನಿಸಲಾಗಿದೆ. ಇದರಿಂದಾಗಿ ತಿರುಪತಿಗೆ ತೆರಳುವ ಭಕ್ತಾಧಿಗಳಿಗೆ ಹಾಗೂ ಚೆನ್ನೈಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಅನುಕೂಲವಾಗಲಿದೆ ಎಂದರು.

150-200ಕೋಟಿ ರೂ.ಗಳ ವೆಚ್ಚದಲ್ಲಿ ಕಾರ್ಯ

ಯಾವುದೇ ಕಾರಣಕ್ಕೂ ಈ ರೈಲು ಮಾರ್ಗದ ತಡೆ ಮಾಡಲಾಗುವುದಿಲ್ಲ ಎಂದ ಅವರು, ಅರಸಾಳು ನಿಲ್ದಾಣವನ್ನು ಅತ್ಯಾಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ. ಐತಿಹಾಸಿಕವೆನ್ನುವಂತೆ ರೂಪಿಸಲಾಗಿರುವ ಈ ನಿಲ್ದಾಣದ ಮೂಲಕ ಹಾದು ಹೋಗುತ್ತಿದ್ದ ಎಕ್ಸ್​ಪ್ರೆಸ್​ ರೈಲು ನಿಲುಗಡೆಗೆ ಅವಕಾಶ ಕಲ್ಪಿಸಲಾಗಿದೆ ಎಂದರು. ರೈಲ್ವೇ ಕೋಚಿಂಗ್ ಡಿಪೋ ಮತ್ತು ಟರ್ಮಿನಲ್‍ಗಳ ನಿರ್ಮಾಣ ಕಾರ್ಯಕ್ಕೆ ಸಂಬಂಧಿಸಿದಂತೆ ಶೀಘ್ರವೇ ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಿ, ಚಾಲನೆ ನೀಡುವುದಾಗಿ ರೈಲ್ವೇ ಜನರಲ್ ಮ್ಯಾನೇಜರ್ ಎ.ಕೆ.ಸಿಂಗ್ ಅವರು ಭರವಸೆ ನೀಡಿದ್ದಾರೆ. 150-200ಕೋಟಿ ರೂ.ಗಳ ವೆಚ್ಚದಲ್ಲಿ ಸಾಗರ ಮತ್ತು ತಾಳಗುಪ್ಪ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಆರ್ಥಿಕ ನೆರವಿನಿಂದ ಮೆಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಮಾರ್ಚ್ 31ರೊಳಗಾಗಿ ನಾಲ್ಕು ರೈಲ್ವೇ ಮೇಲ್ಸೇತುವೆಗಳ ನಿರ್ಮಾಣ ಮತ್ತು ಕೋಚಿಂಗ್ ಡಿಪೋ ನಿರ್ಮಾಣಕ್ಕೆ ಚಾಲನೆ ಹಾಗೂ ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಹೊಸ ರೈಲು ಮಾರ್ಗದ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡು ಬಳಿಕ ಕಾಮಗಾರಿಗಳ ಚಾಲನೆಗೆ ಕೇಂದ್ರ ರೈಲ್ವೇ ಸಚಿವ ಪಿಯೂಷ್​ ಗೋಯಲ್ ಅವರನ್ನು ಆಹ್ವಾನಿಸಲಾಗುವುದು ಎಂದರು.

ತಾಳಗುಪ್ಪ-ಹುಬ್ಬಳ್ಳಿ ಹೊಸ ರೈಲು ಮಾರ್ಗದ ಸರ್ವೆ ಕಾರ್ಯಕ್ಕೆ ಸರ್ಕಾರ ಈಗಾಗಲೇ 15ಲಕ್ಷ ರೂ.ಗಳನ್ನು ಮಂಜೂರು ಮಾಡಿದೆ. ಸಮೀಕ್ಷೆ ವರದಿಯ ನಂತರ ರೈಲು ಮಾರ್ಗದ ನಿರ್ಮಾಣ ಕಾರ್ಯಕ್ಕೆ ಅಗತ್ಯ ಕ್ರಮ ವಹಿಸಲಾಗುವುದು ಎಂದರು. ಸಭೆಯಲ್ಲಿ ಹುಬ್ಬಳ್ಳಿ ರೈಲ್ವೇ ಜನರಲ್ ಮ್ಯಾನೇಜರ್ ಎ.ಕೆ.ಸಿಂಗ್, ಮೈಸೂರು ವಿಭಾಗದ ವಿಭಾಗೀಯ ರೈಲ್ವೇ ವ್ಯವಸ್ಥಾಪಕ ರಾಹುಲ್ ಅಗರವಾಲ್​, ಸೂಡಾ ಅಧ್ಯಕ್ಷ ಜ್ಯೋತಿ ಪ್ರಕಾಶ್, ರಾಜ್ಯ ಆರ್ಯ ವೈಶ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್, ಹುಬ್ಬಳ್ಳಿ ರೈಲ್ವೆಯ ಡೆಪ್ಯೂಟಿ ಜನರಲ್ ಮ್ಯಾನೇಜರ್ ವಿಜಯ್​, ವಿಭಾಗೀಯ ಹಿರಿಯ ವಾಣಿಜ್ಯ ಅಧಿಕಾರಿ ಡಾ, ಮಂಜುನಾಥ್, ವಿಭಾಗೀಯ ಹಿರಿಯ ಅಧಿಕಾರಿಗಳಾದ ಡಾ, ಸತೀಶ್, ಹೆಚ್.ಎಸ್.ವರ್ಮಾ, ಅನಿಲ್ ಪವಿತ್ರನ್, ರೂಪಾ ಸಾವಿತ್ರನ್, ವಿಫುಲ್ ಜೈನ್, ರವಿಕುಮಾರ್, ರಾಜಶೇಖರ್, ಸರೋಜ ಸೇರಿದಂತೆ ರೈಲ್ವೇಯ ವಿವಿಧ ಶ್ರೇಣಿಯ ಅಧಿಕಾರಿಗಳು ಉಪಸ್ಥಿತರಿದ್ದರು.

ABOUT THE AUTHOR

...view details