ಶಿವಮೊಗ್ಗವನ್ನು ಬರ ಪೀಡಿತ ಜಿಲ್ಲೆಯಾಗಿ ಘೋಷಿಸಲು ಸಂಸದ ಬಿ ವೈ ರಾಘವೇಂದ್ರ ಆಗ್ರಹ ಶಿವಮೊಗ್ಗ:''ಶಿವಮೊಗ್ಗ ಜಿಲ್ಲೆಯನ್ನು ಬರ ಪೀಡಿತ ಜಿಲ್ಲೆ ಎಂದು ಘೋಷಿಸಬೇಕು. ರೈತರಿಗೆ ಮಧ್ಯಂತರ ಬೆಳೆ ವಿಮೆ ಪರಿಹಾರ ಬಿಡುಗಡೆ ಮಾಡಬೇಕು'' ಸಂಸದ ಬಿ.ಬೈ.ರಾಘವೇಂದ್ರ ಆಗ್ರಹಿಸಿದ್ದಾರೆ.
ಶಿವಮೊಗ್ಗ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಶನಿವಾರ ನಡೆಸಿದ ಮಾಧ್ಯಮಗೋಷ್ಢಿ ಮಾತನಾಡಿದ ಅವರು, ''ಜಿಲ್ಲೆಯಲ್ಲಿ ಮಳೆಯ ಕೊರತೆ ಉಂಟಾಗಿದೆ. ಇದರಿಂದ ರೈತ ವರ್ಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಪೂರ್ವ ಮುಂಗಾರಿನಲ್ಲಿ ಶೇ 36 ರಷ್ಟು ಮಳೆ ಕೊರತೆ ಉಂಟಾಗಿದೆ. ಅದರಂತೆ ಮುಂಗಾರು ಸಹ ಶೇ 35 ರಷ್ಟು ಮಳೆ ಕೊರತೆ ಇದೆ. 378 ಮಿಲಿ ಮೀಟರ್ ವಾಡಿಕೆ ಮಳೆಯಾಗಬೇಕಿತ್ತು. ಆದರೆ, 69 ಮಿಲಿಮೀಟರ್ ಮಳೆಯಾಗಿದೆ. ಇದರಿಂದ ವಾಡಿಕೆಗಿಂತ 82 ರಷ್ಟು ಮಳೆ ಕೊರತೆ ಉಂಟಾಗಿದೆ.
ಒಟ್ಟು ಶೇ 40 ರಷ್ಟು ಮಳೆ ಕೊರತೆ ಆಗಿದೆ. ಇದರಿಂದ ರೈತರಿಗೆ ಬಿತ್ತನೆ, ನಾಟಿ, ಅಡಕೆ ಸೇರಿದಂತೆ ಎಲ್ಲ ಬೆಳೆಗಳಿಗೆ ಮಳೆ ಕೊರತೆ ಉಂಟಾಗಿದೆ. ಬರಗಾಲದ ಛಾಯೆ ಉಂಟಾಗುತ್ತಿದೆ. ಜಿಲ್ಲೆಯಲ್ಲಿ ಭತ್ತ ಸರಾಸರಿ 77 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಆಗಬೇಕಿದ್ದ ಬಿತ್ತನೆ ಈಗ ಕೇವಲ 52 ಸಾವಿರ ಹೆಕ್ಟೇರ್ ಮಾತ್ರ ನಾಟಿ ಆಗಿದೆ. ಮೆಕ್ಕೆಜೋಳವು 50 ಸಾವಿರ ಹೆಕ್ಟರ್ ಬಿತ್ತನೆ ಆಗಬೇಕಿತ್ತು. ಆದರೆ, ಕೇವಲ 42 ಸಾವಿರ ಹೆಕ್ಟೇರ್ ಬಿತ್ತನೆ ಆಗಿದೆ. ಇನ್ನು 8 ಹೆಕ್ಟೇರ್ ಬಿತ್ತನೆ ಆಗಬೇಕಿತ್ತು. ಬೆಳೆ ವಿಮೆ ಜಾರಿಗೆ ತಂದ ಮೇಲೆ ಭತ್ತದ ಬೆಳೆ ನಾಟಿ ಆಗಿದೆ ಇದಕ್ಕೆ ಬೆಳೆ ವಿಮಾ 7.250 ಹೆಕ್ಟೇರ್ ಮಾತ್ರ ನಷ್ಟು ಬೆಳೆ ವಿಮೆಯಾಗಿದೆ. ಸುಮಾರು 13 ಸಾವಿರ ರೈತ ವಿಮೆ ಮಾಡಿಸಿದ್ದಾರೆ. ಇನ್ನೂ 40 ಹೆಕ್ಟೇರ್ ನಷ್ಟು ಬೆಳೆ ವಿಮೆ ಮಾಡಿಸಿಲ್ಲ. ಇದರಿಂದ ಉಳಿದ ರೈತರ ಗತಿ ಏನು ಎಂದು ಯೋಚನೆ ಮಾಡುವಂತೆ ಆಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
''40 ಸಾವಿರ ಹೆಕ್ಟೇರ್ನಲ್ಲಿ 13.400 ಹೆಕ್ಟರ್ ಮಾತ್ರ ಜೋಳಕ್ಕೆ ವಿಮೆಯಾಗಿದೆ. ರಾಜ್ಯ ಸರ್ಕಾರ ಎನ್ಡಿಆರ್ಎಫ್ ಮಾರ್ಗ ಸೂಚಿ ಪ್ರಕಾರ, ನಮ್ಮ ಜಿಲ್ಲೆ ಬರಪೀಡಿತ ಎಂದು ಘೋಷಣೆ ಮಾಡಬೇಕು. ಆಗ ರೈತರಿಗೆ ಪರಿಹಾರ ನೀಡಲು ಸಹಕಾರಿ ಆಗುತ್ತದೆ. ಮಧ್ಯಂತರ ನಷ್ಟವನ್ನು ಗಂಭೀರವಾಗಿ ಪರಿಗಣಿಸಿ, ಜಿಲ್ಲಾ ಮಟ್ಟದ ಸಭೆ ನಡೆಸಬೇಕು. ಮಧ್ಯಂತರ ಬೆಳೆ ನಷ್ಟವನ್ನು ರೈತರಿಗೆ ನೀಡಬೇಕು. ಜಿಲ್ಲಾ ಉಸ್ತುವಾರಿ ಸಮಿತಿ ಸಭೆ ನಡೆಸಬೇಕು'' ಎಂದು ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ''ಇದರಿಂದ ರೈತರು ಮರು ಬಿತ್ತನೆ ಮಾಡಲು ಸಹಕಾರವಾಗುತ್ತದೆ. ಮಧ್ಯಂತರ ಬೆಳೆ ವಿಮೆ ನೀಡಬೇಕು. ಬರ ಪೀಡಿತ ಜಿಲ್ಲೆ ಎಂದು ಘೋಷಣೆ ಮಾಡಲು ಬಿಜೆಪಿ ಪರವಾಗಿ ಆಗ್ರಹ ಮಾಡುತ್ತೇನೆ'' ಎಂದರು.
ಅಡಕೆ ಆಮದು ವಿಚಾರದಲ್ಲಿ ಅಪಪ್ರಚಾರ:ಅಡಕೆ ಬೆಳೆಯುವಂತಹ ರೈತರ ಮನಸ್ಸು ಕೆಡಿಸುವ ಪಿತೂರಿ ನಡೆಸಲಾಗುತ್ತಿದೆ. ಇಲ್ಲಿ ರೈತರ ಜೀವನದ ಜೊತೆ ಚಲ್ಲಾಟವಾಗುತ್ತಿದೆ ಎಂದರು. ಜಿಲ್ಲೆಯಲ್ಲಿ 34.150 ಹೆಕ್ಟರ್ ನಲ್ಲಿ ಅಡಕೆಗೆ ಬೆಳೆ ವಿಮೆ ಆಗಿದೆ. ಅಡಕೆ ಬೆಲೆ ಒಳ್ಳೆಯ ದರ ಇದೆ. ಹಿಂದೆ ಬೆಲೆಯಲ್ಲಿ ಏರಿಳಿತವಾಗುತ್ತಿತ್ತು. ಈಗ ದರ ಸ್ಥಿರವಾಗಿದೆ. ಕೇಂದ್ರ ಸರ್ಕಾರ ಪ್ರಯತ್ನದಿಂದ ದರ ಚೆನ್ನಾಗಿ ಲಭ್ಯವಾಗುತ್ತಿದೆ. ಈಗ ಅಡಕೆ ಆಮದಿನಿಂದ ದರ ಕಡಿಮೆ ಆಗುತ್ತಿದೆ ಎಂದು ಅಪಪ್ರಚಾರ ಮಾಡಲಾಗುತ್ತಿದೆ. ಆಮದು ಅಡಕೆಗೆ ಒಂದು ದರ ನಿಗದಿ ಮಾಡುತ್ತಿದೆ. ಕನಿಷ್ಠ ಆಮದ ದರವು ಯುಪಿಎ ಸರ್ಕಾರ ಇದ್ದಾಗ 150 ರೂ. ದರ ನಿಗದಿ ಮಾಡಿತ್ತು. 26 ಸಾವಿರ ಟನ್ ಹಸಿ ಅಡಕೆ ಆಮದು ಆಗಿದೆ. ಇದು ನಮ್ಮ ದೇಶದ ಅಡಕೆ ಬೆಳೆಯ ಕೇವಲ ಶೇ.2ರಷ್ಟು ಮಾತ್ರ ಆಮದು ಆಗಿದೆ. 15.6300 ಲಕ್ಷ ಮೆಟ್ರಿಕ್ ಟನ್ ಉತ್ಪಾದನೆ ಆಗುತ್ತಿದೆ. 17 ಸಾವಿರ ಟನ್ ಹಸಿ ಅಡಕೆ ಆಮದು ಆಗುತ್ತಿದೆ. ಭೂತಾನ್ನಿಂದ ತರಲಾಗುತ್ತಿದೆ. ಭೂತಾನ್ನಲ್ಲಿ ಸಮುದ್ರ ಇಲ್ಲದ ಕಾರಣ ಅವರು ಬಾಂಗ್ಲಾ ದೇಶಕ್ಕೆ ಬಂದು ಭಾರತಕ್ಕೆ ತರಬೇಕಿದೆ. ಇದು ಹಸಿ ಅಡಕೆ ಆದ ಕಾರಣಕ್ಕೆ ಬೇಗ ಕೊಳೆತು ಹೋಗುತ್ತಿದೆ. ಅಡಕೆ ದರ ಕುಸಿಯುತ್ತದೆ ಎಂಬ ಅಪಪ್ರಚಾರ ನಡೆಸಲಾಗುತ್ತಿದೆ'' ಎಂದರು.
ಮಾಜಿ ಗೃಹ ಸಚಿವ ಆಗರ ಜ್ಞಾನೇಂದ್ರ ಮಾತನಾಡಿ, ''ರಾಜ್ಯ ಸರ್ಕಾರವು ರೈತರಿಗೆ ಸ್ಪಂದಿಸಬೇಕಿದೆ. ರಾಜ್ಯ ಸರ್ಕಾರ ಅನಿಮಿಯತ ಲೋಡ್ ಶೆಡ್ಡಿಂಗ್ ಮಾಡ್ತಾ ಇದೆ. ಇದರಿಂದ ರೈತರಿಗೆ ಸಮಸ್ಯೆ ಎದುರಾಗಿದೆ. ಕೆಪಿಸಿನಿಂದ ಕಲ್ಲಿದ್ದಲು ಪೂರೈಕೆದಾರರಿಗೆ ಹಣ ನೀಡುತ್ತಿಲ್ಲ. ಆದರೆ, ಸರ್ಕಾರ ಏಕಾಏಕಿ ವಿದ್ಯುತ್ ದರ ಏರಿಕೆ ಮಾಡಿದೆ. ಇದರಿಂದ ಎಲ್ಲಾ ವಸ್ತುಗಳ ಮೇಲೆ ದರ ಏರಿಕೆ ಮಾಡಿದೆ. ಕೇಂದ್ರದಿಂದ ವಿದ್ಯುತ್ ನೀಡಿದರೆ, ರಾಜ್ಯ ಸರ್ಕಾರದ ಬಳಿ ವಿದ್ಯುತ್ ಗ್ರಿಡ್ ಗಳಿಲ್ಲ ಎಂದ ಅವರು, ''ಅಡಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶವಿಲ್ಲ ಎಂದು ಹಿಂದೆ ಯುಪಿಎ ಸರ್ಕಾರ ಹೇಳಿತ್ತು. ಅಡಕೆಯಲ್ಲಿ ಕ್ಯಾನ್ಸರ್ ಕಾರಕ ಅಂಶಗಳಿಲ್ಲ ಎಂದು ರಾಮಯ್ಯ ಇನ್ಸ್ಟೂಟ್ಯೂಟ್ ವರದಿ ನೀಡಿದೆ'' ಎಂದು ಅವರು ಹೇಳಿದರು. ಎಲೆಚುಕ್ಕಿ ರೋಗಕ್ಕೆ ನಮ್ಮ ಸರ್ಕಾರ ಇಟ್ಟಿದ್ದ ಹಣವನ್ನು ಕಾಂಗ್ರೆಸ್ ಸರ್ಕಾರ ವಾಪಸ್ ಪಡೆದಿದೆ. ಈ ಕುರಿತು ಸಿಎಂ ಅವರನ್ನು ಭೇಟಿ ಮಾಡಿ ಹಣ ವಾಪಸ್ ನೀಡಬೇಕೆಂದು ಒತ್ತಾಯಿಸಿದ್ದೇವೆ ಎಂದರು.
ಯಾವ ಬಿಜೆಪಿಯ ಶಾಸಕರು ಕಾಂಗ್ರೆಸ್ಗೆ ಹೋಗಲ್ಲ- ಆರಗ:''ಯಾವ ಬಿಜೆಪಿಯ ಶಾಸಕರು ಕಾಂಗ್ರೆಸ್ಗೆ ಹೋಗುವುದಿಲ್ಲ. ಕಾಂಗ್ರೆಸ್ನವರು ತಮ್ಮ ಹಗರಣವನ್ನು ಮುಚ್ಚಿ ಹಾಕಲು ಶಾಸಕರ ಪಕ್ಷಾಂತರದ ಬಗ್ಗೆ ಸುದ್ದಿ ಮಾಡಿಸುತ್ತಿದ್ದಾರೆ. ಸರ್ಕಾರ ಕೃಷಿ ಸೇರಿದಂತೆ ಎಲ್ಲ ಇಲಾಖೆಯ ಅನುದಾನವನ್ನು ಗ್ಯಾರಂಟಿಗೆ ನೀಡಿದೆ. ವಿವಿಧ ಯೋಜನೆಗಳ ಹಣವನ್ನು ಸಹ ಗ್ಯಾರಂಟಿಗೆ ಬಳಸಿಕೊಳ್ಳುತ್ತಿದೆ'' ಎಂದು ಆರಗ ಜ್ಞಾನೇಂದ್ರ ಆರೋಪಿಸಿದರು. ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಶಾಸಕ ರುದ್ರೇಗೌಡ, ಗಿರೀಶ್ ಪಟೇಲ್ ಸೇರಿದಂತೆ ಇತರರು ಇದ್ದರು.
ಇದನ್ನೂ ಓದಿ:ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸಮುದ್ರದ ಮೇಲೆ ಕಲ್ಲೆಸೆಯುವ ಕೆಲಸ ಮಾಡ್ತಿದಾರೆ : ಸಂಸದ ಡಿವಿ ಸದಾನಂದಗೌಡ