ಶಿವಮೊಗ್ಗ: ರಾಜೀವ್ ಗಾಂಧಿ ವಸತಿ ನಿಗಮದಿಂದ ನಗರ ಆಶ್ರಯ ಮನೆಗಳ ನಿರ್ಮಾಣಕ್ಕೆ ಎಲ್ಲಾ ಸಹಕಾರ ನೀಡಲಾಗುತ್ತಿದ್ದು, ಸ್ಥಳೀಯ ಸಂಸ್ಥೆಗಳು ಫಲಾನುಭವಿಗಳ ಆಯ್ಕೆ ಮತ್ತಿತರ ಪ್ರಕ್ರಿಯೆಯನ್ನು ಆದಷ್ಟು ಬೇಗನೆ ಪೂರ್ಣಗೊಳಿಸಬೇಕು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಅವರು ಹೇಳಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಜಿಲ್ಲೆಯಲ್ಲಿ ನಿಗಮದಿಂದ ಕೈಗೊಳ್ಳಲಾಗಿರುವ ವಸತಿ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಅವರು, ಆಶ್ರಯ ಸಮಿತಿಯ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಿ, ಗುಣಮಟ್ಟದ ಮನೆಗಳನ್ನು ನಿರ್ಮಿಸಬೇಕು. ಫಲಾನುಭವಿಗಳಿಂದ ಆರಂಭದಲ್ಲಿಯೇ ವಂತಿಗೆ ಹಣವನ್ನು ಪಡೆದುಕೊಳ್ಳದೇ, ಮನೆ ನಿರ್ಮಾಣ ಕಾರ್ಯ ಒಂದು ಹಂತಕ್ಕೆ ಬಂದ ಬಳಿಕ ವಂತಿಗೆ ಹಣವನ್ನು ಪಡೆಯಬೇಕು. ಆ ಬಳಿಕ ಬ್ಯಾಂಕ್‍ನಿಂದ ಸಾಲ ಪಡೆಯಲು ಸಹ ಫಲಾನುಭವಿಗಳಿಗೆ ಸುಲಭವಾಗಲಿದೆ ಎಂದರು.
ಬ್ಯಾಂಕುಗಳು ಜಿಲ್ಲಾ ವಾರ್ಷಿಕ ಸಾಲ ಯೋಜನೆಯಲ್ಲಿ ವಸತಿ ನಿರ್ಮಾಣಕ್ಕಾಗಿ ಒಟ್ಟು ಸಾಲ ಯೋಜನೆಯ ಶೇ.20ರಷ್ಟನ್ನು ಮೀಸಲಾಗಿರಿಸಿದ್ದರೂ, ಅದರಲ್ಲಿ ಶೇ.6 ರಿಂದ 7ರಷ್ಟು ಮಾತ್ರ ಪ್ರಗತಿ ಪ್ರತಿ ವರ್ಷ ಸಾಧ್ಯವಾಗುತ್ತಿದೆ. ವಸತಿ ಯೋಜನೆಯಡಿ ಸಾಲ ನೀಡಲು ಬ್ಯಾಂಕುಗಳು ಅನಗತ್ಯ ಷರತ್ತುಗಳನ್ನು ವಿಧಿಸದೆ ಆದ್ಯತೆ ಮೇರೆಗೆ ಒದಗಿಸಬೇಕು ಎಂದು ಅವರು ಹೇಳಿದ್ರು. ಪ್ರಧಾನಮಂತ್ರಿ ವಸತಿ ಯೋಜನೆಯಡಿ 7.50ಲಕ್ಷ ರೂ. ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಲು 1.5ಲಕ್ಷ ರೂ. ಸಬ್ಸಿಡಿ ಹಣವನ್ನು ನೀಡಲಾಗುತ್ತಿದೆ. ಉಳಿದ 6ಲಕ್ಷ ರೂ.ಗಳನ್ನು ಫಲಾನುಭವಿಗಳು ಸ್ವತಃ ಹಾಗೂ ಬ್ಯಾಂಕು ಸಾಲದ ಮೂಲಕ ಭರಿಸಬೇಕು. ಜಿ ಪ್ಲಸ್ 3 ಮಾದರಿಯಲ್ಲಿ ಪ್ರಥಮ ಹಂತದಲ್ಲಿ ಸುಮಾರು 2ಸಾವಿರ ಮನೆಗಳ ನಿರ್ಮಾಣಕ್ಕಾಗಿ ಫಲಾನುಭವಿಗಳಿಂದ ಅರ್ಜಿಗಳನ್ನು ಕರೆದು, ಡಿಪಿಆರ್ ಸಿದ್ಧಪಡಿಸಿ ಅನುಮೋದನೆಗಾಗಿ ಸಲ್ಲಿಸುವಂತೆ ಅನ್ಬುಕುಮಾರ್ ಸೂಚಿಸಿದರು.