ಶಿಕಾರಿಪುರ ಪಟ್ಟಣ ಶಾಂತಿಯುತವಾಗಿದೆ: ಡಿಸಿ ಸೆಲ್ವಮಣಿ ಶಿವಮೊಗ್ಗ:ಒಳ ಮೀಸಲಾತಿಯಲ್ಲಿ ಅನ್ಯಾಯವಾಗಿದೆ ಎಂದು ಆರೋಪಿಸಿ ಬಂಜಾರ ಸಮುದಾಯದವರು ಪ್ರತಿಭಟಿಸುತ್ತಿದ್ದ ವೇಳೆಯಡಿಯೂರಪ್ಪ ಅವರ ನಿವಾಸದ ಮೇಲೆ ಕಲ್ಲು ತೂರಾಟ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಪ್ರತಿಕ್ರಿಯಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಶಿಕಾರಿಪುರದಲ್ಲಿ ಮಾತನಾಡಿದ ಅವರು, ಶಿಕಾರಿಪುರ ಪಟ್ಟಣದಲ್ಲಿ ಇಂದು ಮನವಿ ಸಲ್ಲಿಸಲು 1,500 ಜನ ಸೇರಿದ್ದರು. ಈ ವೇಳೆ ದಾರಿಯಲ್ಲಿ ಹೋಗುವಾಗ ಪೊಲೀಸರು ತಡೆದಿದ್ದಾರೆ. ಈ ನಡುವೆ ಪೊಲೀಸರು ಹಾಗೂ ಪ್ರತಿಭಟನಗಾರರ ನಡುವೆ ಮಾತಿನ ಚಕಮಕಿ ನಡೆದಿದ್ದು, ಈ ವೇಳೆ ಕಲ್ಲು ತೂರಾಟ ನಡೆದಿದೆ. ನಂತರ ಮನೆಗೂ ನುಗ್ಗಿದ್ದಾರೆ. ಇದಾದ ತಕ್ಷಣ ನಮ್ಮ ಪೊಲೀಸರು ಸಹ ತಡೆಯಲು ಯತ್ನಿಸಿದ್ದಾರೆ. ಶಿಕಾರಿಪುರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಸದ್ಯ ಪಟ್ಟಣ ಶಾಂತಿಯುತವಾಗಿದೆ. ತಹಶೀಲ್ದಾರ್, ಎಸಿ ಜೊತೆ ಪಟ್ಟಣವನ್ನು ಸುತ್ತು ಹಾಕಿದ್ದೇನೆ ಎಂದರು.
ಜನರಿಗೆ ಸಮಸ್ಯೆ ಬಂದಾಗ ಅವರು ನಮ್ಮ ಜೊತೆ ಚರ್ಚಿಸಿದಾಗ ಸಮಸ್ಯೆಗೆ ಪರಿಹಾರ ದೊರಕುತ್ತದೆ. ಆದರೆ ಈ ರೀತಿ ಕಾನೂನನ್ನು ಕೈಗೆತ್ತಿಕೊಳ್ಳುವುದು ಬೇಡ, ಜಿಲ್ಲೆಯ ನಾಗರಿಕರು ಶಾಂತಿಯುತವಾಗಿ ವರ್ತನೆ ಮಾಡಬೇಕೆಂದು ವಿನಂತಿಸಿಕೊಂಡರು. ಯಡಿಯೂರಪ್ಪನವರ ಮನೆಗೆ ನುಗ್ಗಿದವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಶಿವಮೊಗ್ಗ ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ತಿಳಿಸಿದರು.
ಇದನ್ನೂ ಓದಿ: ಒಳ ಮೀಸಲಾತಿ ವಿಚಾರ.. ಪ್ರತಿಭಟನೆ ವೇಳೆ ಯಡಿಯೂರಪ್ಪ ಮನೆ ಮೇಲೆ ಕಲ್ಲು ತೂರಾಟ
ಶಿಕಾರಿಪುರದಲ್ಲಿ ನಡೆದ ಘಟನೆ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಪಿ ಮಿಥುನ್ ಕುಮಾರ್, ಬೆಳಗ್ಗೆ ಸಾವಿರಾರು ಸಂಖ್ಯೆಯ ಜನರು ತಹಶೀಲ್ದಾರ್ ಕಚೇರಿಗೆ ಮನವಿ ಸಲ್ಲಿಸಲು ಬಂದಾಗ ಪೊಲೀಸರು ಹಾಕಿದ್ದ ಬ್ಯಾರಿಗೇಡ್ನ್ನು ತಳ್ಳಿ ನುಗ್ಗಿದ್ದಾರೆ. ಈ ವೇಳೆ ನಮ್ಮ ನಾಲ್ಕು ಜನ ಪೊಲೀಸರಿಗೆ ಗಾಯಗಳಾಗಿವೆ. ಶಿಕಾರಿಪುರ ಪಟ್ಟಣದಲ್ಲಿ ಕೆಎಸ್ಆರ್ಪಿ ಸೇರಿದಂತೆ ಹೆಚ್ಚಿನ ಪೊಲೀಸ್ ಬಂದೋ ಬಸ್ತ್ ಮಾಡಲಾಗಿದೆ. ಸದ್ಯ ಪಟ್ಟಣ ಶಾಂತಿಯುತವಾಗಿದೆ. ಘಟನೆ ನಡೆದ ವಿಡಿಯೋವನ್ನು ನೋಡಿ ಮುಂದಿನ ಕ್ರಮ ಜರುಗಿಸುತ್ತೇವೆ ಎಂದು ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ತಿಳಿಸಿದ್ದಾರೆ.
ಇದನ್ನೂ ಓದಿ :ಯಡಿಯೂರಪ್ಪನವರ ನಿವಾಸದ ಮೇಲೆ ದಾಳಿ ಹಿಂದೆ ಕಾಂಗ್ರೆಸ್ ಪಿತೂರಿಯಿದೆ: ನಳಿನ್ ಕುಮಾರ್ ಕಟೀಲ್
ಯಾರ ಮೇಲು ಕ್ರಮ ತೆಗದುಕೊಳ್ಳುವುದು ಬೇಡ - ಯಡಿಯೂರಪ್ಪ: ತಪ್ಪು ಗ್ರಹಿಕೆಯಿಂದ ಬಂಜಾರ ಸಮುದಾಯದ ಜನರು ಶಿಕಾರಿಪುರದಲ್ಲಿ ನಮ್ಮ ನಿವಾಸದ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಹಾಗಾಗಿ ಯಾರ ಮೇಲೂ ಕ್ರಮ ಕೈಗೊಳ್ಳದಂತೆ ಪೊಲೀಸರಿಗೆ ತಿಳಿಸಿದ್ದೇನೆ. ಈ ಘಟನೆಯ ಹಿಂದೆ ಯಾರ ಪಿತೂರಿ ಇದೆ ಎನ್ನುವುದನ್ನು ಈ ಹಂತದಲ್ಲಿ ಹೇಳಲ್ಲ. ಇನ್ನೆರಡು ದಿನದಲ್ಲಿ ಶಿಕಾರಿಪುರಕ್ಕೆ ತೆರಳಿ ಸಮುದಾಯದ ಮುಖಂಡರ ಜೊತೆ ಮಾತುಕತೆ ನಡೆಸಿ ಅವರ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಇದನ್ನೂ ಓದಿ :ಬಿಎಸ್ವೈ ಮನೆ ಮೇಲೆ ಕಲ್ಲು ತೂರಾಟ.. ಘಟನೆ ಬಗ್ಗೆ ನನಗೆ ಸಂಪೂರ್ಣ ಮಾಹಿತಿ ಇಲ್ಲ ಎಂದ ಜೋಶಿ