ಶಿವಮೊಗ್ಗ:ಬೆಳಗಾವಿಯಲ್ಲಿ ನಡೆದಿದ್ದ ಮಹಿಳಾ ವಿವಸ್ತ್ರ ಘಟನೆ ಖಂಡಿಸಿ ಜಿಲ್ಲಾ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಶಿವಪ್ಪ ನಾಯಕ ವೃತ್ತದಲ್ಲಿ ಮಾನವ ಸರಪಳಿ ರಚನೆ ಮಾಡಿದ ಬಿಜೆಪಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಬೆಳಗಾವಿ ಮಹಿಳೆಯನ್ನು ವಿವಸ್ತ್ರಗೊಳಿಸಿರುವ ಘಟನೆ ರಾಜ್ಯವೇ ತಲೆ ತಗ್ಗಿಸುವಂತದ್ದು, ರಾಜ್ಯದಲ್ಲಿ ಇಂತಹ ಘಟನೆ ನಡೆದಿರುವುದು ದುರದುಷ್ಟಕರ. ಆದರೆ, ಈ ಘಟನೆಯನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸದೇ ನಿರ್ಲಕ್ಷ್ಯ ವಹಿಸಿದೆ. ಹೀಗಾಗಿ ನಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಸತ್ಯ ಶೋಧನ ಸಮಿತಿ ರಚನೆ ಮಾಡಿದ್ದಾರೆ. ಈ ತಂಡವು ಇಂದು ಬೆಳಗಾವಿಗೆ ಭೇಟಿ ನೀಡಿದೆ. ಆದರೆ, ರಾಜ್ಯ ಸರ್ಕಾರ ಅವಮಾನಕ್ಕೊಳಗಾದ ಮಹಿಳೆಗೆ ಸಾಂತ್ವನ ಸಹ ಹೇಳಿಲ್ಲ ಎಂದು ಕಾರ್ಯಕರ್ತರು ಆರೋಪಿಸಿದರು.
ಕಾಂಗ್ರೆಸ್ಗೆ ಮಹಿಳೆಯರ ಓಟ್ ಬೇಕು ರಕ್ಷಣೆ ಬೇಡ: ಈಶ್ವರಪ್ಪ ಆರೋಪ-ಈ ವೇಳೆ ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಕಾಂಗ್ರೆಸ್ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು. ಮೊನ್ನೆ ಬೆಳಗಾವಿಯಲ್ಲಿ ನಡೆದ ಘಟನೆಯನ್ನು ಖಂಡಿಸಿ ಏನೂ ಭಾಷೆ ಬಳಸಬೇಕು ಅಂತ ಗೊತ್ತಾಗುತ್ತಿಲ್ಲ. ಹಿಂದೂ ಸಮಾಜದಲ್ಲಿ ಭಾರತೀಯ ಸಂಸ್ಕೃತಿ ಇದೆಯೋ ಇಲ್ವೋ, ಆದರೆ ಈ ಘಟನೆ ನಡೆದ ಬಗ್ಗೆ ಮಾಹಿತಿ ಕೇಳಿಯಾದರೂ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಅಲ್ಲಿಗೆ ಹೋಗಬೇಕಿತ್ತು. ಲಕ್ಷ್ಮಿ ಹೆಬ್ಬಾಳ್ಕರ್ ಈ ಘಟನೆ ಕುರಿತು ಮಾತಾಡಬೇಕಿತ್ತು. ಆಗ ಅವರಿಗೆ ಅಕ್ಕ ತಂಗಿಯರು ಇದ್ದಾರೆ ಅನ್ನಬಹುದಿತ್ತು. ಇವರಿಗ್ಯಾರಿಗೂ ಹೆಣ್ಣು ಮಕ್ಕಳ ಬಗ್ಗೆ ಗೌರವ ಇಲ್ಲದಿರುವುದು ಸ್ಪಷ್ಟ ಆಗುತ್ತದೆ ಎಂದು ಆರೋಪಿಸಿದರು.