ಶಿವಮೊಗ್ಗ: ಶಿವಮೊಗ್ಗದಿಂದ ರಾಣೇಬೆನ್ನೂರು ವರೆಗಿನ ರೈಲು ಮಾರ್ಗ ಅವಾಸ್ತವಿಕವಾಗಿದ್ದು, ಈ ಯೋಜನೆ ಬದಲಿಸಬೇಕೆಂದು ಆಗ್ರಹಿಸಿ ಶಿಕಾರಿಪುರ ತಾಲೂಕಿನ ಜನತೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಸದ್ಯಕ್ಕೆ ಶಿವಮೊಗ್ಗದಿಂದ ಶಿಕಾರಿಪುರ - ಮಾಸೂರು ಮುಖಾಂತರ ರೈಲು ಮಾರ್ಗದ ಸರ್ವೇ ಕಾರ್ಯ ನಡೆದಿದೆ. ಆದರೆ ಇದು ಅವಾಸ್ತವಿಕವಾಗಿದೆ. ಶಿಕಾರಿಪುರದಿಂದ ಮಾಸೂರು ಮಾರ್ಗವಾಗಿ ಬರುವ ರೈಲು ಮಾರ್ಗದ ಪಕ್ಕದಲ್ಲಿ ರಸ್ತೆಗಳಿವೆ. ಅಲ್ಲದೇ, ಈ ಭಾಗದಲ್ಲಿ ಯಾವುದೇ ಕಾರ್ಖಾನೆಯಾಗಲಿ, ಪ್ರವಾಸಿ ಕ್ಷೇತ್ರವಾಗಲಿ ಇಲ್ಲ. ಇದರಿಂದ ಈ ಮಾರ್ಗವನ್ನು ಬದಲಿಸಿ ಶಿಕಾರಿಪುರದಿಂದ ಶಿರಾಳಕೊಪ್ಪದ ಮೂಲಕ ಆನವಟ್ಟಿ, ಹಾನಗಲ್, ಬಂಕಾಪುರದ ಮೂಲಕ ಯಲವಗಿ ರೈಲು ಮಾರ್ಗಕ್ಕೆ ಸಂಪರ್ಕ ಮಾಡುವ ಕೆಲಸ ಮಾಡಬೇಕೆಂದು ಶಿರಾಳಕೊಪ್ಪ ಭಾಗದ ಜನ ಮನವಿ ಸಲ್ಲಿಸಿದ್ದಾರೆ.
ರೈಲು ಮಾರ್ಗ ಬದಲಿಸಲು ಒತ್ತಾಯಿಸಿದ ಜೆಡಿಎಸ್ ಮುಖಂಡ ಹೆಚ್.ಟಿ.ಬಳಿಗಾರ್ ಶಿಕಾರಿಪುರ ರೈಲು ಮಾರ್ಗಕ್ಕೆ ಶಿವಮೊಗ್ಗದಿಂದ ಶಿಕಾರಿಪುರದ ತನಕ ಭೂ ಸ್ವಾಧೀನ ಮಾಡಲಾಗುತ್ತಿದೆ. ಶಿಕಾರಿಪುರದ ಮುಂಭಾಗದ ಪ್ರದೇಶದಲ್ಲಿ ಇನ್ನೂ ರೈಲು ಮಾರ್ಗಕ್ಕೆ ಭೂ ಸ್ವಾಧೀನ ಪ್ರಕ್ರಿಯೆ ನಡೆಯುತ್ತಿದೆ. ಇದರಿಂದಾಗಿ ಮಾಸೂರು ರೈಲು ಮಾರ್ಗವನ್ನು ಕೈ ಬಿಟ್ಟು ಹೊಸ ಪ್ರಸ್ತಾವನೆಯನ್ನು ಕಳುಹಿಸಿ, ಶಿರಾಳಕೊಪ್ಪ ಮಾರ್ಗವಾಗಿ ರೈಲು ತೆಗೆದುಕೊಂಡು ಹೋಗಬೇಕು ಎಂದು ಆಗ್ರಹಿಸಲಾಗಿದೆ.
ಶಿಕಾರಿಪುರದಿಂದ ಶಿರಾಳಕೊಪ್ಪ ಮಾರ್ಗವಾಗಿ ರೈಲು ಸಂಚರಿಸಿದರೆ, ಅಕ್ಕಮಹಾದೇವಿಯ ಉಡುತಡಿ, ಬಳ್ಳಿಗಾವಿ, ತಾಳಗುಂದ, ತೊಗರ್ಸಿ, ಆಮವಟ್ಟಿಯ ಕೋಟಿಪುರದ ಮಾರ್ಗವಾಗಿ ಯಲವಿಗಿ ಮೂಲಕ ಉತ್ತರ ಕರ್ನಾಟಕದ ಭಾಗಗಳಿಗೆ ಸಂಪರ್ಕ ಪಡೆಯಬಹುದಾಗಿದೆ. ಇದರಿಂದ ರೈಲ್ವೆ ಇಲಾಖೆಗೂ ಆದಾಯ ಬರುತ್ತದೆ ಎಂದು ಜೆಡಿಎಸ್ ಮುಖಂಡ ಹೆಚ್.ಟಿ.ಬಳಿಗಾರ್ ನೇತೃತ್ವದಲ್ಲಿ ಮನವಿ ಸಲ್ಲಿಸಲಾಗಿದೆ.
ಓದಿ:National Water Awards 2020: ಕರ್ನಾಟಕಕ್ಕೆ ಒಲಿದ ಎರಡು ಪ್ರಶಸ್ತಿಗಳು!