ಶಿವಮೊಗ್ಗ:ಕೃಷಿ ಮೂಲಭೂತ ಸೌಕರ್ಯ ನಿಧಿ ಯೋಜನೆಯಡಿ ಸಾಲ ಸೌಲಭ್ಯ ಒದಗಿಸಲಾಗುತ್ತಿದ್ದು, ಇದರ ಗರಿಷ್ಠ ಪ್ರಯೋಜನ ಜಿಲ್ಲೆಯ ರೈತರು ಪಡೆದುಕೊಳ್ಳಲು ನೆರವು ನೀಡಬೇಕು ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ತಿಳಿಸಿದ್ದಾರೆ.
ಓದಿ: ಅಕ್ರಮ ಗಣಿಗಾರಿಕೆ ವಿರುದ್ಧ ಸೂಕ್ತ ತನಿಖೆ ನಡೆಯುತ್ತಿದೆ: ಸಚಿವ ಮುರುಗೇಶ್ ನಿರಾಣಿ
ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಯೋಜನೆ ಅನುಷ್ಠಾನ ಕುರಿತು ವಿವಿಧ ಇಲಾಖಾ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಜಿಲ್ಲೆಯ ಪ್ರಗತಿಪರ ಪ್ರಾಥಮಿಕ ಕೃಷಿ ಕ್ರೆಡಿಟ್ ಸಹಕಾರ ಸಂಘಗಳನ್ನು ಆಯ್ಕೆ ಮಾಡಿಕೊಂಡು ಯೋಜನೆಯ ಬಗ್ಗೆ ವ್ಯಾಪಕ ಮಾಹಿತಿ ಒದಗಿಸಬೇಕು. ಯೋಜನೆ ಬಗ್ಗೆ ಪ್ರಾಥಮಿಕ ಕೃಷಿ ಕ್ರೆಡಿಟ್ ಸಹಕಾರ ಸಂಘಗಳು, ಮಾರುಕಟ್ಟೆ ಸಂಘಗಳು, ಪ್ರಗತಿಪರ ರೈತರು, ರೈತ ಉತ್ಪಾದಕ ಸಂಘಗಳ ನಿರ್ದೇಶಕರನ್ನು ಒಳಗೊಂಡಂತೆ 50 ಜನರನ್ನು ಆಯ್ಕೆ ಮಾಡಿ ಎರಡು ತಂಡಗಳಲ್ಲಿ ತರಬೇತಿ ನೀಡುವಂತೆ ಸೂಚಿಸಿದ್ದಾರೆ.
ಯೋಜನೆ ಅಡಿಯಲ್ಲಿ ಕೊಯ್ಲೋತ್ತರ ಮೂಲಭೂತ ಸೌಕರ್ಯ ಮತ್ತು ಸಾಮೂಹಿಕ ಕೃಷಿ ಆಸ್ತಿಗಳನ್ನು ಸೃಷ್ಟಿಸಲು ಮಧ್ಯಮಾವಧಿ ಮತ್ತು ದೀರ್ಘಾವಧಿ ಸಾಲದ ಮೇಲಿನ ಬಡ್ಡಿಯ ಭಾಗಕ್ಕೆ ಸಹಾಯಧನ ಒದಗಿಸಲಾಗುವುದು. ಫಲಾನುಭವಿಗೆ ಹಣಕಾಸು ಸಂಸ್ಥೆಗಳಿಂದ ಪಡೆಯುವ ಸಾಲದ ಶೇ. 9ರ ಬಡ್ಡಿಯ ಭಾಗಕ್ಕೆ ಶೇ. 3ರ ಸಹಾಯಧನ ನೀಡಲಾಗುವುದು. ನೀಡಲಾಗುವ ಬಡ್ಡಿ ಸಹಾಯಧನದ ಗರಿಷ್ಠ ಮೊತ್ತ 2 ಕೋಟಿ ರೂ. ಆಗಿರುತ್ತದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಕಿರಣ್ ಕುಮಾರ್ ಮಾಹಿತಿ ನೀಡಿದರು.
ಸುಧಾರಿತ ಮಾರುಕಟ್ಟೆ ಸೌಕರ್ಯವನ್ನು ಸೃಷ್ಟಿಸುವುದು, ರೈತರ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸುವುದು ಮತ್ತು ಕೇಂದ್ರ ಮತ್ತು ಸ್ಥಳೀಯ ಆಡಳಿತ ವ್ಯವಸ್ಥೆಯ ಮೂಲಕ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಕೃಷಿ ಮೂಲಭೂತ ಸೌಕರ್ಯಕ್ಕೆ ಬಂಡವಾಳವನ್ನು ಆಕರ್ಷಿಸುವುದು ಯೋಜನೆಯ ಉದ್ದೇಶವಾಗಿದೆ.
ಸಾಲದ ಮರು ಪಾವತಿ ಅವಧಿಯನ್ನು 6ರಿಂದ 24 ತಿಂಗಳವರೆಗೆ ವಿಸ್ತರಿಸಬಹುದಾಗಿದೆ. ಸಾಲಕ್ಕೆ ಖಾತರಿ ವೆಚ್ಚ ಅಡಿಯಲ್ಲಿ ರೂ. 2 ಕೋಟಿವರೆಗೂ ಖಾತರಿಯನ್ನು ಕೇಂದ್ರ ಸರ್ಕಾರ ಒದಗಿಸುತ್ತದೆ. ಕೇಂದ್ರ ಸರ್ಕಾರದ ಯಾವುದೇ ಯೋಜನೆಯಡಿ 2020ರ ಜುಲೈ 8ರ ನಂತರ ಸಾಲ ಮಾಡಿ ಸಹಾಯಧನ ಪಡೆದಿರುವ ಯೋಜನೆಗಳಿಗೂ ಇದರಡಿ ಬಡ್ಡಿ ಸಹಾಯಧನ ಸೌಲಭ್ಯ ಪಡೆಯಬಹುದಾಗಿದೆ ಎಂದರು.
ಈ ಯೋಜನೆಯಡಿ ಪ್ರಾಥಮಿಕ ಕೃಷಿ ಕ್ರೆಡಿಟ್ ಸಹಕಾರ ಸಂಘಗಳು, ಮಾರುಕಟ್ಟೆ ಸಹಕಾರಿ ಸಂಘಗಳು, ಸ್ವಸಹಾಯ ಸಂಘಗಳು, ಜಂಟಿ ಭಾದ್ಯತಾ ಗುಂಪುಗಳು, ವಿವಿಧೋದ್ದೇಶ ಸಹಕಾರಿ ಸಂಘಗಳು, ಕೃಷಿ ಉದ್ಯಮಿಗಳು, ನವೋದ್ಯಮಿಗಳು, ಕೇಂದ್ರ, ರಾಜ್ಯ ಸರ್ಕಾರ, ಸ್ಥಳೀಯ ಆಡಳಿತ ಪ್ರಾಯೋಜಿತ ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಯೋಜನೆಗಳು, ರೈತರು, ಉತ್ಪಾದಕ ಸಂಸ್ಥೆಗಳು ಪ್ರಯೋಜನ ಪಡೆಯಬಹುದು. ಯೋಜನೆಯಡಿ ತಮ್ಮ ವ್ಯವಹಾರಗಳನ್ನು ಅಳವಡಿಸಿರುವ ಪ್ರಾಥಮಿಕ ಕೃಷಿ ಕ್ರೆಡಿಟ್ ಸಹಕಾರ ಸಂಘಗಳಿಗೆ ಪ್ರಾಧಾನ್ಯತೆ ನೀಡಲಾಗುವುದು ಎಂದು ಹೇಳಿದರು.
ಗೋದಾಮುಗಳು ಮತ್ತು ಸೈಲೋಗಳು, ಇ ಮಾರುಕಟ್ಟೆ ವೇದಿಕೆ ಸೇರಿದಂತೆ ಸರಬರಾಜು ಸರಪಳಿ ಸೇವೆಗಳು, ಪ್ಯಾಕ್ ಹೌಸ್ಗಳು, ಶೀತಲ ಗೃಹಗಳು, ಗೋಡಂಬಿ ಒಳಗೊಂಡಂತೆ ಪ್ರಾಥಮಿಕ ಸಂಸ್ಕರಣಾ ಕೇಂದ್ರಗಳು, ಹಣ್ಣು ಮಾಗಿಸುವ ಘಟಕಗಳು, ಬಾಡಿಗೆ ಆಧಾರಿತ ಸೇವಾ ಕೇಂದ್ರಗಳು ಸೇರಿದಂತೆ ವಿವಿಧ ಕೃಷಿ ಚಟುವಟಿಕೆಗಳಿಗೆ ಸೌಲಭ್ಯ ಪಡೆಯಬಹುದಾಗಿದೆ ಎಂದರು.