ಶಿವಮೊಗ್ಗ: ಲಾಕ್‌ಡೌನ್ ಸಮಯದಲ್ಲಿ ಸರ್ಕಾರದ ಆದೇಶ ಉಲ್ಲಂಘಿಸಿದ 656 ವ್ಯಕ್ತಿಗಳ ವಿರುದ್ಧ 257 ಪ್ರಕರಣ ದಾಖಲಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಕೆ ಎಂ ಶಾಂತರಾಜು ತಿಳಿಸಿದರು.
ಲಾಕ್‌ಡೌನ್ ನಿಯಮ ಉಲ್ಲಂಘಿಸಿದವರ ವಿರುದ್ಧ ದಾಖಲಾದ ದೂರುಗಳ ಮಾಹಿತಿ.. ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಲಾಕ್‌ಡೌನ್ ಸಂದರ್ಭದಲ್ಲಿ ಸರ್ಕಾರದ ಆದೇಶ ಉಲ್ಲಂಘಿಸಿದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಲಾಕ್‌ಡೌನ್ ಆದೇಶ ಉಲ್ಲಂಘಿಸಿದ 89 ಪ್ರಕರಣ, ಕ್ವಾರಂಟೈನ್ ಆದೇಶ ಉಲ್ಲಂಘಿಸಿದ 11, ಲಾಕ್‌ಡೌನ್ ಸಮಯದಲ್ಲಿ ಜೂಜಾಟವಾಡಿರುವ 93 ಪ್ರಕರಣ, ಅಕ್ರಮ ಮದ್ಯ ಮಾರಾಟದ 64 ಕೇಸ್ ದಾಖಲಿಸಲಾಗಿದೆ.
ಅಷ್ಟೇ ಅಲ್ಲ, ಲಾಕ್‌ಡೌನ್ ಉಲ್ಲಂಘನೆ ಮಾಡಿದ 10,992 ವಾಹನಗಳ ವಿರುದ್ಧ ಐಎಂವಿ ಕಾಯ್ದೆಯಡಿ ಕ್ರಮ ಕೈಗೊಳ್ಳಲಾಗಿದೆ. ಎನ್ಡಿಎಂಎ ಕಾಯ್ದೆಯಡಿ ಕ್ವಾರಂಟೈನ್ ಆದೇಶ ಉಲ್ಲಂಘಿಸಿದ 17 ಜನರ ವಿರುದ್ಧ ಕಲಂ 51 (ಬಿ) ಪ್ರಕರಣ ದಾಖಲಿಸಲಾಗಿದೆ. ಹಾಗೆಯೇ ನೈಟ್ ಕರ್ಪ್ಯೂ ಆದೇಶ ಉಲ್ಲಂಘಿಸಿದ 41 ಜನರ ವಿರುದ್ಧ ಕೂಡ ಎನ್ಡಿಎಂಎ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈವರೆಗಿನ ಕೋವಿಡ್ ನಿಯಮ ಉಲ್ಲಂಘನೆ ಕುರಿತ ಮಾಹಿತಿ ನೀಡಿದ ಅವರು, ಕಾನೂನು ಸುವ್ಯವಸ್ಥೆಗೆ ಭಂಗ ತರುವವರ ವಿರುದ್ಧ ಕಾನೂನಿನಡಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.