ಶಿವಮೊಗ್ಗ: ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಕ್ಷರಿ ಅವರ ವರ್ಗಾವಣೆಯನ್ನು ಶಿವಮೊಗ್ಗ ಜಿಲ್ಲಾ ನೊಳಂಬ ಸಮಾಜ ಖಂಡಿಸಿದೆ. ನೊಳಂಬ ಸಮಾಜದ ಜಿಲ್ಲಾಧ್ಯಕ್ಣರಾದ ಡಿ.ಬಿ. ಶಂಕರಪ್ಪ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ದ ಕಿಡಿಕಾರಿದ್ದಾರೆ. ರಾಜ್ಯದಲ್ಲಿ ಸರ್ಕಾರಿ ನೌಕರರ ಮನೆ ಮಾತಾಗಿದ್ದ ಹಾಗೂ ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾಗಿದ್ದ ಸಿ. ಎಸ್. ಷಡಕ್ಷರಿ ಅವರನ್ನು ಜಿಲ್ಲೆಯಿಂದ ವರ್ಗ ಮಾಡಿರುವುದರಲ್ಲಿ ಕುತಂತ್ರ ಅಡಗಿದೆ. ಇದನ್ನು ನಮ್ಮ ಸಮಾಜ ಪ್ರಬಲವಾಗಿ ಖಂಡಿಸುತ್ತದೆ ಎಂದು ಹೇಳಿದ್ದಾರೆ.
ಯಾರೋ ಒಬ್ಬ ವ್ಯಕ್ತಿ ಪೂರ್ವಾಗ್ರಹ ಪೀಡಿತರಾಗಿ ದೂರನ್ನು ನೀಡಿದ್ದನ್ನು ಆಧಾರವಾಗಿಟ್ಟುಕೊಂಡು, ವರ್ಗಾವಣೆ ಮಾಡುವುದೆಂದರೇನು ? ಹಾಗಿದ್ದಲ್ಲಿ ಜಿಲ್ಲೆಯಲ್ಲಿ ಅಂತಹ ದೂರಿರುವ ಎಷ್ಟು ಜನರನ್ನು ವರ್ಗಮಾಡಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.
ಸಿ ಎಸ್ ಷಡಕ್ಷರಿಯವರ ವರ್ಗಾವಣೆಯಿಂದ ರಾಜ್ಯದ ನೊಳಂಬ ವೀರಶೈವ ಲಿಂಗಾಯತ ಸಮಾಜ ತುಂಬಾ ಆಘಾತಗೊಂಡಿದೆ. ಈ ಕೂಡಲೇ ಕರ್ನಾಟಕ ಸರ್ಕಾರ ಅವರ ವರ್ಗಾವಣೆ ರದ್ದು ಪಡಿಸಬೇಕು. ಒಬ್ಬ ಸರ್ಕಾರಿ ನೌಕರ ಸಂಘದ ರಾಜ್ಯಾಧ್ಯಕ್ಷರಾಗಿ ಕಾನೂನು ಬದ್ಧವಾಗಿ ರಾಯಲ್ಟಿ ಕಟ್ಟಿ ಮಣ್ಣು ಹೇರಲು ಅನುಮತಿ ಪಡೆದಿರುವ ಪ್ರಕ್ರಿಯೆ ನಡೆದಿರುತ್ತದೆ. ಅಧ್ಯಕ್ಷರು ಹೋಗಿ ಟೇಪು ಹಿಡಿದು ಇಷ್ಟೇ ಮಣ್ಣು ಹೇರಿ ಎಂದು ಕೂರಲು ಸಾಧ್ಯವೇ ? ಟೇಪು ಹಿಡಿದು ಕೂರುವುದು, ಅರೆಮಣ್ಣು ಕಾಯುವ ರಕ್ಷಕ ಅಧಿಕಾರಿಯದ್ದು ಎಂದು ಟೀಕಿಸಿದ್ದಾರೆ.