ಕರ್ನಾಟಕ

karnataka

ETV Bharat / state

ವಿದ್ಯಾಭ್ಯಾಸದೊಂದಿಗೆ ಕ್ರೀಡಾ ಚಟವಟಿಕೆಗಳಿಗೆ ಪ್ರಾಮುಖ್ಯತೆ ನೀಡಿ : ಮಧು ಬಂಗಾರಪ್ಪ - ಶಿವಮೊಗ್ಗದ ನೆಹರೂ ಒಳಕ್ರೀಡಾಂಗಣ

ಶಿವಮೊಗ್ಗದ ನೆಹರೂ ಒಳ ಕ್ರೀಡಾಂಗಣದಲ್ಲಿ ಇಂದಿನಿಂದ ಶಿವಮೊಗ್ಗ ಓಪನ್ 4ನೇ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿ 2023 ನಡೆಯಲಿದೆ.

Madhu Bangarappa
ಮಧು ಬಂಗಾರಪ್ಪ

By

Published : Aug 5, 2023, 4:38 PM IST

ಶಿವಮೊಗ್ಗ: ಮಕ್ಕಳು ವಿದ್ಯಾಭ್ಯಾಸದೊಂದಿಗೆ ಕ್ರೀಡೆ ಮತ್ತು ಇತರೆ ಚಟುವಟಿಕೆಗಳಿಗೂ ಪ್ರಾಮುಖ್ಯತೆ ನೀಡಬೇಕು. ವಿದ್ಯಾರ್ಥಿಗಳು ಎಲ್ಲ ರೀತಿಯಲ್ಲಿ ಬೆಳೆಯಬೇಕು. ಅದಕ್ಕಾಗಿ ವಿದ್ಯೆಯೊಂದಿಗೆ ಚಟುವಟಿಕೆಗಳು ಅಗತ್ಯವಾಗಿದೆ. ಜಿಲ್ಲಾ ಮಟ್ಟದಲ್ಲಿ ನಡೆಯುವ ಕರಾಟೆ ಹಾಗೂ ಎಲ್ಲ ರೀತಿಯ ಕ್ರೀಡಾ ಚಟುವಟಿಕೆಗಳಿಗೆ ಸಹಕಾರ ನೀಡಲಾಗುವುದು ಎಂದು ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್ ಮಧು ಬಂಗಾರಪ್ಪ ತಿಳಿಸಿದರು.

ನಗರದ ನೆಹರೂ ಒಳಕ್ರೀಡಾಂಗಣದಲ್ಲಿ ಇಂದಿನಿಂದ ಏರ್ಪಡಿಸಲಾಗಿರುವ ಶಿವಮೊಗ್ಗ ಓಪನ್ 4ನೇ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿ 2023 ಅನ್ನು ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರದ ವತಿಯಿಂದ ದೊರಕುವ ಎಲ್ಲ ಸೌಲಭ್ಯಗಳನ್ನು ನೀಡುವುದಾಗಿ ಭರವಸೆ ನೀಡಿದರು.

ಪಾಲಿಕೆ ಸದಸ್ಯರಾದ ಹೆಚ್.ಸಿ ಯೋಗೇಶ್ ಮಾತನಾಡಿ, ಜಿಲ್ಲೆಯಲ್ಲಿ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿ ನಡೆಯುತ್ತಿರುವುದು ಹೆಮ್ಮೆಯ ವಿಚಾರ. ಅಂತಾರಾಷ್ಟ್ರೀಯ ಮಟ್ಟದ ಈ ಪಂದ್ಯಾವಳಿಯಲ್ಲಿ 1200 ಸ್ಪರ್ಧಿಗಳು, 78 ತೀರ್ಪುಗಾರರು, ಕೋಚ್‍ಗಳು ಬಂದಿದ್ದು ಎಲ್ಲರಿಗೂ ಅಭಿನಂದನೆಗಳನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಉಡುಪಿ ತಂಡದ ಕರಾಟೆ ಪಟುಗಳಾದ ಆಯುಷ್ ಮತ್ತು ಛಾಯಾರನ್ನು ಸನ್ಮಾನಿಸಲಾಯಿತು. ವರ್ಲ್ಡ್​ ಗ್ರ್ಯಾಂಡ್​ ಮಾಸ್ಟರ್​​​ಗಳಾದ ರಾಜ್ಯದ ಅಫ್ತಾಬ್, ಶ್ರೀಲಂಕಾದ ಹಂಶಿ ಮೆಡೊನ್ಝಾ, ನೇಪಾಳದ ಅರುಣ್ ಕರ್ಕಿ ಮತ್ತು ಅಮೆರಿಕದ ಪೆರಿ ಎಫ್.ಮೌಲಾ ಅವರನ್ನು ಸನ್ಮಾನಿಸಲಾಯಿತು.

ಗಮನ ಸೆಳೆದ ಚಿಣ್ಣರ ನೃತ್ಯ: ಇನ್ನೂ ಉದ್ಘಾಟನಾ ಕಾರ್ಯಕ್ರಮದಲ್ಲಿ ಸ್ಟೈಲ್ ಡ್ಯಾನ್ಸ್ ಗ್ರೂಪ್ ತಂಡದ ಚಿಣ್ಣರು ಹಾಗೂ ಪೋಷಕರ ನೃತ್ಯ ನೋಡುಗರ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಮಾಜಿ ಸೂಡಾ ಅಧ್ಯಕ್ಷ ರಮೇಶ್, ಗೋಣಿಮಠದ ಸಿದ್ದಲಿಂಗ ಮಹಾಸ್ವಾಮಿ, ಪಾಲಿಕೆ ಮೇಯರ್ ಶಿವಕುಮಾರ್, ಪಾಲಿಕೆ ವಿರೋಧಪಕ್ಷದ ನಾಯಕಿ ರೇಖಾ ರಂಗನಾಥ್, ಪಾಲಿಕೆ ಸದಸ್ಯರು, ವರ್ಲ್ಡ್​ ಗ್ರ್ಯಾಂಡ್ ಮಾಸ್ಟರ್​ಗಳು, ರಾಜ್ಯ ಕರಾಟೆ ಸಂಘದ ಕಾರ್ಯದರ್ಶಿ ಶಿವಮೊಗ್ಗ ವಿನೋದ್ ಮತ್ತು ತಂಡದವರು ಈ ವೇಳೆ ಹಾಜರಿದ್ದರು.

ಅನುದಾನಿತ ಶಾಲೆಗಳ ಫಲಿತಾಂಶ ಇಳಿಕೆ ಗಂಭೀರವಾಗಿ ಪರಿಗಣನೆ: ಇತ್ತೀಚೆಗೆ ವಿಧಾನ ಪರಿಷತ್​ನಲ್ಲಿ ಬಿಜೆಪಿ ಸದಸ್ಯ ಡಾ. ವೈ.ಎ.ನಾರಾಯಣ ಸ್ವಾಮಿ ನಿಯಮ 72ರ ಅಡಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅನುದಾನಿತ ಶಾಲೆಗಳಲ್ಲಿ ಫಲಿತಾಂಶ ಗಣನೀಯವಾಗಿ ಇಳಿಯುತ್ತಿರುವುದು ದೊಡ್ಡ ಸಮಸ್ಯೆ. ಇದರ ಸುಧಾರಣೆಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದರು.

ಅಲ್ಲದೇ ರಾಜ್ಯದ ಅನುದಾನಿತ ಪ್ರೌಢಶಾಲೆಗಳಲ್ಲಿ ಖಾಲಿ ಇರುವ ಬೋಧಕ ಹುದ್ದೆಯನ್ನು ಕಾಲಕಾಲಕ್ಕೆ ಭರ್ತಿ ಮಾಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಫಲಿತಾಂಶ ಹೆಚ್ಚಳಕ್ಕೆ 2020ರ ನಂತರದ ಖಾಲಿ ಶಿಕ್ಷಕರ ಹುದ್ದೆ ಭರ್ತಿಗೆ ಕ್ರಮ ಕೈಗೊಳ್ಳುತ್ತೇನೆ.‌ ಕೆಲವರು ಹೋರಾಟಕ್ಕೆ‌ ಇಳಿದಿದ್ದಾರೆ, ಅವರನ್ನೂ ಮಾತನಾಡಿಸುತ್ತೇನೆ. ಮಕ್ಕಳಿಗೆ ಉತ್ತಮ ಶಿಕ್ಷಣ, ಆಹಾರ ದೊರಕಿಸಲು ಕ್ರಮ ಕೈಗೊಳ್ಳುತ್ತೇನೆ. ಸಚಿವನಾಗಿ ಹೆಚ್ಚು ಅನುಭವ ಇಲ್ಲದಿದ್ದರೂ, ಶಾಲೆ ನಡೆಸಿದ ಅನುಭವ ಇದೆ. ಇದರಿಂದ ಸಕಾಲಕ್ಕೆ ಯಾವ ಕ್ರಮ ಕೈಗೊಳ್ಳಬೇಕೋ ಅದನ್ನು ಕೈಗೊಳ್ಳುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ:ಅನುದಾನಿತ ಶಾಲೆಗಳ ಫಲಿತಾಂಶ ಇಳಿಕೆ ಗಂಭೀರವಾಗಿ ಪರಿಗಣನೆ: ಶಿಕ್ಷಣ ಸಚಿವ ಮಧು ಬಂಗಾರಪ್ಪ

ABOUT THE AUTHOR

...view details