ಶಿವಮೊಗ್ಗ: ಬಳ್ಳಾರಿಯಲ್ಲಿ ಗಣಿಗಾರಿಕೆಯಿಂದ ಬೃಹತ್ ಗುಡ್ಡಗಳೇ ವರ್ಷ ಕಳೆಯುವುದರೊಳಗೆ ಕರಗಿ ಹೋಗಿದ್ದನ್ನು ನೀವು ಕೇಳಿರಬಹುದು, ನೋಡಿರಬಹುದು. ಅದೇ ರೀತಿ ಶಿವಮೊಗ್ಗದ ಶಾಲೆ, ಕಾಲೇಜು ವಿದ್ಯಾರ್ಥಿಗಳಿಗೆ ವಾರಾಂತ್ಯದ ಪಿಕ್‌ನಿಕ್ ಸ್ಪಾಟ್ ಆಗಿರುವ ರಾಗಿಗುಡ್ಡ ಇನ್ನು ಕೆಲವೇ ವರ್ಷಗಳಲ್ಲಿ ನೆಲಸಮವಾಗುವ ಆತಂಕ ಮೂಡಿದೆ. ಇಎಸ್ಐ ಆಸ್ಪತ್ರೆ ಹೆಸರಿನಲ್ಲಿ ಗುಡ್ಡವನ್ನು ಬಗೆದು ತಿನ್ನಲಾಗ್ತಿದೆ.
ರಾಗಿಗುಡ್ಡದಲ್ಲಿ ಪುರಾಣ ಪ್ರಸಿದ್ಧ ಬ್ರಹ್ಮ , ವಿಷ್ಣು ಮಹೇಶ್ವರ ದೇವಾಲಯವಿದ್ದರೂ, ಒಂದು ಕಾಲದಲ್ಲಿ ಇದು ಅಪರಾಧ ಕೃತ್ಯಗಳಿಗೆ ಹಾಟ್ ಸ್ಪಾಟ್ ಆಗಿತ್ತು. ಕಾಲಕ್ರಮೇಣ ಶಿವಮೊಗ್ಗದ ಹೆಮ್ಮೆಯ ಪ್ರತೀಕವಾಗಿ ಬದಲಾಯಿತು. ಪ್ರವಾಸೋದ್ಯಮ ಇಲಾಖೆ ಅಡಿ ಅಭಿವೃದ್ಧಿಪಡಿಸಲು ಯೋಜನೆ ಕೂಡ ರೂಪಿಸಲಾಗಿತ್ತು. ಆದರೆ, ಇದೀಗ ರಾಗಿಗುಡ್ಡದ ಪರಿಸರ, ಸರ್ಕಾರದ ಅಭಿವೃದ್ಧಿ ಯೋಜನೆಯ ಅವೈಜ್ಞಾನಿಕ ನೀತಿಯಿಂದಾಗಿ ತನ್ನ ನೈಜತೆಯನ್ನೇ ಕಳೆದು ಕೊಳ್ಳುತ್ತಿದೆ.
ರಾಗಿಗುಡ್ಡಕ್ಕೆ ಹಾನಿ ಮಾಡುತ್ತಿರುವುದನ್ನು ಖಂಡಿಸಿದ ಪರಿಸರವಾದಿಗಳು ಸಂಸದ ಬಿ.ವೈ. ರಾಘವೇಂದ್ರ ಅವರ ಪ್ರತಿಷ್ಠೆ ಹಾಗೂ ಕನಸಿನ ಕೂಸಾಗಿರುವ ಇಎಸ್ಐ ಆಸ್ಪತ್ರೆಯ ನಿರ್ಮಾಣಕ್ಕೆ ರಾಗಿಗುಡ್ಡದ ಬುಡದ ಮಣ್ಣನ್ನು ಅವ್ಯಾಹತವಾಗಿ ಬಗೆಯಲಾಗುತ್ತಿದೆ.
ಓದಿ : BDA ಕಾಂಪ್ಲೆಕ್ಸ್ ಮರು ನಿರ್ಮಾಣದ ಗುತ್ತಿಗೆ ಕರಾರು ಬದಲಾವಣೆ: ಕಳ್ಳಾಟಕ್ಕೆ ಬ್ರೇಕ್ ಎಂದ ವಿಶ್ವನಾಥ್
ರಾಜಸ್ಥಾನ ಮೂಲದ ರಿಷಬ್ ಕನ್ಸ್ಟ್ರಕ್ಸನ್ಸ್ ಕಂಪನಿ ಆಸ್ಪತ್ರೆ ನಿರ್ಮಾಣದ ಗುತ್ತಿಗೆ ಪಡೆದಿದೆ. ಕಂಪನಿಯವರು ಗುಡ್ಡದ ನೈಜತೆ ಉಳಿಸಿಕೊಂಡು ಆಸ್ಪತ್ರೆ ನಿರ್ಮಾಣಕ್ಕೆ ಯೋಜನೆ ರೂಪಿಸಬೇಕಿತ್ತು. ರಾಗಿಗುಡ್ಡದ ಸೂಕ್ಷತೆಗೆ ಧಕ್ಕೆಯಾಗದ ರೀತಿ ಕಾಮಗಾರಿ ನಡೆಸಬೇಕಿತ್ತು. ಆದರೆ, ಸುಂದರ ರಾಗಿಗುಡ್ಡದ ಬುಡಕ್ಕೆ ಕೊಡಲಿ ಪೆಟ್ಟು ನೀಡಿ, ಜೆಸಿಬಿ ಯಂತ್ರ ಬಳಸಿ ಗುಡ್ಡ ಬಗೆದು ಸಾವಿರಾರು ಲೋಡ್ ಮಣ್ಣನ್ನು ಸಾಗಿಸಲಾಗುತ್ತಿದೆ.
ಈ ಮಣ್ಣನ್ನು ಸ್ಮಾರ್ಟ್ ಸಿಟಿ ಸೇರಿದಂತೆ ಸರ್ಕಾರದ ಯೋಜನೆಗಳು ಮತ್ತು ಖಾಸಗಿ ಆಗಿಯೂ ಬಳಸಲಾಗುತ್ತಿದೆ. ಮಣ್ಣಿನ ವ್ಯವಹಾರದಲ್ಲಿ ವ್ಯಾಪಕ ಭ್ರಷ್ಟಚಾರ ನಡೆದಿದೆ ಎಂಬ ಆರೋಪ ಕೂಡ ಕೇಳಿ ಬಂದಿದೆ.
ರಾಗಿಗುಡ್ಡದ ಮೂಲ ಸ್ವರೂಪಕ್ಕೆ ಧಕ್ಕೆಯಾಗಿದ್ದರೂ ಕೂಡ, ಜಿಲ್ಲಾಡಳಿತ ಮೌನಕ್ಕೆ ಶರಣಾಗಿದೆ. ಶಿವಮೊಗ್ಗದ ಹೆಮ್ಮೆಯ ರಾಗಿಗುಡ್ಡ ಹಾಗೂ ಸುತ್ತಲ ಪರಿಸರ ಹಾಳಾಗುತ್ತಿರುವುದಕ್ಕೆ ಪರಿಸರವಾದಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮ್ಮ ಹೆಮ್ಮೆಯ ಪ್ರತೀಕವಾಗಿರುವ ರಾಗಿಗುಡ್ಡ ಉಳಿಸಿ ಎಂದು ಮನವಿ ಮಾಡಿದ್ದಾರೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡದೇ ಗುಡ್ಡದ ಎಕರೆಗಟ್ಟಲೆ ಪ್ರದೇಶದ ಮಣ್ಣು ತೆಗೆಯುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.