ಶಿವಮೊಗ್ಗ :ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿಯ ನೂತನ ಅಧ್ಯಕ್ಷೆ ಪವಿತ್ರ ರಾಮಯ್ಯ ಅವರ ಮನವಿಯಂತೆ ರೈತರೇ ತಮ್ಮ ಗ್ರಾಮದ ಕಾಲುವೆಗಳನ್ನು ಸ್ವಚ್ಛಗೊಳಿಸಿ, ಹೂಳೆತ್ತುತ್ತಿದ್ದಾರೆ.
ಪವಿತ್ರ ರಾಮಯ್ಯ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ದಿಯ ನೂತನ ಅಧ್ಯಕ್ಷೆಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಶಿವಮೊಗ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಕೊರೊನಾ ಕಾರಣದಿಂದ ಸರ್ಕಾರದ ಬಳಿ ಹಣದ ಕೊರತೆ ಇದ್ದು, ಕಾಡಾಕ್ಕೆ ಬರಬೇಕಾದ ಅನುದಾನ ನೀಡದ ಸ್ಥಿತಿಯಲ್ಲಿದೆ.
ಆದ್ದರಿಂದ ರೈತರು ತಾವೇ ತಮ್ಮ ಗ್ರಾಮದ ಕಾಲುವೆಗಳನ್ನ ಹೂಳೆತ್ತುವ ಮೂಲಕ ಸರಾಗವಾಗಿ ನೀರು ಹರಿಯುವಂತೆ ಮಾಡಬೇಕು ಹಾಗೂ ಕಾಲುವೆಯ ಹೂಳನ್ನು ತಮ್ಮ ಗದ್ದೆ, ತೋಟಗಳಿಗೆ ಹಾಕಿಕೊಳ್ಳಬೇಕು. ಇದರಿಂದ ಭೂಮಿಯ ಫಲವತ್ತತೆ ಹೆಚ್ಚಾಗುತ್ತದೆ ಎಂದು ಮನವಿ ಮಾಡಿಕೊಂಡಿದ್ದರು.
ಕಾಡಾ ಅಧ್ಯಕ್ಷೆಯ ಮನವಿಯಂತೆ ಕಾಲುವೆಗಳನ್ನ ಹೂಳೆತ್ತಲು ಪ್ರಾರಂಭಿಸಿದ ರೈತರು.. ಓದಿ :ಸರ್ಕಾರದ ಬೊಕ್ಕಸ ತುಂಬ ಬೇಕಿದ್ದ ಪ್ರಮುಖ ರಾಜಸ್ವಕ್ಕೆ ಕೊರೊನಾ ಏಟು : ಗ್ರಾಪಂಗಳಿಂದ ₹1624 ಕೋಟಿ ತೆರಿಗೆ ಬಾಕಿ!
ಹೀಗಾಗಿ, ಶಿವಮೊಗ್ಗ ಜಿಲ್ಲೆಯ ಬಿದರೆ, ದುಮ್ಮಳ್ಳಿ, ಹಸೂಡಿ ಭಾಗದ ರೈತರು ತಾವೇ ಕಾಲುವೆ ಹೂಳೆತ್ತಲು ಪ್ರಾರಂಭಿಸಿದ್ದಾರೆ. ದಾವಣಗೆರೆ ಜಿಲ್ಲೆಯ ಬಾತಿ ಭಾಗದ ರೈತರು ಕೂಡ ತಮ್ಮ ಸ್ವಂತ ಹಣದಲ್ಲಿ ಜೆಸಿಬಿ ಬಳಸಿ ಕಾಲುವೆಯ ಹೂಳೆತ್ತುತ್ತಿದ್ದಾರೆ. ಈ ಮೂಲಕ ರೈತರು ಹೊರಗಿನಿಂದ ಮಣ್ಣು ತಂದು ಜಮೀನಿಗೆ ಹಾಕುವುದು ತಪ್ಪುತ್ತದೆ.
ಕಾಡಾ ಅಧ್ಯಕ್ಷರ ಒಂದು ಮಾತಿಗೆ ಬೆಲೆ ಕೊಟ್ಟು ರೈತರು ತಾವೇ ಹೂಳೆತ್ತುವ ಮೂಲಕ ಎಲ್ಲದಕ್ಕೂ ಸರ್ಕಾರವನ್ನು ಕಾಯದೆ ತಮ್ಮ ಕಾಲುವೆಯನ್ನು ತಾವೇ ಸ್ವಚ್ಛಗೊಳಿಸಿಕೊಳ್ಳುತ್ತಿರುವುದು ನಿಜಕ್ಕೂ ಸ್ವಾಗತರ್ಹ. ಇದೇ ರೀತಿ ರೈತರು ತಮ್ಮ ಕೈಲಾದ ಕಾರ್ಯವನ್ನು ಮಾಡಿ ಕೊಂಡ್ರೆ, ಸರ್ಕಾರದ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ ಎಂದು ಪವಿತ್ರ ರಾಮಯ್ಯ ಹೇಳಿದ್ದಾರೆ.