ಶಿವಮೊಗ್ಗ:ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ, ಲಿಂಗಾಯತ ಸಮುದಾಯದ ಪ್ರಚಂಡ ನಾಯಕ, ರಾಜಕೀಯ ಕ್ಷೇತ್ರದ ಅವಿರತ ಹೋರಾಟಗಾರ.. ಇಷ್ಟೆಲ್ಲಾ ಬಣ್ಣನೆಗೆ ಒಳಗಾಗಿರುವ ಬಿ.ಎಸ್. ಯಡಿಯೂರಪ್ಪ ಅವರ ಕ್ಷೇತ್ರ ಶಿಕಾರಿಪುರ ಈ ಚುನಾವಣೆಯ ಪ್ರಮುಖ ಆಕರ್ಷಣೆ. ಕಾರಣ ಅವರು ಚುನಾವಣಾ ರಾಜಕೀಯದಿಂದ ನಿವೃತ್ತರಾಗಿದ್ದು, ಪುತ್ರ ಬಿ.ವೈ. ವಿಜಯೇಂದ್ರ ಅವರು ಕಣಕ್ಕಿಳಿಯುವ ಸಾಧ್ಯತೆ ಇದೆ. ಬಿಜೆಪಿ ಈ ಬಗ್ಗೆ ಯಾವುದೇ ಅಧಿಕೃತ ಪ್ರಕಟಣೆ ಮಾಡದೇ ಇರುವುದು ಇನ್ನಷ್ಟು ಬಿಸಿ ಹೆಚ್ಚಿಸಿದೆ.
ಶಿಕಾರಿಪುರ ಕ್ಷೇತ್ರ ಬಿಜೆಪಿ ಮತ್ತು ಕಾಂಗ್ರೆಸ್ಗೆ ಮಹತ್ವದ್ದಾಗಿವೆ. ಶಿಕಾರಿಪುರ ಉಳಿಸಿಕೊಳ್ಳಬೇಕು ಎಂದು ಬಿಜೆಪಿ ಪ್ರಯತ್ನಪಟ್ಟರೆ, ತಮ್ಮ ತೆಕ್ಕೆಗೆ ತೆಗೆದು ಕೊಳ್ಳಬೇಕು ಎಂದು ಕಾಂಗ್ರೆಸ್ ಪಣ ತೊಟ್ಟಿದೆ. ಈ ಬಾರಿ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಸ್ಪರ್ಧಿಸಲು, ಈ ಸ್ಥಾನಕ್ಕೆ ರಾಜ್ಯ ಬಿಜೆಪಿ ಉಪಾಧ್ಯಕ್ಷ, ಪುತ್ರ ಬಿ.ವೈ. ವಿಜಯೇಂದ್ರ ಸ್ಪರ್ಧೆ ಮಾಡುತ್ತಾರೆ ಎಂದು ಹೇಳಿ, ನಂತರ ಪಕ್ಷದ ತೀರ್ಮಾನದ ಅಂತಿಮ ಎಂದಿದ್ದರು.
ಶಿಕಾರಿಪುರ ಕ್ಷೇತ್ರವನ್ನು ಯಡಿಯೂರಪ್ಪ ಕಳೆದ 40 ವರ್ಷಗಳಿಂದ ಪ್ರತಿನಿಧಿಸುತ್ತಾ ಬಂದಿದ್ದಾರೆ. ಯಡಿಯೂರಪ್ಪ ಅವರ ರಾಜಕೀಯ ಜೀವನ ಶುರುವಾಗಿದ್ದೇ ಇಲ್ಲಿಂದ. ಪುರಸಭೆಯ ಸದಸ್ಯ, ಅಧ್ಯಕ್ಷ, ಶಾಸಕ, ಉಪ ಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಯಡಿಯೂರಪ್ಪ ಅವರು ಈ ಬಾರಿ ಶಿಕಾರಿಪುರ ಕ್ಷೇತ್ರವನ್ನು ಮಗನಿಗೆ ಬಿಟ್ಟುಕೊಡುವ ಮಾತನ್ನು ಆಡಿದ್ದಾರೆ.
ಶಿಕಾರಿಪುರದಲ್ಲಿ 5 ಬಾರಿ ಕಾಂಗ್ರೆಸ್, ಒಮ್ಮೆ ಸೋಷಿಯಲಿಸ್ಟ್ ಪಾರ್ಟಿ ಹಾಗೂ 9 ಬಾರಿ ಬಿಜೆಪಿ ಜಯ ಗಳಿಸಿದೆ. ಕೆಜೆಪಿ ಒಂದು ಬಾರಿ ಜಯಿಸಿದೆ. ಪಕ್ಷದಲ್ಲಿನ ಸಂಘರ್ಷದಿಂದಾಗಿ ಬಿಜೆಪಿ ಕರ್ನಾಟಕ ಜನತಾ ಪಕ್ಷ(ಕೆಜೆಪಿ)ದ ಚಿಹ್ನೆಯಡಿ ಯಡಿಯೂರಪ್ಪ ಅವರೇ ಸ್ಪರ್ಧಿಸಿ ಇಲ್ಲಿ ಜಯ ಗಳಿಸಿದ್ದರು.
ಹಿಂದುಳಿದ ಅಣೆಪಟ್ಟಿ ಅಳಿಸಿದ ಬಿಎಸ್ವೈ:ಶಿಕಾರಿಪುರ ತಾಲೂಕು ನಂಜುಂಡಪ್ಪ ವರದಿಯ ಪ್ರಕಾರ, ಅತ್ಯಂತ ಹಿಂದುಳಿದ ತಾಲೂಕು ಎಂಬ ಹಣೆಪಟ್ಟಿ ಕಟ್ಟಿಕೊಂಡಿತ್ತು. ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ಮೇಲೆ ಶಿಕಾರಿಪುರವನ್ನು ಜಿಲ್ಲಾ ಕೇಂದ್ರಕ್ಕೆ ಕಡಿಮೆ ಇಲ್ಲದಂತೆ ಅಭಿವೃದ್ದಿ ಮಾಡಿದ್ದಾರೆ. ಜಿಲ್ಲಾ ಕೇಂದ್ರದ ಎಲ್ಲಾ ಸೌಕರ್ಯವನ್ನು ಶಿಕಾರಿಪುರಕ್ಕೆ ನೀಡಿದ್ದಾರೆ. ತಾಲೂಕು ಆಡಳಿತ ಭವನ, ತಾಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿದರು.
ರಸ್ತೆಗಳ ಅಗಲಿಕರಣ, ಮನೆ ಮನೆಗೆ ಕುಡಿಯುವ ನೀರು. ರೈಲು ಮಾರ್ಗ ತರುವ ಯತ್ನ ಕೂಡ ಮಾಡಿದರು. ಇದರಿಂದ ಶಿಕಾರಿಪುರ ಸಾಕಷ್ಟು ಅಭಿವೃದ್ದಿಯಾಗಿದೆ. ಕಳೆದ ವರ್ಷ ತಾಲೂಕಿನಲ್ಲಿ ಏತನೀರಾವರಿ ಯೋಜನೆ ಜಾರಿಗೊಳಿಸಿದ್ದಾರೆ. ಇದರಿಂದ ನೂರಾರು ಕೆರೆ ತುಂಬಿದೆ. ಬಿಜೆಪಿ ಕಾರ್ಯಕರ್ತರು ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರನ್ನು ಗೆಲ್ಲಿಸುವ ಪಣ ತೊಟ್ಟಿದ್ದಾರೆ.
ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಸೋಲಿಸಲು ಸಾಕಷ್ಟು ಪ್ರಯತ್ನ ನಡೆಸಿತ್ತು. ಸಿದ್ದರಾಮಯ್ಯನವರು ತಮ್ಮ ಅಭಿವೃದ್ದಿ ಕಾರ್ಯಕ್ರಮಗಳ ಮೂಲಕ ಕ್ಷೇತ್ರದ ಜನರ ಮನಗೆದ್ದು ಚುನಾವಣೆ ನಡೆಸಿದ್ದರು. ಬಿಜೆಪಿಯನ್ನು ಸೋಲಿಸಲು ಸಿದ್ದರಾಮಯ್ಯ ಆದಿಯಾಗಿ ಎಲ್ಲಾ ಮಂತ್ರಿಗಳು ಶಿಕಾರಿಪುರ ಕ್ಷೇತ್ರದಲ್ಲಿ ಠಿಕಾಣಿ ಹಾಕಿ ಮತದಾರರ ಮನಗೆಲ್ಲುವ ಪ್ರಯತ್ನ ನಡೆಸಿದ್ದರು. ಶಿಕಾರಿಪುರದಲ್ಲಿ ಕಾಂಗ್ರೆಸ್ನ ಸಂಪ್ರದಾಯಿಕ ಮತಗಳನ್ನು ಮತ್ತೆ ಕ್ರೋಢೀಕರಿಸುವ ಯತ್ನವನ್ನು ಚುನಾವಣೆಯಲ್ಲಿ ಮಾಡಲಾಗಿತ್ತು. ಕ್ಷೇತ್ರದಲ್ಲಿ ಕಾಂಗ್ರೆಸ್ಗೆ ಸಾಂಪ್ರದಾಯಿಕವಾಗಿ ಕನಿಷ್ಠ 50 ಸಾವಿರ ಮತಗಳಿವೆ.