ಕರ್ನಾಟಕ

karnataka

ETV Bharat / state

ಭಿನ್ನ... ವಿಭಿನ್ನ.... ಮಗಳ ಮದುವೆಗೆ 112 ಪುಟಗಳುಳ್ಳ ಪುಸ್ತಕವೇ ಆಮಂತ್ರಣ ಪತ್ರಿಕೆ! - unique wedding card

ವಿವಾಹ ಎಂಬುದು ಹೆಣ್ಣು - ಗಂಡಿನ ಭಾವನಾತ್ಮಕ ಬೆಸುಗೆ, ವಧು-ವರರ ಹೊಸಬಾಳಿನ ಪುಸ್ತಕಕ್ಕೆ ಮುನ್ನುಡಿ. ಎರಡೂ ಕುಟುಂಬಗಳ ನಡುವೆ ನಂಟು ಬೆಳೆಸಿ, ಬಾಂಧವ್ಯ ಗಟ್ಟಿಗೊಳಿಸುವ ವಿವಾಹ ಪದ್ಧತಿ ಒಂದು ವಿಶಿಷ್ಟ ಕಾರ್ಯಕ್ರಮ. ಇದರ ಪ್ರಮುಖ ಆಕರ್ಷಣೆ ಆಮಂತ್ರಣ ಪತ್ರಿಕೆ. ಹೀಗಾಗಿ ಇಲ್ಲೊಬ್ಬರು ತಂದೆ ಮಗಳ ಮದುವೆಗೆಂದೇ ಪುಸ್ತಕದ ರೂಪದಲ್ಲಿ ಇನ್ವಿಟೇಷನ್​ ಮಾಡಿಸಿ ದಾಖಲೆ ಬರೆದಿದ್ದಾರೆ.

special wedding card in shimogha
ದಾಖಲೆಯ ಆಮಂತ್ರಣ ಪತ್ರಿಕೆ

By

Published : Nov 21, 2020, 10:09 AM IST

ಶಿವಮೊಗ್ಗ:ಜಿಲ್ಲೆಯ ಪಂಚಾರಕ್ಷಪ್ಪ ಎಂಬುವವರು ತಮ್ಮ ಮಗಳು ಶಿವಾನಿಯ ಮದುವೆಗೆ ಎಂದೇ ತಯಾರಿಸಿದ ಮದುವೆ ಆಮಂತ್ರಣ ಪತ್ರಿಕೆಯೊಂದು ಆಕರ್ಷಕವಾಗಿದ್ದು, ದಾಖಲೆ ಬರೆದಿದೆ.

ವಿಶೇಷ ಮದುವೆ ಆಮಂತ್ರಣ ಪತ್ರಿಕೆ

ಭಾರತೀಯ ಸಂಸ್ಕೃತಿಯಲ್ಲಿ ವಿವಾಹ ಎಂಬ ಪದಕ್ಕೆ ವಿಶಿಷ್ಟ ಅರ್ಥವಿದೆ. ಈ ಅಪೂರ್ವ ಸಂದರ್ಭಕ್ಕೆ ಬಂಧು ಬಳಗದವರು, ಸ್ನೇಹಿತರು - ಹಿತೈಷಿಗಳೆಲ್ಲರೂ ಭಾಗಿಯಾಗಬೇಕು ಎಂಬ ಸದುದ್ದೇಶದಿಂದ ವಿವಾಹದ ಆಮಂತ್ರಣ ಪತ್ರಿಕೆ ಮಾಡಿಸಿ ಮನೆ ಮನೆಗೆ ಹೋಗಿ ಕೊಟ್ಟು ಆಹ್ವಾನಿಸುವ ಪದ್ಧತಿ ನಮ್ಮಲ್ಲಿದೆ. ಅದೇ ರೀತಿ ಶಿವಮೊಗ್ಗದ ಪಂಚಾರಕ್ಷಪ್ಪ ತಮ್ಮ ಮಗಳಾದ ಶಿವಾಲಿ ಮದುವೆಗೆ ಕರೆಯಲು ವಿವಾಹ ಸಂಗಮ ಎಂಬ ಹೆಸರಿನ, 112 ಪುಟಗಳುಳ್ಳ ಪುಸ್ತಕವನ್ನೇ ಮಾಡಿಸಿ ಪ್ರಕಟಿಸಿ, ಅದನ್ನೇ ಹಂಚಿ ಎಲ್ಲರನ್ನೂ ಮದುವೆಗೆ ಕರೆದಿದ್ದಾರೆ.

ಈ ವಿವಾಹ ಸಂಗಮ ಪುಸ್ತಕದಲ್ಲಿ 676 ಲೇಖನಗಳನ್ನು ಪಂಚರಂಗಿ ಎಂಬ ಕಾವ್ಯನಾಮದಿಂದ ತಾವೇ ಬರೆದಿದ್ದಾರೆ. ಇದರಲ್ಲಿ ವಿಭಿನ್ನ ಮದುವೆಗಳು, ವಿವಾಹ ಸಂಸ್ಕೃತಿಯ ದಿಕ್ಕು, ಶರೀರ - ಮನಸ್ಸುಗಳ ಮಿಲನ, ಸಪ್ತಪದಿ ಹೀಗೆ ವಧುವರರಿಗೆ ಸಲಹೆ ನೀಡಬಹುದಾದ ಲೇಖನಗಳನ್ನು ತಾವೇ ಬರೆದಿರುವುದು ವಿಶೇಷ. ಮಗಳು ಶಿವಾಲಿ ಮತ್ತು ವರ ಧರಣೇಶ್ ಅವರ ವಿವಾಹಕ್ಕಾಗಿ ರಚಿತವಾದ ಈ ಪುಸ್ತಕ ರಚಿಸಿದ್ದಾರೆ.

ಇದರ ಜೊತೆಗೆ ಪ್ರೀತಿ ಮಾಡುವವರಿಗೆ ತಿಳಿವಳಿಕೆ ನೀಡಲು ಪ್ರೇಮಾಂಜಲಿ ಎಂಬ 208 ಪುಟಗಳ ಹೊತ್ತಿಗೆ ಕೂಡ ಪ್ರಕಟಿಸಿದ್ದಾರೆ. ಇಷ್ಟೇ ಅಲ್ಲ, ಈ ಎರಡೂ ಪುಸ್ತಕಗಳ ಜೊತೆಗೆ ನಿಶ್ಚಿತಾರ್ಥದ ವಿಷಯಗಳನ್ನೊಳಗೊಂಡ ಸಿಡಿ(CD) ಕೂಡ ನೀಡಿದ್ದಾರೆ. ಸುಮಾರು 300 ಪುಟಗಳ ಎರಡೂ ಪುಸ್ತಕಗಳನ್ನು ಆರ್ಟ್ ಪೇಪರ್ ನಲ್ಲಿ ಅದರಲ್ಲೂ ವರ್ಣರಂಜಿತವಾಗಿ ಮುದ್ರಿಸಲಾಗಿದೆ.

ಮದುವೆಯೆಂದರೆ ಕೇವಲ ಹೆಣ್ಣು ಗಂಡಿನ ಸಮಾಗಮವಷ್ಟೇ ಅಲ್ಲ, ಪ್ರತಿಯೊಬ್ಬರ ಜೀವನದ ಒಂದು ಅದ್ಭುತ ಕ್ಷಣ. ಹೀಗಾಗಿ ಎಲ್ಲರೂ ಈ ಸುಂದರ ಕ್ಷಣಗಳನ್ನು ಕೂಡಿಡ ಬಯಸುತ್ತಾರೆ. ತನ್ನ ಮಗಳ ಮದುವೆ ವಿಭಿನ್ನವಾಗಿರಲಿ ಹಾಗೂ ಓದುಗರಿಗೆ ಸಾಹಿತ್ಯದ ಅಭಿರುಚಿ ಹೆಚ್ಚಲಿ ಎನ್ನುವ ಕಾರಣಕ್ಕೆ ಪಂಚಾರಕ್ಷಪ್ಪ ಈ ರೀತಿ ವಿಶಿಷ್ಟ ಆಮಂತ್ರಣ ಪತ್ರಿಕೆ ಮಾಡಿಸಿರುವುದು ನಿಜಕ್ಕೂ ಶ್ಲಾಘನೀಯ.

ABOUT THE AUTHOR

...view details