ಶಿವಮೊಗ್ಗ: ಕೋವಿಡ್ ನಿಯಂತ್ರಣ ಹಿನ್ನೆಲೆಯಲ್ಲಿ ಸರ್ಕಾರ ಈಗಾಗಲೇ ಮಾರ್ಗಸೂಚಿ ಬಿಡುಗಡೆಗೊಳಿಸಿದ್ದು, ಇದರಂತೆ ಬೆಳಗ್ಗೆ 6 ರಿಂದ ರಾತ್ರಿ 9 ರವರೆಗೆ ಪಡಿತರ ಅಂಗಡಿ, ದಿನಸಿ, ಹಣ್ಣು ತರಕಾರಿ, ಮೀನು ಮಾಂಸ, ಹಾಲಿನ ಅಂಗಡಿ, ಪಶು ಆಹಾರ, ಅಗತ್ಯ ಸರಕು, ಕಟ್ಟಡ ನಿರ್ಮಾಣ ಸಾಮಗ್ರಿ ಅಂಗಡಿ ಹೊರತುಪಡಿಸಿ ಉಳಿದೆಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಬೇಕಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.
ಇಂದು ತಮ್ಮ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈದಾನ ಇಲ್ಲವೇ ತೆರೆದ ಪ್ರದೇಶದಲ್ಲಿ ಮಾತ್ರ ಸಗಟು ತರಕಾರಿ, ಹಣ್ಣು, ಹೂ ವ್ಯಾಪಾರ ನಡೆಸಲು ಅನುಮತಿ ಇದೆ.
ಮುಂಗಾರು ಕೃಷಿ ಪೂರ್ವ ಚಟುವಟಿಕೆಗಳಿಗೆ ನಿರ್ಬಂಧವಿಲ್ಲ. ಎಲ್ಲ ರೀತಿಯ ಕೈಗಾರಿಕೆ, ಸಂಸ್ಥೆಗಳು ಕಾರ್ಯನಿರ್ವಹಿಸಬಹುದು. ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವವರಿಗೆ ಅಧಿಕೃತವಾದ ಐಡಿ ಕಾರ್ಡ್ ನೀಡಿರಬೇಕು.
ಮದುವೆ ಸಮಾರಂಭಗಳಿಗೆ ತಹಶೀಲ್ದಾರ್ ಕಚೇರಿಯಿಂದ ಅನುಮತಿ ಪಡೆದು ಗರಿಷ್ಠ 50 ಮಂದಿ ಮೀರದಂತೆ ನಿರ್ವಹಿಸಬೇಕು. ರಾಜ್ಯದೊಳಗೆ ವ್ಯಕ್ತಿಗಳ ಸಂಚಾರ ಹಾಗೂ ಸರಕು ಸಾಗಾಣಿಕೆಗೆ ಮುಕ್ತ ಅವಕಾಶವಿದೆ ಎಂದರು.
ವೀಕೆಂಡ್ ಕರ್ಪ್ಯೂ:
ಶುಕ್ರವಾರ ರಾತ್ರಿ 9 ರಿಂದ ಸೋಮವಾರ ಬೆಳಗ್ಗೆ 6 ರವರೆಗೆ ಸಂಪೂರ್ಣ ಕರ್ಫ್ಯೂ ಇರಲಿದೆ. ಈ ಅವಧಿಯಲ್ಲಿ ಬೆಳಗ್ಗೆ 6 ರಿಂದ 10 ರವರೆಗೆ ದಿನಸಿ, ತರಕಾರಿ ಹಾಲು ಅಂಗಡಿಗಳು ಬೆಳಗ್ಗೆ 6 ರಿಂದ 10 ರವರೆಗೆ ಮಾತ್ರ ತೆರೆದಿರುತ್ತದೆ. ಮೇ 4 ರವರೆಗೆ ನಿತ್ಯ ರಾತ್ರಿ 9 ರಿಂದ ಬೆಳಗ್ಗೆ 6 ರವರೆಗೆ ಕರ್ಪ್ಯೂ ಜಾರಿಯಲ್ಲಿರಲಿದೆ ಎಂದರು.