ಶಿವಮೊಗ್ಗ: ಗುರುವಾರ ಪ್ರಕಟವಾದ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಶಿವಮೊಗ್ಗ ಜಿಲ್ಲೆಯ 11 ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಔಟ್ ಆಫ್ ಮಾರ್ಕ್ಸ್ ಸಾಧನೆ ಮಾಡಿದ್ದು, ಪೋಷಕರಲ್ಲಿ ಸಂತಸ ಮನೆ ಮಾಡಿದೆ.
ಶಿವಮೊಗ್ಗ ನಗರದ ಅನನ್ಯ ಇಂಗ್ಲೀಷ್ ಶಾಲೆಯ ಪಂಚಮಿ, ಆದಿಚುಂಚನಗಿರಿ ಶಾಲೆಯ ಪಂಚಮಿ, ವಿಕಾಸ ಶಾಲೆಯ ಪ್ರಜ್ಞಾ, ಅನನ್ಯ ಶಾಲೆಯ ಅನನ್ಯ, ರಾಮಕೃಷ್ಣ ಶಾಲೆಯ ಭೂಮಿಕಾ, ಸಾಗರದ ರಾಮಕೃಷ್ಣ ಆಂಗ್ಲ ಮಾಧ್ಯಮದ ವಿಕಾಸ್, ಭದ್ರಾವತಿ ಆದಿಚುಂಚನಗಿರಿ ಶಾಲೆಯ ಪ್ರೇರಣ ಸೊಳಂಕೆ ಹಾಗೂ ಪೂರ್ಣ ಪ್ರಜ್ಞಾ ಶಾಲೆಯ ಪ್ರತಿಕ್ಷಾ ದಯಾನಂದ, ಶಿಕಾರಿಪುರದ ಬನಸಿರಿ ಲಯನ್ಸ್ ಶಾಲೆಯ ರಕ್ಷಿತಾ, ಸೊರಬದ ಸ್ವಾಮಿ ವಿವೇಕಾನಂದ ಶಾಲೆಯ ಸಮೀಕ್ಷಾ, ತೀರ್ಥಹಳ್ಳಿಯ ವಾಗ್ದೇವಿ ಇಂಗ್ಲೀಷ್ ಹೈಸ್ಕೂಲ್ ಸೃಷ್ಟಿ 625 ಅಂಕ ಪಡೆದು ಮಿಂಚಿದ್ದಾರೆ.
ಶಿವಮೊಗ್ಗದ ವಿದ್ಯಾರ್ಥಿಗಳಿಂದ ಔಟ್ ಆಫ್ ಮಾರ್ಕ್ಸ್ ಸಾಧನೆ ವಿಕಾಸ ಶಾಲೆಯ ವಿದ್ಯಾರ್ಥಿನಿಯಾದ ಪ್ರಜ್ಞಾ ಪರೀಕ್ಷಾ ಫಲಿತಾಂಶದ ಬಗ್ಗೆ 'ಈಟಿವಿ ಭಾರತ' ಸಂತಸ ಹಂಚಿಕೊಂಡಿದ್ದು, ಶಾಲೆಯಲ್ಲಿ ಎಲ್ಲ ಶಿಕ್ಷಕರು ಉತ್ತಮವಾಗಿ ಪಾಠ ಮಾಡಿದ್ದರು. ಯಾವುದೇ ಡೌಟ್ ಅಂತ ಪೋನ್ ಮಾಡಿದರೂ ಸ್ಪಂದಿಸಿ ಪರಿಹಾರ ತಿಳಿಸುತ್ತಿದ್ದರು. ಮನೆಯಲ್ಲಿ ಯಾರು ಸಹ ನಮಗೆ ಓದು ಅಂತ ಹೆಚ್ಚು ಹೇಳುತ್ತಿರಲಿಲ್ಲ. ಆದರೂ ನಾನು ಪ್ರತಿ ದಿನ ಮಾತ್ರ ಎರಡು ಗಂಟೆ ಓದುತ್ತಿದ್ದೆ ಎಂದರು.
ನಾನು 615 ಅಂಕ ಬರಬಹುದು ಎಂದು ತಿಳಿದು ಕೊಂಡಿದ್ದೆ. ಆದರೆ, 625 ಅಂಕ ಬರುತ್ತದೆ ಎಂದು ಅಂದು ಕೊಂಡಿರಲಿಲ್ಲ. ಈ ಅಂಕ ನನಗೆ ಖುಷಿ ತಂದಿದೆ. ನಾನು ಮುಂದೆ ಬೇಸಿಕ್ ಸೈನ್ಸ್ ಓದಿ, ಅದರಲ್ಲಿ ರಿಸರ್ಚ್ ಮಾಡಬೇಕೆನ್ನುವ ಬಯಕೆ ಇದೆ ಎಂದು ತಿಳಿಸಿದರು. ಪ್ರಜ್ಞಾ ತಂದೆ ರಮೇಶ್ ಮಾತನಾಡಿ, ನಮ್ಮ ಮಗಳನ್ನು ಒಂದು ದಿನವೂ ಟ್ಯೂಷನ್ಗೆ ಕಳುಹಿಸಿಲ್ಲ. ಶಾಲೆಯ ಪಾಠದಿಂದಲೇ ಉತ್ತಮ ಅಂಕಗಳಿಸಬಹುದು ಎಂದು ತೋರಿಸಿಕೊಟ್ಟಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದನ್ನೂ ಓದಿ:SSLCಯಲ್ಲಿ C+ .. ವಿದ್ಯಾರ್ಥಿ ದಿಲ್ ಖುಷ್, ಮಳೆಯಲ್ಲೇ ಮಸ್ತ್ ಡ್ಯಾನ್ಸ್