ಶಿವಮೊಗ್ಗ:ಜಿಲ್ಲೆಯಲ್ಲಿ ಗಣೇಶೋತ್ಸವವನ್ನು ಶಾಂತಿಯುತವಾಗಿ ಮತ್ತು ವ್ಯವಸ್ಥಿತವಾಗಿ ಆಚರಿಸಲು ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ. ಆರ್ ಸೆಲ್ವಮಣಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳ ಸಭೆಯಲ್ಲಿ ಈ ಕುರಿತು ಅವರು ಚರ್ಚೆ ನಡೆಸಿದರು.
ಏಕಗವಾಕ್ಷಿ ವ್ಯವಸ್ಥೆ:ಶಿವಮೊಗ್ಗ ನಗರದಲ್ಲಿ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ವಿವಿಧ ಇಲಾಖೆಗಳಿಂದ ಪರವಾನಿಗೆ ಪಡೆಯುವ ಪ್ರಕ್ರಿಯೆಯನ್ನು ಸುಗಮಗೊಳಿಸಲು ಏಕಗವಾಕ್ಷಿ ವ್ಯವಸ್ಥೆ ಕಲ್ಪಿಸಲಾಗುವುದು. ಮಹಾನಗರ ಪಾಲಿಕೆ, ಪೊಲೀಸ್, ಮೆಸ್ಕಾಂ ಮತ್ತಿತರ ಇಲಾಖೆಗಳ ಅಧಿಕಾರಿಗಳ ತಂಡಗಳನ್ನು ರಚಿಸಿ ಅಗತ್ಯ ಪರವಾನಿಗೆ ನೀಡಲು ಕ್ರಮ ಕೈಗೊಳ್ಳಬೇಕು. ಪರವಾನಿಗೆಗೆ ಅರ್ಜಿ ಸಲ್ಲಿಸಲು ನಿಗದಿತ ನಮೂನೆಯನ್ನು ಸಿದ್ಧಪಡಿಸಿ ಏಕಗವಾಕ್ಷಿ ಕೇಂದ್ರಗಳನ್ನು ಆರಂಭಿಸುವಂತೆ ಅವರು ಸೂಚನೆ ನೀಡಿದರು.
ವಿದ್ಯುತ್ ಅವಘಡ ಸಂಭವಿಸದಂತೆ ಎಚ್ಚರವಹಿಸಿ:ಗಣೇಶೋತ್ಸವ ಮೆರವಣಿಗೆ ಸಂದರ್ಭದಲ್ಲಿ ಬಂದೋಬಸ್ತ್ಗೆ ಸೂಕ್ತ ಬ್ಯಾರಿಕೇಡ್, ತಾತ್ಕಾಲಿಕ ಸಿಸಿಟಿವಿ ಮತ್ತು ವಿಡಿಯೋ ಕ್ಯಾಮರಾಗಳ ವ್ಯವಸ್ಥೆಯನ್ನು ಮಹಾನಗರ ಪಾಲಿಕೆ ವತಿಯಿಂದ ಕಲ್ಪಿಸಬೇಕು. ಮೆರವಣಿಗೆ ಸಾಗುವ ಹಾದಿಯಲ್ಲಿ ಯಾವುದೇ ವಿದ್ಯುತ್ ಅವಘಡಗಳು ಸಂಭವಿಸದಂತೆ ಮೆಸ್ಕಾಂ ಮೊದಲೇ ಪರಿಶೀಲನೆ ನಡೆಸಬೇಕು. ಮೆರವಣಿಗೆ ಹಾದಿಯಲ್ಲಿ ವಿದ್ಯುತ್ ವ್ಯತ್ಯಯವಾಗದಂತೆ ಎಚ್ಚರಿಕೆ ವಹಿಸಬೇಕು. ಲೈನ್‍ಮೆನ್‍ಗಳು ಸ್ಥಳದಲ್ಲೇ ಲಭ್ಯವಿರುವಂತೆ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದ್ದಾರೆ.
ಫ್ಲೆಕ್ಸ್, ಬಂಟಿಂಗ್ ನಿರ್ಬಂಧ: ಮಹಾನಗರ ಪಾಲಿಕೆಯಿಂದ ಅನುಮತಿ ಪಡೆಯದೇ ಫೆಕ್ಸ್ ಮತ್ತು ಬಂಟಿಂಗ್ ಅಳವಡಿಸಲು ಅವಕಾಶ ನೀಡಬಾರದು. ಅನಧಿಕೃತವಾಗಿ ಅಳವಡಿಸುವ ಫ್ಲೆಕ್ಸ್ಗಳ ಮೇಲೆ ನಿಗಾ ಇರಿಸಿ ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ತಂಡಗಳನ್ನು ರಚಿಸುವಂತೆ ಅವರು ತಿಳಿಸಿದರು.