ಶಿವಮೊಗ್ಗ: ಶರಾವತಿ ನದಿಗೆ ಲಿಂಗನಮಕ್ಕಿ ಅಣೆಕಟ್ಟು ನಿರ್ಮಾಣದ ಸಮಯದಲ್ಲಿ ಮುಳುಗಡೆಯಾದ ಜಮೀನಿಗೆ ಪರಿಹಾರವಾಗಿ ನೀಡಿದ್ದ ಭೂಮಿಗೆ ಹಕ್ಕನ್ನು ನೀಡದೇ ಸರ್ಕಾರ ಸತಾಯಿಸುತ್ತಿದೆ. ಇದರಿಂದ ಬೇಸತ್ತ ಶರಾವತಿ ಸಂತ್ರಸ್ಥರು ಶಿವಮೊಗ್ಗದ ಆಲ್ಕೊಳ ಸರ್ಕಲ್ನಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿವರೆಗೆ ಪಾದಯಾತ್ರೆ ನಡೆಸಿದರು. ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಕೂಡಲೇ ತಮಗೆ ಭೂಮಿ ಹಕ್ಕು ನೀಡಬೇಕು ಎಂದು ಆಗ್ರಹಿಸಿದರು.
1962ರಲ್ಲಿ ಲಿಂಗನಮಕ್ಕಿ ಜಲಾಶಯ ನಿರ್ಮಾಣಕ್ಕಾಗಿ ಮುಳುಗಡೆಯಾದವರಿಗೆ ಇದುವರೆಗೆ ಭೂಮಿಯ ಹಕ್ಕನ್ನೇ ನೀಡಿಲ್ಲ. ಜನರು ಮುಳುಗಡೆಯಾದಾಗ ಅವರಿಗಾಗಿ ಸರ್ಕಾರ ಭೂಮಿಯನ್ನೇನೋ ಗುರುತಿಸಿತು. ಅದರೆ ಸಂತ್ರಸ್ಥರಿಗೆ ಮೀಸಲಿಟ್ಟ ಜಾಗವನ್ನು ಬಳಿಕ ಅರಣ್ಯ ಇಲಾಖೆಗೆ ನೀಡಲಾಯಿತು. ಅಂದಿನಿಂದ ಇಂದಿನವರೆಗೆ ಶರಾವರಿ ಸಂತ್ರಸ್ಥರಿಗೆ ಭೂಮಿಯ ಹಕ್ಕೇ ಸಿಕ್ಕಿಲ್ಲ. ಇದರಿಂದ ಬೇಸತ್ತ ಶರಾವತಿ ಮುಳುಗಡೆ ಸಂತ್ರಸ್ಥರು ಇದೀಗ ಪಾದಯಾತ್ರೆ ನಡೆಸುವ ಮೂಲಕ ಸರ್ಕಾರದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.